

ಕೊಳ್ಳೇಗಾಲ: ಹೆಚ್ಚುತ್ತಿರುವ ರಸ್ತೆ ಅಪಘಾತಗಳಲ್ಲಿ ಶೇ.50ರಷ್ಟು ಕುಡಿದು ವಾಹನ ಚಾಲನೆ ಮಾಡಿರುವುದರಿಂದಲೇ ಸಂಭವಿಸಿದೆ ಎಂಬುದು ಬೆಳಕಿಗೆ ಬಂದ ಹಿನ್ನ್ನೆಲೆಯಲ್ಲಿ ಕೊಳ್ಳೇಗಾಲ ಪೊಲೀಸರು ಕುಡಿದು ವಾಹನ ಚಾಲನೆ (ಡ್ರಂಕ್ ಆ್ಯಂಡ್ ಡ್ರೈವ್) ಮಾಡುವುದನ್ನು ನಿಯಂತ್ರಿಸಲು ಕ್ರಮವಹಿಸಿದ್ದಾರೆ.
ಪಾನಮತ್ತರಾಗಿ ವಾಹನ ಚಾಲಕರು ಪದೇ ಪದೆ ಅಪಘಾತಕ್ಕೆ ಕಾರಣವಾಗುತ್ತಿದ್ದಾರೆ ಹಾಗೂ ಸಾವು-ನೋವು ಸಂಭವಿಸುತ್ತಿರುವುದರಿಂದ ಈ ವರ್ಷದ ಆರಂಭದಲ್ಲೇ ದಂಡ ಪ್ರಕ್ರಿಯೆಯನ್ನು ಚುರುಕುಗೊಳಿಸಲಾಗಿದೆ. ಕುಡಿದು ವಾಹನ ಚಾಲನೆ ಮಾಡಬಾರದೆಂದು ಪೊಲೀಸ್ ಇಲಾಖೆ ವತಿಯಿಂದ ಜಾಗೃತಿ ಕಾರ್ಯಕ್ರಮಗಳು ನಡೆದಿದ್ದರೂ, ಅಪಘಾತ ಪ್ರಕರಣಗಳಿಗೆ ಸಂಪೂರ್ಣವಾಗಿ ಕಡಿವಾಣ ಹಾಕಲು ಸಾಧ್ಯವಾಗುತ್ತಿಲ್ಲ.
ಕೊಳ್ಳೇಗಾಲ ಪಟ್ಟಣ ಹಾಗೂ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕುಡಿದು ವಾಹನಗಳನ್ನು ಚಲಾಯಿಸುವರ ಮೇಲೆ ಪ್ರಕರಣಗಳನ್ನು ದಾಖಲಿಸಿ ನ್ಯಾಯಾಲಯದಲ್ಲಿ ದಂಡ ಕಟ್ಟಿಸಲಾಗುತ್ತಿದೆ. ಆದರೂ, ಇದರಿಂದ ಎಚ್ಚೆತ್ತುಕೊಳ್ಳದ ಕೆಲವು ಪುಂಡರು ಪಟ್ಟಣದ ಪೀಸ್‌ಪಾರ್ಕ್ ಪಕ್ಕದ ಎಲ್‌ಐಸಿ ಕಚೇರಿ ರಸ್ತೆ, ಕೆಂಪನಪಾಳ್ಯ ಚಾನಲ್ ರಸ್ತೆ, ಕೊಂಗಳಕೆರೆ ಸಮೀಪ, ದಾಸನಪುರ ಸಮೀಪದ ಬೈಪಾಸ್ ರಸ್ತೆ, ಹೊಸ ಅಣಗಳ್ಳಿ ರಸ್ತೆ, ಮುಳ್ಳೂರು-ಕಲಿಯೂರು ರಸ್ತೆ, ಇನ್ನಿತರ ಸಾರ್ವಜನಿಕ ಸ್ಥಳಗಳಲ್ಲಿ ಗುಂಪು ಗುಂಪಾಗಿ ಕುಳಿತು ಮದ್ಯ ಸೇವನೆ ಮಾಡುತ್ತಿದ್ದಾರೆ. ಈ ಮಾಹಿತಿ ತಿಳಿದ ಪೊಲೀಸರು ಸ್ಥಳಕ್ಕೆ ತೆರಳಿ ಕ್ರಮವಹಿಸುತ್ತಿದ್ದಾರೆ. ಅದಲ್ಲದೆ, ಪೊಲೀಸ್ ಇಲಾಖೆ ಅಪ್ರಾಪ್ತರಿಂದ ವಾಹನ ಚಾಲನೆ ಹಾಗೂ ರಸ್ತೆಯಲ್ಲಿ ಬೈಕ್‌ಗಳ ವ್ಹೀಲಿಂಗ್ ಮಾಡುವವರ ಮೇಲೂ ನಿಗಾವಹಿಸಿದ್ದು, ಅಂತಹವರ ಮೇಲೆಯೂ ಪ್ರಕರಣ ದಾಖಲಿಸುತ್ತಿದ್ದಾರೆ.
ಸಾವಿನ ಪ್ರಕರಣ:
ರಸ್ತೆ ಅಪಘಾತದಲ್ಲಿ 2022ರಲ್ಲಿ 8, 2023ರಲ್ಲಿ 6, 2024ರ ವರ್ಷದ ಆರಂಭದಲ್ಲೇ 2 ಸಾವು ಸಂಭವಿಸಿದೆ. ಈ ಸಂಬಂಧ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದರಲ್ಲಿ ಶೇ.50ರಷ್ಟು ಕುಡಿದು ವಾಹನ ಚಾಲನೆ ಮಾಡಿರುವ ಅಂಶಗಳು ಕಂಡು ಬಂದಿವೆ ಎಂದು ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ.
ಕುಡಿದು ವಾಹನ ಚಾಲನೆ ಮಾಡಿ ಸವಾರರು ಪೊಲೀಸರಿಗೆ ಸಿಕ್ಕಿ ಬಿದ್ದ ಪ್ರಕರಣಗಳು ಕಳೆದ ವರ್ಷಕ್ಕಿಂತ ಈ ವರ್ಷದ ಆರಂಭದಲ್ಲೇ ಹೆಚ್ಚಾಗಿ ಕಂಡು ಬಂದಿವೆ. ಕೊಳ್ಳೇಗಾಲ ಪಟ್ಟಣ ಪೊಲೀಸ್ ಠಾಣೆಯಲ್ಲಿ 2023ರಲ್ಲಿ ಒಟ್ಟು 14 ಪ್ರಕರಣಗಳು ಡ್ರಂಕ್ ಆ್ಯಂಡ್ ಡ್ರೈವ್ ಪ್ರಕರಣ ದಾಖಲಾಗಿತ್ತು. 2024ರ ವರ್ಷದ ಆರಂಭದ ಫೆಬ್ರವರಿಯಲ್ಲಿ 11 ಪ್ರಕರಣ ದಾಖಲಾಗಿದೆ. ಹಾಗೆಯೇ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ 2023 ರಲ್ಲಿ 29 ಪ್ರಕರಣಗಳು ದಾಖಲಾಗಿದೆ. 2024 ರಲ್ಲಿ 8 ಪ್ರಕರಣಗಳು ದಾಖಲಾಗಿವೆ.
ಅಪ್ರಾಪ್ತರಿಂದ ವಾಹನ ಚಾಲನೆ:
ಪಟ್ಟಣದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಲವು ಪುಂಡರು ಬೈಕ್ ವ್ಹಿಲೀಂಗ್ ಹುಚ್ಚಾಟ ಮೆರೆಯುತ್ತಿದ್ದಾರೆ. ಇದ್ದರಿಂದ ರಸ್ತೆಯಲ್ಲಿ ಸಂಚರಿಸುವ ವಾಹನಗಳ ನಡುವೆ ಅಪಘಾತ ನಡೆಯುವ ಸಂಭವ ಹೆಚ್ಚಿರುತ್ತದೆ ಹಾಗೂ ದಾರಿಹೋಕರು ಆತಂಕದಲ್ಲೇ ಸಂಚರಿಸುವ ಪರಿಸ್ಥಿತಿ ಇದೆ. ಹೀಗಾಗಿ ಪೊಲೀಸ್ ಇಲಾಖೆ ಇಂತಹವರ ಮೇಲೆ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಅಪ್ರಾಪ್ತರು ಬೈಕ್ ಚಾಲನೆ ಮಾಡುವುದು ಹೆಚ್ಚಾಗಿದ್ದು, ಶಾಲಾ-ಕಾಲೇಜು ಬಿಡುವ ಸಂದರ್ಭದಲ್ಲಿ ಅಪ್ರಾಪ್ತರು ಬೈಕ್ ಚಾಲನೆ ಹೆಚ್ಚಾಗಿದೆ. ಈ ಬಗ್ಗೆ ಪೊಲೀಸರು ಕ್ರಮವಹಿಸಬೇಕೆಂದು ಪ್ರಜ್ಞಾವಂತರು ಒತ್ತಾಯಿಸಿದ್ದಾರೆ. 2024ರಲ್ಲಿ ಪಟ್ಟಣ ಪೊಲೀಸ್ ಠಾಣೆಯಲ್ಲಿ 2 ಬೈಕ್ ವ್ಹೀಲಿಂಗ್ ಪ್ರಕರಣ ದಾಖಲಾಗಿದೆ. ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅಪ್ರಾಪ್ತ ಬೈಕ್ ಚಲಾಯಿಸುತ್ತಿದ್ದ 1 ಪ್ರಕರಣ ದಾಖಲಾಗಿದೆ. ಪೊಲೀಸ್ ಇಲಾಖೆ ಇವೆರಡು ಪ್ರಕರಣದ ಬಗ್ಗೆ ಹೆಚ್ಚು ನಿಗಾವಹಿಸಿದರೆ ಅಪಘಾತ ಪ್ರಕರಣಗಳನ್ನು ನಿಯಂತ್ರಿಸಬಹುದು ಜನರ ಅಭಿಪ್ರಾಯವಾಗಿದೆ.
ಇತ್ತೀಚೆಗೆ ರಸ್ತೆ ಅಪಘಾತ ಪ್ರಕರಣಗಳು ಹೆಚ್ಚಾಗುತ್ತಿವೆ. ಇದರಲ್ಲಿ ಶೇ.80 ರಷ್ಟು ಬೈಕ್ ಅಪಘಾತಗಳಾಗಿದೆ. ಇದಕ್ಕೆ ಕಾರಣ ಶೇ.50 ರಷ್ಟು ಕುಡಿದು ವಾಹನ ಚಾಲನೆ ಮಾಡುವುದರಿಂದ ಸಂಭವಿಸುತ್ತಿವೆ ಎಂದು ತಿಳಿದು ಬಂದಿದೆ. ಈ ಹಿನ್ನೆಲೆಯಲ್ಲಿ ಅಪಘಾತ ಪ್ರಕರಣ ನಿಯಂತ್ರಣಕ್ಕೆ ಡ್ರಂಕ್ ಆ್ಯಂಡ್ ಡ್ರೈವ್ ಮಾಡುವವರನ್ನು ಬೆನ್ನತ್ತಿ ಕ್ರಮವಹಿಸಲಾಗುತ್ತಿದೆ. ಸುರಕ್ಷತೆ ಹಾಗೂ ಕಾನೂನು ಪಾಲನೆ ದೃಷ್ಟಿಯಿಂದ ವಾಹನ ಸವಾರರು ಕುಡಿದು ಚಾಲನೆ ಮಾಡಬಾರದು.ಪದ್ಮಿನಿ ಸಾಹು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಚಾಮರಾಜನಗರ