

ಕೊಳ್ಳೇಗಾಲ: ಮದುವೆ ಹಿಂದಿನ ದಿನ ನಾಪತ್ತೆಯಾಗಿದ್ದ ವರ, ಒಂದು ತಿಂಗಳ ಬಳಿಕ ವಧುವಿನ ಸ್ವಂತ ತಂಗಿಯ ಜತೆ ವಿವಾಹವಾಗಿ ಬುಧವಾರ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರತ್ಯಕ್ಷವಾಗಿದ್ದಾನೆ.
ಶಂಕನಪುರ ಗ್ರಾಮದ ನಿವಾಸಿ ದಿನೇಶ್ ಕುಮಾರ್ ಅವರ ಪುತ್ರಿ ದಿವ್ಯಾಶ್ರೀ, ತಾಲೂಕಿನ ಕುಂತೂರು ಗ್ರಾಮದ ಮಲ್ಲರಾಜು ಎಂಬುವರ ಪುತ್ರ ಮಹೇಶ್‌ಎಂಬಾತನಿಗೆ ಬೆಂಗಳೂರಿನಲ್ಲಿ ಪರಿಚಯವಾಗಿ ಪ್ರೇಮಾಂಕುರವಾಗಿತ್ತು. ನಂತರ 5 ವರ್ಷಗಳಿಂದ ಪ್ರೀತಿಸುತ್ತಿದ್ದರು. ಆದರೆ ಯುವತಿಯನ್ನು ಮದುವೆ ಮಾಡಿಕೊಳ್ಳಲು ನಿರಾಕರಿಸಿದ್ದ ಮಹೇಶ್‌ನಿಗೆ ಎರಡು ಊರಿನ ಯಜಮಾನರು ಬುದ್ಧಿ ಹೇಳಿ ನ.27 ರಂದು ಚಿಲಕವಾಡಿ ದೇವಾಲಯದಲ್ಲಿ ಮದುವೆ ನಿಶ್ಚಯ ಮಾಡಿದ್ದರು.
ಮದುವೆಗೆ ಎಲ್ಲ ಸಿದ್ಧತೆಗಳು ನಡೆದಿತ್ತು. ಆದರೆ, ಮದುವೆ ಹಿಂದಿನ ದಿನ ಮಹೇಶ್ ಫೋನ್ ಸ್ವೀಚ್ ಆಫ್ ಮಾಡಿಕೊಂಡು ಓಡಿ ಹೋಗಿದ್ದ. ನಂತರ ವಧು ಕೊಳ್ಳೇಗಾಲ ಪೊಲೀಸ್ ಠಾಣೆಗೆ ದೂರು ನೀಡಿ, ಮಹೇಶ್ ಪತ್ತೆ ಮಾಡಿಕೊಡುವಂತೆ ಮನವಿ ಮಾಡಿದ್ದಳು. ಆ ನಂತರ ಡಿ.10 ರಂದು ಕುಂತೂರು ಗ್ರಾಮದಲ್ಲಿದ್ದ ಮಹೇಶ್ ಮನೆಯ ಮುಂದೆ ಪ್ರತಿಭಟಿಸಿದ್ದಳು. ಸ್ಥಳಕ್ಕೆ ಆಗಮಿಸಿದ ಪೊಲೀಸರು ಆ ತನನ್ನು ಹುಡುಕಿಕೊಡುವುದಾಗಿ ಭರವಸೆ ನೀಡಿದ್ದರು.
ಆದರೀಗ ಈ ಪ್ರಕರಣ ದೊಡ್ಡ ತಿರುವು ಪಡೆದುಕೊಂಡಿದ್ದು, ಬುಧವಾರ ಮಹೇಶ್ ತಾನು ಮದುವೆ ಆಗಬೇಕಿದ್ದ ದಿವ್ಯಾಶ್ರೀ ತಂಗಿ ಮಂಜುಳಾ ಎಂಬುವರನ್ನು ವಿವಾಹ ಮಾಡಿಕೊಂಡು ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರತ್ಯಕ್ಷವಾಗಿದ್ದಾನೆ.
ದಿವ್ಯಾಶ್ರೀ ಹಾಗೂ ಆಕೆಯ ತಂಗಿ ಮಂಜುಳಾ ಇವರಿಬ್ಬರನ್ನೂ ಮಹೇಶ್ ಪ್ರೀತಿಸುತ್ತಿದ್ದ ಎನ್ನಲಾಗಿದೆ. ನ್ಯಾಯ ಕೇಳಿಕೊಂಡು ನೊಂದ ಯುವತಿ ಪಟ್ಟಣ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ. ಪಿಎಸ್‌ಐ ಮಹೇಶ್ ವಿಚಾರಣೆ ನಡೆಸುತ್ತಿದ್ದಾರೆ.