ಸ್ವಾಮಿಗೆ 48 ದ್ರವ್ಯಗಳ ಅಭಿಷೇಕ

27-kgl-2.
Published on

ಕೊಳ್ಳೇಗಾಲ: ಆರಿದ್ರೋತ್ಸವ ಪ್ರಯುಕ್ತ ಪಟ್ಟಣದ ಶ್ರೀ ಮರಳೇಶ್ವರಸ್ವಾಮಿ ದೇವಾಲಯದಲ್ಲಿ ಶ್ರೀ ಶಿವಕಾಮಿಸಮೇತ, ಶ್ರೀ ನಟರಾಜ ಸ್ವಾಮಿಗೆ ಬುಧವಾರ ಶ್ರದ್ಧಾ-ಭಕ್ತಿಯಿಂದ 48 ದ್ರವ್ಯಗಳು ಹಾಗೂ ವಿವಿಧ ಫಲಗಳ ಅಭಿಷೇಕ ನೆರವೇರಿಸಲಾಯಿತು.

ಶ್ರೀ ಮೀನಾಕ್ಷಿ ದೇವಾಲಯ ಮುಂಭಾಗ ಶ್ರೀ ಶಿವಕಾಮಿ ಸಮೇತ ನಟರಾಜ ಸ್ವಾಮಿಯ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಲಾಗಿತ್ತು. ಭಕ್ತರು ಪೂಜೆ ವೀಕ್ಷಣೆ ಮಾಡಲು ದೇವಾಲಯದ ಸುತ್ತಲೂ ಅವಕಾಶ ಕಲ್ಪಿಸಲಾಗಿತ್ತು. ಮುಂಜಾನೆಯಿಂದಲೇ ಪಂಚಾಮೃತಾಭಿಷೇಕ, ಶಂಖಾಭಿಷೇಕ, ಕ್ಷೀರಾಭಿಷೇಕ, ವಿವಿಧ ಫಲಾಭಿಷೇಕ, ಸುಗಂಧ ದ್ರವ್ಯಾಭಿಷೇಕ, ನಾರಿಕೇಳಸಲಿಲಾಭಿಷೇಕ (ಎಳನೀರಿನಿಂದ) ಅನ್ನಾಭಿಷೇಕ, ಇಕ್ಷುರಸ (ಕಬ್ಬಿನಹಾಲು) ಅಭಿಷೇಕ, ದೀಪಾರಾಧನೆ ಹೀಗೆ 48 ರೀತಿಯ ದ್ರವ್ಯಗಳು ಹಾಗೂ ವಿವಿಧ ಫಲಗಳಿಂದ ಸ್ವಾಮಿಗೆ ಅಭಿಷೇಕ ಮಾಡಲಾಯಿತು. ಈ ವೇಳೆ ನೆರೆದಿದ್ದ ಭಕ್ತರು ಶ್ರೀ ಸ್ವಾಮಿಯ ಪಾರಾಯಣ ಮಾಡುತ್ತ ಪೂಜಾ ಕೈಂಕರ್ಯಗಳನ್ನು ವೀಕ್ಷಣೆ ಮಾಡಿದರು.

ದೇವಾಲಯದ ಪ್ರಧಾನ ಅರ್ಚಕ ನಾಗೇಂದ್ರ ಭಟ್ ಮಾತನಾಡಿ, ಅಂದಕಾಸುರ ಎಂಬ ರಾಕ್ಷಸ ಇಡೀ ಜಗತ್ತನ್ನು ಕತ್ತಲು ಮಾಡಿ ಮೆರೆಯುತ್ತಿದ್ದ. ಆತನನ್ನು ಸಂಹರಿಸಲು ಸಕಲ ದೇವರು ಈಶ್ವರನ ಮೊರೆ ಹೋದರು. ಶಿವನು ನಟರಾಜನ ರೂಪತಾಳಿ ರಾಕ್ಷಸನನ್ನು ಸಂಹರಿಸಿದ್ದರಿಂದ ಆರಿದ್ರ ನಕ್ಷತ್ರದ ದಿನದಲ್ಲಿ ಭೂಮಿಗೆ ಬೆಳಕು ಬರುತ್ತದೆ. ಈ ಹಿನ್ನೆಲೆ ಆರಿದ್ರೋತ್ಸವ ಆಚರಣೆ ಮಾಡಲಾಗುತ್ತಿದೆ ಎಂದರು. ಭಕ್ತರಿಗೆ ಅಭಿಷೇಕದ ಪ್ರಸಾದವನ್ನು ವಿತರಣೆ ಮಾಡಲಾಯಿತು. ಸಂಜೆ ವೇಳೆಗೆ ದೇವರಿಗೆ ವಿಶೇಷ ಪೂಜಾ ಕೈಂಕರ್ಯ ಸಲ್ಲಿಸಲಾಯಿತು. ಎಲ್ಲ ಪೂಜೆಯ ಸಾರಥ್ಯವನ್ನು ದೇವಾಲಯದ ಪ್ರಧಾನ ಅರ್ಚಕ ಡಾ.ನಾಗೇಂದ್ರ ಭಟ್, ಸಹ ಅರ್ಚಕ ಶಿವರಾಮ ಭಟ್ ವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net