

ಕೊಳ್ಳೇಗಾಲ: ರೈತರ ವಿರೋಧಿ ಹೇಳಿಕೆ ನೀಡಿರುವ ಸಕ್ಕರೆ ಸಚಿವ ಶಿವಾನಂದ ಪಾಟೀಲ್ ಕೂಡಲೇ ರೈತರ ಕ್ಷಮೆಯಾಚಿಸುವಂತೆ ಆಗ್ರಹಿಸಿ ಕರ್ನಾಟದ ರಾಜ್ಯ ರೈತ ಸಂಘದ ಹನೂರು ಹಾಗೂ ಕೊಳ್ಳೇಗಾಲ ಘಟಕದ ಸದಸ್ಯರು ಬುಧವಾರ ಪಟ್ಟಣದಲ್ಲಿ ಮೆರವಣಿಗೆ ಮಾಡುವ ಮೂಲಕ ಪ್ರತಿಭಟನೆ ನಡೆಸಿದರು.
ಪಟ್ಟಣದ ಆರ್‌ಎಂಸಿ ಕಚೇರಿ ಆವರಣದಲ್ಲಿ ಸಮಾವೇಶಗೊಂಡ ರೈತ ಸಂಘದ ಸದಸ್ಯರು, ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಸಾಗಿ ಸರ್ಕಾರ ಹಾಗೂ ಸಚಿವರ ವಿರುದ್ಧ ಘೋಷಣೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು. ಅಂತಿಮವಾಗಿ ಪ್ರತಿಭಟನಾಕಾರರು ತಾಲೂಕು ಕಚೇರಿಗೆ ತೆರಳಿ ಉಪವಿಭಾಗಧಿಕಾರಿ ಬಿ.ಆರ್. ಮಹೇಶ್ ಅವರಿಗೆ ಶಿವಾನಂದ ಪಾಟೀಲ್ ಅವರನ್ನು ಸಚಿವ ಸಂಪುಟದಿಂದ ವಜಾಗೊಳಿಸುವಂತೆ ಮನವಿ ಪತ್ರ ಸಲ್ಲಿಸಿದರು.
ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಾಸ್ಕರ್, ಜಿಲ್ಲಾ ಖಾಯಂ ಸದಸ್ಯ ಬಸವರಾಜು ರವಿನಾಯ್ಡು, ಗೌರವಾಧ್ಯಕ್ಷ ಶಿವರಾಮು, ಕೊಳ್ಳೇಗಾಲ ತಾಲೂಕು ಅಧ್ಯಕ್ಷ ಎಂ. ಶಿವಮಲ್ಲು, ಹನೂರು ರೈತ ಸಂಘದ ಅಧ್ಯಕ್ಷ ಅಮ್ಜದ್ ಖಾನ್, ಲೋಕೇಶ್, ಮಾದಮ್ಮ, ಕುಮಾರ್, ಪೆರಿಯನಾಯಗಂ, ಜಾನ್‌ಕೆನಡಿ, ಚಂದ್ರಶೇಖರ್, ಲಾರೆನ್ಸ್, ಕಚೇರಿ ಮಹದೇವ ಇದ್ದರು.