

ಕೊಳ್ಳೇಗಾಲ: ಕೇಂದ್ರ ಹಾಗೂ ರಾಜ್ಯ ಸರ್ಕಾರ ಜಾರಿಗೆ ತರುವ ಪ್ರತಿಯೊಂದು ಜನಪರ ಯೋಜನೆಯು ಕಾರ್ಯರೂಪಕ್ಕೆ ಬರುವುದು ಗ್ರಾಮ ಪಂಚಾಯಿತಿ ಮೂಲಕ. ಹಳ್ಳಿಗಳ ಅಭಿವೃದ್ಧಿಯಿಂದ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ. ಆದರೆ, ಇಲ್ಲಿನ 5 ಗ್ರಾಮ ಪಂಚಾಯಿತಿಗಳಿಗೆ ಪೂರ್ಣಾವಧಿ ಪಿಡಿಒಗಳಿಲ್ಲದೇ ಅಭಿವೃದ್ಧಿ ಕುಂಠಿತಗೊಂಡಿದೆ.
ಈ ಹಿಂದೆ ರಾಜ್ಯಕ್ಕೆ ಕೊಳ್ಳೇಗಾಲ ಅತಿದೊಡ್ಡ ತಾಲೂಕು ಆಗಿತ್ತು. ಪ್ರಸ್ತುತ ಜಿಲ್ಲೆಯ ಉಪವಿಭಾಗ ಕೇಂದ್ರವೂ ಹೌದು. ಟಗರಪುರ ಗ್ರಾಮದಿಂದ ಹಿಡಿದು ತಮಿಳುನಾಡು ಗಡಿ ಗೋಪಿನಾಥಂವರೆಗಿನ ಸುಮಾರು 326 ಹಳ್ಳಿಗಳ, 43 ಪಂಚಾಯಿತಿಗಳನ್ನು ಒಳಗೊಂಡು ತಾಲೂಕು ಪಂಚಾಯಿತಿ ಕೇಂದ್ರವಾಗಿತ್ತು. ಹನೂರು ತಾಲೂಕು ವಿಜನೆಗೊಂಡ ಬಳಿಕ 16 ಗ್ರಾಮ ಪಂಚಾಯಿತಿ, ಸೋಲಿಗರ ಸಮುದಾಯದ 4 ಪೋಡುಗಳು ಸೇರಿದಂತೆ 98 ಗ್ರಾಮಗಳಿದ್ದು, 2 ವಿಧಾನಸಭಾ ಕ್ಷೇತ್ರಕ್ಕೆ ಒಳಪಟ್ಟಿದೆ.
ಗ್ರಾಮ ಪಂಚಾಯಿತಿಗಳಲ್ಲಿ ಪೂರ್ಣಾವಧಿಯ ಪಿಡಿಒ ಇದ್ದರೆ ಎಲ್ಲ ಕೆಲಸ ಸುಲಲಿತವಾಗಿ ನಡೆಯುತ್ತದೆ. ಸ್ವಚ್ಛತೆ, ಅಭಿವೃದ್ಧಿ ಕಾಮಗಾರಿಗಳು, ಸರ್ಕಾರಿ ಯೋಜನೆಗಳ ಅನುಷ್ಠಾನ ಹಾಗೂ ಜನಸಾಮಾನ್ಯರ ಕಾರ್ಯಗಳು ಸಕಾಲಕ್ಕೆ ನಡೆಯುತ್ತದೆ. ಆದರೆ, ಕೊಳ್ಳೇಗಾಲದ 16 ಗ್ರಾಮ ಪಂಚಾಯಿತಿಗಳ ಪೈಕಿ 5 ಪ್ರಮುಖ ಪಂಚಾಯಿತಿಗಳಿಗೆ ಪೂರ್ಣಾವಧಿಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಲ್ಲ. ಇದರಿಂದಾಗಿ ಪಂಚಾಯಿತಿ ಮಟ್ಟದಲ್ಲಿ ಅಭಿವೃದ್ಧಿ ಕಾಮಗಾರಿಗಳು ಕುಂಠಿತವಾಗಿದ್ದು, ಆಡಳಿತ ವ್ಯವಸ್ಥೆಯೂ ಹದಗೆಟ್ಡಿದೆ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸುತ್ತಾರೆ.
5 ಗ್ರಾಪಂಗಳಿಗೆ ಪಿಡಿಒಗಳಿಲ್ಲ:
ಸತ್ತೇಗಾಲ, ಮುಳ್ಳೂರು, ಕುಂತೂರು, ಮಧುವನಹಳ್ಳಿ, ದೊಡ್ಡಿಂದುವಾಡಿ ಈ 5 ಗ್ರಾಮ ಪಂಚಾಯಿತಿಗಳಿಗೆ ಕಾಯಂ ಪಿಡಿಒ ಇಲ್ಲ. ಈ ಹಿನ್ನೆಲೆಯಲ್ಲಿ ಜಿಪಂ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಹಾಗೂ ತಾಲೂಕು ಪಂಚಾಯಿತಿ ಇಒ ಇತರ ಗ್ರಾಮ ಪಂಚಾಯಿತಿ ಪಿಡಿಒಗಳಿಗೆ ಜವಾಬ್ದಾರಿ ವಹಿಸಿದ್ದಾರೆ. ಈ ಪಿಡಿಒಗಳು ವಾರದ ಮೂರು ದಿನಗಳು ತಮ್ಮ ಮೂಲ ಪಂಚಾಯಿತಿಗಳಲ್ಲಿ ಉಳಿದ ಮೂರು ದಿನ ನಿಯೋಜಿತ ಪಂಚಾಯಿತಿಗಳಲ್ಲಿ ಕೆಲಸ ನಿರ್ವಹಿಸುತ್ತಾರೆ.
ಇದರಿಂದಾಗಿ ಗ್ರಾಮ ಪಂಚಾಯಿತಿಗಳಲ್ಲಿ ಸಾರ್ವಜನಿಕ ಕೆಲಸಗಳು ಹಾಗೂ ಅಭಿವೃದ್ಧಿ ಕಾರ್ಯಗಳು ಸಮರ್ಪಕವಾಗಿ ನಡೆಯುತ್ತಿಲ್ಲ ಎಂಬುದು ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರ ದೂರಾಗಿದೆ. ಇನ್ನು ಸಕಾಲಕ್ಕೆ ಸಾರ್ವಜನಿಕರಿಗೆ ಗ್ರಾಪಂ ಕಚೇರಿಯಲ್ಲಿ ಆಗಬೇಕಾದ ಕೆಲಸಗಳು ಆಗುತ್ತಿಲ್ಲ ಎಂದು ಜನರು ಆರೋಪಿಸುತ್ತಿದ್ದು, ಪೂರ್ಣಾವಧಿಯ ಪಿಡಿಒಗಳ ನೇಮಕಕ್ಕೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಅಭಿವೃದ್ಧಿಗೆ ಹಿನ್ನಡೆ:
ಕಾಯಂ ಪಿಡಿಒಗಳಿಲ್ಲದೇ ಇ-ಸ್ವತ್ತು, ಯೋಜನೆಗಳ ಕ್ರಿಯಾ ಯೋಜನೆ, ಖರೀದಿ, ಸ್ವಚ್ಛತೆ, ನೀರಿನ ಸಮಸ್ಯೆ, ನರೇಗಾ ಹಾಗೂ ಬೆರಳಚ್ಚು ಸಮಸ್ಯೆ ಎದುರಾಗುತ್ತಿದೆ. 6 ತಿಂಗಳಿಗೊಮ್ಮೆ ನಡೆಯಬೇಕಾದ ಗ್ರಾಮಸಭೆ, 3 ತಿಂಗಳ ವಾರ್ಡ್ ಸಭೆ, 1 ತಿಂಗಳಿಗೊಮ್ಮೆ ಸದಸ್ಯರೊಡನೆ ನಡೆಯುವ ಸಾಮಾನ್ಯ ಸಭೆಗಳು ನಿಗದಿತ ವೇಳೆಗೆ ನಡೆಯುತ್ತಿಲ್ಲ. ಪ್ರಭಾರ ವಹಿಸಿಕೊಂಡ ಪಿಡಿಒಗಳು 2 ಪಂಚಾಯಿತಿ ಜವಾಬ್ದಾರಿ ಹೊತ್ತಿರುವುದರಿಂದ ಎರಡು ಪಂಚಾಯಿತಿಯಲ್ಲೂ ಸಕಾಲಕ್ಕೆ ಜನರ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ. ಇವರು ಯಾವಾಗ ಬರುತ್ತಾರೆ, ಯಾವಾಗ ಹೋಗುತ್ತಾರೆ ಎಂದು ಜನರಿಗೆ ತಿಳಿಯುವುದಿಲ್ಲ. ಪಂಚಾಯಿತಿ ವ್ಯಾಪ್ತಿಯಲ್ಲಿ ಕೆಲಸಗಳಾಗದೇ ಜನರು ಹಿಡಿ ಶಾಪ ಹಾಕುತ್ತಿದ್ದಾರೆ.
ಜನರು ಹೈರಾಣ:
ಹಳ್ಳಿಗಳಲ್ಲಿ ಕೂಲಿ ಮಾಡಿ ಜೀವನ ಮಾಡುವರೇ ಹೆಚ್ಚು. ಮೂರು ಹೊತ್ತು ಊಟ ಮಾಡಬೇಕಾದರೆ ಪ್ರತಿದಿನ ಕೆಲಸಕ್ಕೆ ಹೋಗಲೆಬೇಕು. ಆದರೆ, ಈ ನಡುವೆ ಗ್ರಾಪಂ ಕಚೇರಿಯಲ್ಲಿ ಏನಾದರು ಕೆಲಸವಿದ್ದರೆ ಒಂದೆರಡು ದಿನದಲ್ಲಿ ಮಾಡಲು ಸಾಧ್ಯವಾಗಲ್ಲ. 3-4 ದಿನ ಸುತ್ತಿದರೂ ಪಿಡಿಒ ಇಲ್ಲ ಎಂದು ಬಿಲ್ ಕಲೆಕ್ಟರ್, ಕಾರ್ಯದರ್ಶಿ ಹೇಳುವುದು ಸಾಮಾನ್ಯವಾಗಿಬಿಟ್ಟಿದೆ. ಇಂತಹ ಸಬೂಬು ಕೇಳಿ ಜನರು ಹೈರಾಣಾಗಿದ್ದಾರೆ. ಸರ್ಕಾರಿ ಯೋಜನೆಗಳು ಜನರು ಪಡೆಯಲು ಅಡ್ಡಿಯಾಗಿದೆ. ಇ-ಸ್ವತ್ತು ಪಡೆಯಲು ಅಧ್ಯಕ್ಷರು ಹಾಗೂ ಪಿಡಿಒ ಬೆರಳಚ್ಚು ಬೇಕು. ಸಾರ್ವಜನಿಕರು ಕಚೇರಿಗೆ ಬಂದಾಗ ಒಬ್ಬರು ಸಿಕ್ಕರೆ ಮತ್ತೊಬ್ಬರು ಸಿಗದ ಪರಿಸ್ಥಿತಿಯಿದೆ. ಜನರು ತಮ್ಮ ಕುಂದುಕೊರತೆ ಹೇಳಿಕೊಳ್ಳುವುದಕ್ಕೂ ಸಾಧ್ಯವಾಗುತ್ತಿಲ್ಲ. ಕೆಲಸ ಕಾರ್ಯ ಬಿಟ್ಟು ಗ್ರಾಪಂಗೆ ಅಲೆಯುವ ಪರಿಸ್ಥಿತಿ ಎದುರಾಗಿದೆ.
ಸದ್ಯಸರ ಮೇಲೆ ಗರಂ:
ಪಿಡಿಒ ಮೂಲಕ ಆಗಬೇಕಾದ ಕೆಲವು ಕೆಲಸಗಳು ವಿಳಂಬವಾದರೆ, ಮತ್ತೆ ಕೆಲವು ಕೆಲಸಗಳು ಆಗುತ್ತಿಲ್ಲ. ಇದರಿಂದ ಜನರು ತಾವು ಮತ ನೀಡಿ ಆಯ್ಕೆ ಮಾಡಿದ ಸದಸ್ಯರ ಮೇಲೆ ಅಕ್ರೋಶವ್ಯಕ್ತಪಡಿಸುತ್ತಿದ್ದಾರೆ ಎಂದು ಕಾಯಂ ಪಿಡಿಒ ಇಲ್ಲದ ಕೆಲವು ಗ್ರಾಪಂ ಸದಸ್ಯರು ಅಳಲು ತೋಡಿಕೊಳ್ಳುತ್ತಾರೆ. ಹಲವು ಭರವಸೆ ಕೊಟ್ಟು ಗೆದ್ದಿದ್ದೇವೆ ನಿರೀಕ್ಷೆಯಂತೆ ಜನರ ಕೆಲಸ ಮಾಡಲು ಸಾಧ್ಯವಿಲ್ಲ. ಸರ್ಕಾರ ಈ ವಿಚಾರವನ್ನು ಗಭೀರವಾಗಿ ತೆಗದುಕೊಳ್ಳಬೇಕಿದೆ ಎನ್ನುತ್ತಾರೆ.
ತಾಲೂಕಿನಲ್ಲಿ ಟಗರಪುರ, ಕುಂತೂರು, ಮುಳ್ಳೂರು, ಕುಣಗಳ್ಳಿ, ಹರಳೆ, ಸಿದ್ದಯ್ಯನಪುರ, ತಿಮ್ಮರಾಜೀಪುರ, ಮಧುವನಹಳ್ಳಿ, ಪಾಳ್ಯ, ಧನಗೆರೆ, ದೊಡ್ಡಿಂದುವಾಡಿ, ಸಿಂಗನಲ್ಲೂರು, ಸತ್ತೇಗಾಲ, ಕೊಂಗರಹಳ್ಳಿ, ಚಿಕ್ಕಲ್ಲೂರು ಹಾಗು ತೆಳ್ಳನೂರು ಪಂಚಾಯಿತಿಗಳಿವೆ. ಈ ಪೈಕಿ ಸತ್ತೇಗಾಲ, ಕುಂತೂರು, ಮುಳ್ಳೂರು, ಮಧುವನಹಳ್ಳಿ, ದೊಡ್ಡಿಂದುವಾಡಿ ಪ್ರಮುಖ ಪಂಚಾಯಿತಿಗಳಾಗಿದ್ದು. ಈ ನಾಲ್ಕು ಪಂಚಾಯಿತಿಗಳು ಕಾಯಂ ಪಿಡಿಒ ಇಲ್ಲದೆ ಅನಾಥವಾಗಿದೆ. ಅಭಿವೃದ್ಧಿ ಕೆಲಸಗಳಾಗದೆ ಜನರು ತೊಂದರೆಗೆ ಸಿಲುಕಿದ್ದಾರೆ.
ಸತ್ತೇಗಾಲ ಗ್ರಾಪಂ ಅಧ್ಯಕ್ಷನಾಗಿ ಎರಡೂವರೆ ತಿಂಗಳು ಕಳೆದಿದೆ. ಜನರ ನಿರೀಕ್ಷೆಯಂತೆ ಕೆಲಸ ಮಾಡಲು ಪಂಚಾಯಿತಿಯಲ್ಲಿ ಕಾಯಂ ಪಿಡಿಒ ಇಲ್ಲ. ಹಿಂದಿನ ಪಿಡಿಒ ಸಹ ಬೇರೆ ಪಂಚಾಯಿತಿ ಜವಾಬ್ದಾರಿ ಹೊತ್ತು ಕೆಲಸ ಮಾಡುತ್ತಿದ್ದರು. ಈಗಲೂ ಪಾಳ್ಯದ ಪಿಡಿಒ ಪ್ರಭಾರ ಪಿಡಿಒ ಆಗಿದ್ದಾರೆ. ಸತ್ತೇಗಾಲ ದೊಡ್ಡ ಪಂಚಾಯಿತಿ ಆದ್ದರಿಂದ ಕಾಯಂ ಪಿಡಿಒ ಬೇಕು. ಸರ್ಕಾರ ಇತ್ತ ಗಮನಹರಿಸಬೇಕು.ಕೆಂಪರಾಜು, ಸತ್ತೇಗಾಲ ಗ್ರಾಪಂ ಅಧ್ಯಕ್ಷ ಗ್ರಾಪಂ ಕಚೇರಿಯಲ್ಲಿ ಪೂರ್ಣಾವಧಿ ಪಿಡಿಒ ಇಲ್ಲದ ಕಾರಣ ಸಾರ್ವಜನಿಕರ ಕೆಲಸಗಳು ವಿಳಂಬವಾಗುತ್ತಿವೆ. ಪ್ರಭಾರ ಪಿಡಿಒಗಳು ಪರಿಣಾಮಕಾರಿಯಾಗಿ ಕೆಲಸ ಮಾಡುವುದಿಲ್ಲ. ಇದು ಸರ್ಕಾರದ ಸಮಸ್ಯೆ. ಜನರು ಮಾತ್ರ ಸಂಕಷ್ಟ ಅನುಭವಿಸುವಂತಾಗಿದೆ. ಇನ್ನಾದರೂ ಸರ್ಕಾರ ಕಾಯಂ ಪಿಡಿಒ ನೇಮಕಕ್ಕೆ ಕ್ರಮ ಕೈಗೊಳ್ಳಲಿ.ಮಂಜುನಾಥ್, ನಿವಾಸಿ ಮುಳ್ಳೂರು ಗ್ರಾಪಂ ಕಾಯಂ ಪಿಡಿಒ ನಿಯೋಜನೆ ಸರ್ಕಾರದ ಹಂತದಲ್ಲಿದೆ. ಸದ್ಯ ಇರುವ ಪಿಡಿಒಗಳನ್ನು ಸಿಇಒ ಅನುಮತಿ ಪಡೆದು ಪಿಡಿಒ ಇಲ್ಲದ ಗ್ರಾಪಂ ನೋಡಿಕೊಳ್ಳಲು ಜವಾಬ್ದಾರಿ ವಹಿಸಲಾಗಿದೆ. ಗ್ರೇಡ್-1 ಕಾರ್ಯದರ್ಶಿ ಇದ್ದರೆ ಅವರನ್ನೆ ಪಿಡಿಒ ಆಗಿ ನೇಮಿಸಬಹುದಿತ್ತು. ಆದರಿಲ್ಲಿ ಗ್ರೇಡ್-2 ಕಾರ್ಯದರ್ಶಿಗಳಿದ್ದಾರೆ. ಈ ಬಗ್ಗೆ ಮೇಲಿನ ಅಧಿಕಾರಿಗಳ ಗಮನಸೆಳೆಯುತ್ತೇನೆ. ಶ್ರೀನಿವಾಸ್, ಇಒ, ತಾಪಂ, ಕೊಳ್ಳೇಗಾಲ