

ಕೊಳ್ಳೇಗಾಲ: ಶಿಕ್ಷಕರ ಪರಿಶ್ರಮದಿಂದ ದೇಶ ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದುತ್ತಿದೆ ಎಂದು ಹನೂರು ಶಾಸಕ ಎಂ.ಆರ್.ಮಂಜುನಾಥ್ ಹೇಳಿದರು.
ಪಟ್ಟಣದ ಚೌಡೇಶ್ವರಿ ಕಲ್ಯಾಣ ಮಂಟಪದಲ್ಲಿ ಜಿಲ್ಲಾ ಪಂಚಾಯಿತಿ ಹಾಗೂ ಶಾಲಾ ಶಿಕ್ಷಣ ಇಲಾಖೆ ವತಿಯಿಂದ ಮಂಗಳವಾರ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಡಾ.ಸರ್ವೆಪಲ್ಲಿ ರಾಧಾಕೃಷ್ಣನ್ ಅವರು ಶಿಕ್ಷಕರಿಗೆ ಸಮಾಜದಲ್ಲಿ ಗೌರವ ಸಿಗಬೇಕೆಂದು ಆಶಿಸಿದ್ದರು. ಈ ನಿಟ್ಟಿನಲ್ಲಿ ತಮ್ಮ ಜನ್ಮದಿನವನ್ನು ಶಿಕ್ಷಕರ ದಿನವಾಗಿ ಆಚರಿಸಲು ಕರೆ ನೀಡಿದರು. ಹಾಗೆಯೇ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಕೂಡ ಶಿಕ್ಷಣಕ್ಕೆ ಆದ್ಯತೆ ನೀಡಿ ಸಮಾಜದಲ್ಲಿ ಸಮಾನತೆಯನ್ನು ಜಾರಿಗೆ ತಂದರು ಎಂದರು.
ಶಾಸಕ ಎ.ಆರ್.ಕೃಷ್ಣಮೂರ್ತಿ ಮಾತನಾಡಿ, ಭಾರತ ದೇಶ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಸಾಧನೆ ಮಾಡುವಲ್ಲಿ ಶಿಕ್ಷಕರ ಪಾತ್ರ ದೊಡ್ಡದಿದೆ. ಒಂದು ಕಲ್ಲು ಶಿಲೆಯಾಗಲು ಶಿಲ್ಪಿ ಎಷ್ಟು ಮುಖ್ಯವೋ ಹಾಗೆಯೇ ಒಬ್ಬ ವಿದ್ಯಾರ್ಥಿ ದೇಶದ ಉತ್ತಮ ಪ್ರಜೆಯಾಗಲು ಶಿಕ್ಷಕರೂ ಅಷ್ಟೇ ಮುಖ್ಯ ಎಂದು ಹೇಳಿದರು. ಚಿತ್ರನಟ ಪ್ರಥಮ್ ಮಾತನಾಡಿದರು.
ಇದೇ ವೇಳೆ ಶಿಕ್ಷಕರು ಶಾಸಕ ಎ.ಆರ್.ಕೃಷ್ಣಮೂರ್ತಿ ಅವರಿಗೆ ಮನವಿ ಸಲ್ಲಿಸಿದರು. ಉತ್ತಮ ಶಿಕ್ಷಕರನ್ನು ಸನ್ಮಾನಿಸಲಾಯಿತು. ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಜಯ ಗಳಿಸಿದ ಶಿಕ್ಷಕರಿಗೆ ಬಹುಮಾನ ವಿತರಿಸಲಾಯಿತು. ತಹಸೀಲ್ದಾರ್ ಮಂಜುಳಾ, ಬಿಇಒ ಮಂಜುಳಾ, ಬಿಆರ್‌ಸಿ ಮಹದೇವಕುಮಾರ್, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ರಂಗಸ್ವಾಮಿ, ದೈಹಿಕ ಶಿಕ್ಷಣ ಪರಿವೀಕ್ಷಕ ಸ್ಟೀವನ್, ನೌಕರರ ಸಂಘದ ಅಧ್ಯಕ್ಷ ಅಲೆಕ್ಸಾಂಡರ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಶ್ರೀಧರ್, ಪ್ರೌಢಶಾಲೆಯ ಶಿಕ್ಷಕರ ಸಂಘದ ಅಧ್ಯಕ್ಷ ಶಿವರಾಜು ಮತ್ತು ಇತರರು ಹಾಜರಿದ್ದರು.