

ಕೊಳ್ಳೇಗಾಲ: ಆದಿದ್ರಾವಿಡ ಮೂಲ ನಿವಾಸಿಗಳ ಹೋರಾಟ ಸಮಿತಿಯಿಂದ ಚಿತ್ರನಟ ಉಪೇಂದ್ರ ಬಂಧನಕ್ಕೆ ಒತ್ತಾಯಿಸಿ 12ನೇ ದಿನವಾದ ಮಂಗಳವಾರವೂ ಧರಣಿ ಮುಂದುವರಿಯಿತು.
ಪಟ್ಟಣದ ತಾಲೂಕು ಕಚೇರಿ ಮುಂಭಾಗದಲ್ಲಿ ನಡೆಯುತ್ತಿರುವ ಧರಣಿಗೆ ಮಂಗಳವಾರ ಹೊಸ ಅಣಗಳ್ಳಿ ಗ್ರಾಮಸ್ಥರು ಹಾಗೂ ಅಂಬೇಡ್ಕರ್ ಸಂಘದ ಪದಾಧಿಕಾರಿಗಳು ಬೆಂಬಲ ಸೂಚಿಸಿದರು.
ಕಳೆದ 12 ದಿನಗಳಿಂದ ಪ್ರತಿಭಟನೆ ಮಾಡುತ್ತಿದ್ದರೂ ದಲಿತ ಸಮುದಾಯದ ಬಗ್ಗೆ ಅವಹೇಳನಕಾರಿಯಾಗಿ ಪದ ಬಳಕೆ ಮಾಡಿರುವ ಉಪೇಂದ್ರ ಅವರನ್ನು ಬಂಧಿಸದೆ ರಕ್ಷಣೆ ನೀಡುತ್ತಿರುವುದು ಖಂಡನೀಯ ಎಂದು ಪ್ರತಿಭಟನಾನಿರತರು ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆಯಲ್ಲಿ ಸಮಿತಿಯ ಸಂಚಾಲಕ ಅಣಗಳ್ಳಿ ಬಸವರಾಜು, ಹೊಸ ಅಣಗಳ್ಳಿ ಗ್ರಾಮದ ಯಜಮಾನರು ಶಿವಣ್ಣ, ರಾಚಯ್ಯ, ಮಹದೇವು, ದೊರೆರಾಜು, ವೆಂಕಟರಾಮು, ಅಂಬೇಡ್ಕರ್ ಸಂಘದ ಪ್ರತಿನಿಧಿಗಳು, ಕಣ್ಣೂರು ಲಿಂಗರಾಜು ಹಾಗೂ ಇತರರು ಇದ್ದರು.