

ಕೊಳ್ಳೇಗಾಲ:ತಾಲೂಕಿನ ಶಿವನಸಮುದ್ರದ ಬಳಿ ಕಾವೇರಿ ನದಿಯಲ್ಲಿ ಈಜುತ್ತಾ ಸೆಲ್ಫಿ ತೆಗೆದುಕೊಳ್ಳುವಾಗ ಇಬ್ಬರು ಯುವಕರು ಸೋಮವಾರ ನೀರಿನಲ್ಲಿ ಕೊಚ್ಚಿ ಹೋಗಿದ್ದು, ಒಬ್ಬ ಮೃತಪಟ್ಟರೆ ಮತ್ತೊಬ್ಬನನ್ನು ಮೀನುಗಾರರು ರಕ್ಷಣೆ ಮಾಡಿದ್ದಾರೆ.
ಬೆಂಗಳೂರಿನ ಸುಂಕದಕಟ್ಟೆ ಪುನೀತ್(18) ಮೃತರು. ಮತ್ತೊಬ್ಬ ಯುವಕ ಲೋಹಿತ್‌ನನ್ನು ಈಜುಗಾರರು ರಕ್ಷಣೆ ಮಾಡಿದ್ದಾರೆ. ಇವರು ಸೇರಿದಂತೆ ಇಬ್ಬರು ಹುಡುಗಿಯರೊಂದಿಗೆ ಭರಚುಕ್ಕಿ ಜಲಪಾತ ವೀಕ್ಷಣೆಗೆ ಬಂದಿದ್ದರು. ಲೋಹಿತ್ ಹಾಗೂ ಪುನೀತ್ ಇಬ್ಬರೂ ಕಾವೇರಿ ನದಿಯಲ್ಲಿ ಈಜಲು ಇಳಿದು ಸೆಲ್ಫಿ ತೆಗೆಯುವಾಗ ನೀರಿನ ರಭಸಕ್ಕೆ ಕೊಚ್ಚಿ ಹೋಗಿದ್ದಾರೆ.
ಇದನ್ನು ಗಮನಿಸಿದ ಈಜುಗಾರರು ತೆಪ್ಪದಲ್ಲಿ ಕೊಚ್ಚಿ ಹೋಗುತ್ತಿದ್ದವರ ಪೈಕಿ ಲೋಹಿತ್‌ನನ್ನು ರಕ್ಷಿಸಿದ್ದಾರೆ. ಆದರೆ, ಪುನೀತ್ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ. ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು. ಮೃತದೇಹವನ್ನು ಕೊಳ್ಳೇಗಾಲದ ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ. ಮೃತನ ಪಾಲಕರ ಬಂದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಜರುಗಿಸಲಿದ್ದಾರೆ.