ದೇಶದ ಅಭಿವೃದ್ಧಿಯಲ್ಲಿ ಶಿಕ್ಷಕರ ಪಾತ್ರ ದೊಡ್ಡದು

22kglphoto-6,,,,,
Published on

ಕೊಳ್ಳೇಗಾಲ: ಶಿಕ್ಷಕ ವೃತ್ತಿ ಪವಿತ್ರವಾದದ್ದು, ಮಕ್ಕಳನ್ನು ಶಿಕ್ಷಣದ ಮೂಲಕ ಸರಿದಾರಿಗೆ ತರುವುದು ಪುಣ್ಯದ ಕೆಲಸ ಎಂದು ಶಾಸಕ ಎ.ಆರ್.ಕೃಷ್ಣಮೂರ್ತಿ ತಿಳಿಸಿದರು.

ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ ಶೇ.100 ಫಲಿತಾಂಶ ಪಡೆದಿರುವ ಪ್ರೌಢಶಾಲಾ ಮುಖ್ಯ ಶಿಕ್ಷಕರು, ವಿಷಯವಾರು ಶಿಕ್ಷಕರು ಮತ್ತು ಸಾಧಕ ವಿದ್ಯಾರ್ಥಿಗಳಿಗೆ ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಪಟ್ಟಣದ ಲಯನ್ಸ್ ವಿದ್ಯಾಸಂಸ್ಥೆ ಆವರಣದಲ್ಲಿ ಶನಿವಾರ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ದೇಶದ ಅಭಿವೃದ್ಧಿಯಲ್ಲಿ ಶಿಕ್ಷಕರ ಪಾತ್ರ ದೊಡ್ಡದು. ತಾಯಿಯನ್ನು ಬಿಟ್ಟರೆ ಇಡೀ ಜಗತ್ತಿನಲ್ಲಿ ಶಿಕ್ಷಕರು ಮಾತ್ರ ಉತ್ತಮ ಮಾರ್ಗದರ್ಶನ ತೋರುತ್ತಾರೆ. ಆಕಾರವಿಲ್ಲದ ಕಲ್ಲಿನಂತೆ ಇರುವ ಮಕ್ಕಳನ್ನು ಕೆತ್ತಿ ಶಿಲೆ ಮಾಡುವುದು ಶಿಕ್ಷಕರ ಕೈಯಲ್ಲಿ ಇರುತ್ತದೆ ಎಂದರು.
ಶಾಸಕ ಎಂ.ಆರ್.ಮಂಜುನಾಥ್ ಮಾತನಾಡಿ, ಶಿಕ್ಷಕರ ಸಾಧನೆ ಪರಿಶ್ರಮದ ಫಲವಾಗಿ ಮಕ್ಕಳು ಹೆಚ್ಚಿನ ರೀತಿಯ ಸಾಧನೆ ಮಾಡುವಂತಾಗಿದೆ. ಶಿಕ್ಷಕರ ಸೇವೆ ಶ್ಲಾಘನೀಯ. ಅವರ ಸಮಸ್ಯೆಗೆ ಸದಾ ಸ್ಪಂದಿಸುವೆ ಎಂದರು.

ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ತಾಲೂಕಿಗೆ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ತಾಲೂಕಿನಾದ್ಯಂತ ಪರೀಕ್ಷೆ ಬರೆದಿದ್ದ 24 ಅಂಗವಿಕಲ ಮಕ್ಕಳ ಪೈಕಿ ಹೆಚ್ಚು ಅಂಕಗಳಿಸಿದ 3 ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. 2021-22ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಸರ್ಕಾರಿ ಪ್ರೌಢಶಾಲೆಯ ಕನ್ನಡ ಮಾಧ್ಯಮದಲ್ಲಿ ಓದಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ವಿತರಿಸಲಾಯಿತು.

ನಗರಸಭೆ ಸದಸ್ಯರಾದ ಜಯಂತ್, ಶಾಂತರಾಜು, ರಾಘವೇಂದ್ರ, ಸುರೇಶ್, ಮಂಜುನಾಥ್, ಪುಷ್ಪಲತಾ, ಜಯಮೇರಿ, ರೇಖಾ, ಕವಿತಾ, ಸುಮಾಸುಬ್ಬಣ್ಣ, ಭಾಗ್ಯಾ, ಉಪವಿಭಾಗಾಧಿಕಾರಿ ಮಹೇಶ್, ಬಿಇಒ ಮಂಜುಳಾ, ಜಿಲ್ಲಾ ಯೋಜನಾ ಸಮಾನ್ವಯಾಧಿಕಾರಿ ನಾಗೇಂದ್ರ, ಬಿ.ಆರ್.ಸಿ ಮಹದೇವ ಕುಮಾರ್, ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಶಿವರಾಜು, ಸಹಶಿಕ್ಷಕರ ಸಂಘದ ಅಧ್ಯಕ್ಷ ಅಕ್ಬರ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಜೋಸೆಫ್ ಅಲೆಕ್ಸಾಂಡರ್, ಲಯನ್ಸ್ ವಿದ್ಯಾಸಂಸ್ಥೆ ಕಾರ್ಯದರ್ಶಿ ಜಿ.ಎಸ್.ಮಹದೇವ ಪ್ರಸಾದ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net