

ಕೊಳ್ಳೇಗಾಲ: ದಿನದಿಂದ ದಿನಕ್ಕೆ ಕೊಳ್ಳೇಗಾಲದಲ್ಲಿ ಚಿರತೆ ಉಪಟಳ ಹೆಚ್ಚಾಗಿದೆ. ಸಾಕುಪ್ರಾಣಿಗಳ ಮೇಲೆ ನಿರಂತರವಾಗಿ ದಾಳಿ ನಡೆಸುತ್ತಿದೆ. ಕುಣಗಳ್ಳಿ ಗ್ರಾಮದ ಹೊರವಲಯದಲ್ಲಿ ವಾಯುವಿಹಾರಕ್ಕೆ ತೆರಳಿದ್ದ ಸಾರ್ವಜನಿಕರ ಮೇಲೂ ಎರಗಲು ಯತ್ನಿಸಿರುವ ಘಟನೆ ನಡೆದಿದ್ದು, ಜನರಲ್ಲಿ ಚಿರತೆ ಭೀತಿ ಆವರಿಸಿದೆ.
ಇತ್ತೀಚೆಗೆ ತಿಮ್ಮರಾಜೀಪುರ, ಕೆಂಪನಪಾಳ್ಯ, ಕೊಂಗರಹಳ್ಳಿ ಗ್ರಾಮಗಳಲ್ಲಿ ಚಿರತೆ ಕಾಣಿಸಿಕೊಂಡಿತ್ತು. 5 ದಿನಗಳ ಹಿಂದೆ ಕೊಂಗರಹಳ್ಳಿಯಲ್ಲಿ 2 ಹಸುಗಳು ಚಿರತೆ ದಾಳಿಗೆ ಬಲಿಯಾದವು. ಬುಧವಾರ ಸಂಜೆ ಮುಡಿಗುಂಡ ಹೊರವಲಯದಲ್ಲಿ ಕಾಣಿಸಿಕೊಂಡಿದೆ. ಗುರುವಾರ ಬೆಳಗ್ಗೆ ಬೂದಿತಿಟ್ಟು ಗ್ರಾಮದ ಸಂಜಯ್ ಎಂಬುವರ ತೋಟದ ಮನೆಗೆ ಲಗ್ಗೆ ಇಟ್ಟು, ಜಾನುವಾರುಗಳನ್ನು ಗಾಬರಿಗೊಳ್ಳಿಸಿದೆ. ಶುಕ್ರವಾರ ಬೆಳಗ್ಗೆ ಸೂರಪುರ ಗ್ರಾಮದ ಹೊರವಲಯದಲ್ಲಿ ವಾಯುವಿಹಾರಕ್ಕೆ ತೆರಳಿದ್ದ ಸಾರ್ವಜನಿಕರ ಮೇಲೆ ದಾಳಿ ಮಾಡಲು ಯತ್ನಿಸಿದೆ. ಬೂದಿತಿಟ್ಟು ಗ್ರಾಮದ ವೆಂಕಟೇಶ್ ಎಂಬುವರ ಕರು ಮೇಲೆ ದಾಳಿ ನಡೆಸಿದೆ. ಅದೃಷ್ಟವಶಾತ್ ಕರು ಪ್ರಾಣಾಪಾಯದಿಂದ ಪಾರಾಗಿದೆ.
ಹೀಗೆ ನಿತ್ಯವೂ ಒಂದಲ್ಲ ಒಂದು ಕಡೆ ಚಿರತೆ ಕಾಣಿಸಿಕೊಳ್ಳುತ್ತಿದೆ. ಪರಿಣಾಮ ಹೊಲಗದ್ದೆ, ಜಮೀನುಗಳಿಗೆ ಜನರು ತೆರಳಲು ಭಯಪಡುತ್ತಿದ್ದಾರೆ. ರಾತ್ರಿ ವೇಳೆ ಮನೆಯಿಂದ ಹೊರಬರಲು ಹೆದರುವ ಸನ್ನಿವೇಶ ಸೃಷ್ಟಿಯಾಗಿದೆ. ಇತ್ತೀಚೆಗೆ ಹನೂರು ತಾಲೂಕಿನ ಕಗ್ಗಲಿಗುಂದಿ ಕಾಡಂಚಿನ ಗ್ರಾಮದಲ್ಲಿ 8 ವರ್ಷದ ಬಾಲಕಿ ಮೇಲೆ ಚಿರತೆ ದಾಳಿ ನಡೆಸಿತ್ತು. ಬಾಲಕಿ ಕೆಲ ದಿನಗಳು ಜೀವನ್ಮರಣ ಹೋರಾಟ ನಡೆಸಿ ಕೊನೆಗೂ ಚಿಕಿತ್ಸೆಗೆ ಸ್ಪಂದಿಸದೆ ಅಸುನೀಗಿದಳು. ಈ ಪ್ರಕರಣ ಹನೂರು ಹಾಗೂ ಕೊಳ್ಳೇಗಾಲ ತಾಲೂಕನ್ನೇ ಬೆಚ್ಚಿಬೀಳಿಸಿದೆ.
ಬೂದಿತಿಟ್ಟು ಗ್ರಾಮದ ಸಂಜಯ್ ಎಂಬುವರ ತೋಟದ ಮನೆಯಲ್ಲಿ ಚಿರತೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅರಣ್ಯ ಸಿಬ್ಬಂದಿ ಭೇಟಿ ನೀಡಿದ್ದಾರೆ. ಚಿರತೆಯ ಹೆಜ್ಜೆ ಗುರುತು ಪರಿಶೀಲಿಸಿ, ಸೆರೆ ಹಿಡಿಯಲು ಬೋನು ಅಳವಡಿಸಿದ್ದಾರೆ. ಸೂರಪುರ ಗ್ರಾಮ ಹೊರವಲಯದಲ್ಲೂ ಬೋನು ಇಡಲಾಗಿದೆ.
ಕುರುಬನಕಟ್ಟೆ ರಸ್ತೆ ಕಡೆಗೆ ವಾಯುವಿಹಾರಕ್ಕೆ ತೆರಳಿದ್ದ ವೇಳೆ ಮಾಂತಯ್ಯನ ಕಟ್ಟೆ ಸಮೀಪ ಚಿರತೆ ದಾಳಿ ನಡೆಸಲು ಯತ್ನಿಸಿತು. ಪಕ್ಕದಲ್ಲಿದ್ದ ಸ್ನೇಹಿತರು ಹೌಹಾರಿದ ಕಾರಣ ಭಯಗೊಂಡು ಚಿರತೆ ಜಮೀನು ಕಡೆಗೆ ತೆರಳಿತು. ಅರಣ್ಯ ಇಲಾಖೆ ನಿರ್ಲಕ್ಷ್ಯ ವಹಿಸದೆ ಚಿರತೆ ಹಿಡಿಯಬೇಕು.-ಎಸ್.ಪಿ.ಲಿಂಗರಾಜು, ಚಿರತೆ ದಾಳಿಯಿಂದ ಪಾರಾದವರು, ಸೂರಪುರ ಗ್ರಾಮ