ಕೊಳ್ಳೇಗಾಲದಲ್ಲಿ ಧಮ್ಮ ದೀಕ್ಷಾ ದಿನಾಚರಣೆ

Published on

ಕೊಳ್ಳೇಗಾಲ: ಭಾರತೀಯ ಬೌದ್ಧ ಮಹಾಸಭಾ ಕೊಳ್ಳೇಗಾಲ ಶಾಖೆಯಿಂದ ಡಾ.ಬಿ.ಆರ್.ಅಂಬೇಡ್ಕರ್ ಅವರು 1956 ಅ.14 ರಂದು ನಾಗ್ಪುರ ದೀಕ್ಷಾ ಭೂಮಿಯಲ್ಲಿ ಬೌದ್ಧ ಧಮ್ಮ ಸ್ವೀಕರಿಸಿದ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಸೋಮವಾರ 68ನೇ ಧಮ್ಮ ದೀಕ್ಷಾ ದಿನಾಚರಣೆ ಕಾರ್ಯಕ್ರಮ ನಡೆಯಿತು.

ಪಟ್ಟಣದ ಗುರುಭವನದಲ್ಲಿ ಆಯೋಜಿಸಿದ್ದ ಧಮ್ಮ ದೀಕ್ಷಾ ದಿನಾಚರಣೆ ಕಾರ್ಯಕ್ರಮದಲ್ಲಿ ಮೈಸೂರು ವಿಶ್ವಮೈತ್ರಿ ಬುದ್ಧ ವಿಹಾರ ಬೌದ್ಧ ಬಿಕ್ಕು ಡಾ.ಕಲ್ಯಾಣಸಿರಿ ಭಂತೇಜಿ ಮಾತನಾಡಿ, ಬೌದ್ಧ ಧಮ್ಮ ಮಾನವೀಯವಾದದ್ದು. ಎಲ್ಲ ಜಾತಿ ಹಾಗೂ ಧರ್ಮದ ಜನರು ಇಲ್ಲಿದ್ದಾರೆ. ಬೌದ್ಧ ಧಮ್ಮದಿಂದ ಸ್ವಚ್ಛಂದ ಜೀವನ ಸಾಗಿಸಬಹುದು. ಇದು ವಿಶಿಷ್ಟವಾದ ಪರಿಕಲ್ಪನೆ ಬೌದ್ಧ ಧಮ್ಮದ್ದು ಎಂದು ಹೇಳಿದರು.

ಬುದ್ಧ ಎಂಬ ಸುಜ್ಞಾನ ಸಾಗರವನ್ನು ಸೇರಿರುವ ಭಾರತದ ಏಕೈಕ ಪ್ರಜ್ಞಾವಂತ ಮಹಾನದಿ ಅಂಬೇಡ್ಕರ್ ಅವರಾಗಿದ್ದಾರೆ. ನಾವೆಲ್ಲರೂ ಆ ಮಹಾನದಿಗೆ ಉಪ ನದಿಯಾಗಿ ಜತೆಯಲ್ಲಿ ಹರಿದರೆ ಸುಜ್ಞಾನ ಎಂಬ ಸಾಗರವನ್ನು ತಲುಪಬಹುದು ಎಂದು ಕಿವಿಮಾತು ಹೇಳಿದರು.
ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಪಟ್ಟಣದ ಎಂ.ಜಿ.ಎಸ್.ವಿ ಕಾಲೇಜು ಮೈದಾನದಲ್ಲಿ ಧಮ್ಮ ಧ್ವಜದ ಮೆರವಣಿಗೆಗೆ ಹನೂರು ಮಾಜಿ ಶಾಸಕ ಆರ್.ನರೇಂದ್ರ, ನಗರಸಭೆ ಅಧ್ಯಕ್ಷೆ ರೇಖಾ, ಉಪಾಧ್ಯಕ್ಷ ಎ.ಪಿ.ಶಂಕರ್ ಚಾಲನೆ ನೀಡಿದರು. ನಂತರ ಮೆರವಣಿಗೆ ಪಟ್ಟಣದ ಡಾ.ರಾಜ್ ಕುಮಾರ್ ರಸ್ತೆ, ಡಾ.ಅಂಬೇಡ್ಕರ್ ರಸ್ತೆ, ಎಡಿಬಿ ವೃತ್ತ, ಐಬಿ ರಸ್ತೆಯಲ್ಲಿ ಸಾಗಿ ಮೂಲಕ ಗುರುಭವನಕ್ಕೆ ತಲುಪಿತು.

ಮಾಜಿ ಸಚಿವ ಎನ್.ಮಹೇಶ್, ಮಾಜಿ ಶಾಸಕ ಜಿ.ಎನ್.ನಂಜುಂಡಸ್ವಾಮಿ, ಎಸ್.ಬಾಲರಾಜು, ಬುದ್ಧ ಧಮ್ಮ ಸಮಿತಿಯ ಆರ್.ಮಹದೇವಪ್ಪ, ಬೆಂಗಳೂರು ಯೋಜನಾ ಪ್ರದೇಶ ಅಭಿವೃದ್ಧಿ ಮಂಡಳಿ ನಿರ್ದೇಶಕ ಚಂದ್ರಶೇಖರ್, ಬಿಇಒ ಮಂಜುಳಾ, ಭಾರತೀಯ ಬೌದ್ಧ ಮಹಾಸಭಾ ಅಧ್ಯಕ್ಷ ರಾಚಪ್ಪಾಜಿ, ಕಾರ್ಯದರ್ಶಿ ಮಹದೇವ ಕುಮಾರ್, ಖಜಾಂಚಿ ಸಿದ್ದರಾಜು, ಗೌರವಾಧ್ಯಕ್ಷ ಮುಳ್ಳೂರು ಶಿವಮಲ್ಲು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net