ನೀರು ಸರಾಗವಾಗಿ ಹರಿಯದೇ ಜಮೀನುಗಳು ಜಲಾವೃತ

Published on

ಕೊಳ್ಳೇಗಾಲ: ರಾಷ್ಟ್ರೀಯ ಹೆದ್ದಾರಿ ಬೈಪಾಸ್ ರಸ್ತೆಯಲ್ಲಿ ವಾಹನಗಳು ಸರಾಗವಾಗಿ ಓಡಾಡುತ್ತಿದೆ. ಆದರೆ, ಮಳೆ ನೀರು ರಸ್ತೆ ಯನ್ನು ದಾಟಲು ಸಮರ್ಪಕವಾದ ಅವಕಾಶವಿಲ್ಲದೆ ಜಮೀನುಗಳು ಜಾಲವೃತವಾಗಿ ರೈತರು ಸಂಕಷ್ಟಕ್ಕೀಡಾಗಿದ್ದಾರೆ.

ತಾಲೂಕಿನ ನರೀಪುರ ಅಡ್ಡರಸ್ತೆಯಿಂದ ಹರಳೆ, ಹಳೇ ಅಣಗಳ್ಳಿ, ಕೊಳ್ಳೇಗಾಲ ಉಪ್ಪಾರ ಮೋಳೆ, ಹೊಸ ಹಂಪಾಪುರ ಮಾರ್ಗವಾಗಿ ರಾಷ್ಟ್ರೀಯ ಹೆದ್ದಾರಿ ಬೈಪಾಸ್ ರಸ್ತೆ ನಿರ್ಮಾಣವಾಗಿದೆ. ಈ ರಸ್ತೆ ನಿರ್ಮಾಣಕ್ಕೂ ಮುನ್ನ ಈ ಭಾಗದ ರೈತರು ನರೀಪುರ ಬಳಿ ಪ್ರತಿಭಟನೆ ನಡೆಸಿ ರಸ್ತೆ ನಿರ್ಮಾಣ ಮಾಡಿದರೆ ಮಳೆಯ ನೀರು ಮುಂದಕ್ಕೆ ಹೋಗಲು ಸಾಧ್ಯವಾಗದೆ ರೈತರ ಜಮೀನುಗಳು ಮುಳುಗಡೆಯಾಗುತ್ತದೆ. ಕಾಲುವೆಗಳು ಹೋದುಹೋಗಿರುವ ಸ್ಥಳದಲ್ಲಿ ಸೇತುವೆಗಳನ್ನು ನಿರ್ಮಿಸಿದರೆ ಮಳೆಯ ನೀರು ಜಮೀನುಗಳಲ್ಲಿ ನಿಲುಗಡೆಯಾಗದೆ ಸರಾಗವಾಗಿ ಹರಿಯಲು ಸಾಧ್ಯವಾಗುತ್ತದೆ ಎಂದು ಅಧಿಕಾರಿಗಳಿಗೆ ತಿಳಿಸಿದ್ದರು.

ಆದರೂ, ಹೆದ್ದಾರಿ ಅಧಿಕಾರಿಗಳು ಬೈಪಾಸ್ ರಸ್ತೆ ನಿರ್ಮಾಣ ಮಾಡಿದ್ದಾರೆ. ಇದೀಗ ವಾಹನಗಳು ಸಂಚಾರದಲ್ಲಿ ತೊಡಗಿವೆ. ಆದರೆ, ಕಳೆದ ಎರಡ್ಮೂರು ದಿನಗ ಳಿಂದ ಸುರಿಯುತ್ತಿರುವ ಮಳೆ ಬಂದಿದ್ದರಿಂದ ನೀರು ಸರಾಗವಾಗಿ ಹರಿಯಲು ಸಾಧ್ಯವಾಗುತ್ತಿಲ್ಲ. ಒಂದು ಭಾಗದ ಜಮೀನು ಕೆರೆಯಾಗಿ ಮಾರ್ಪಟಿದೆ. ಭತ್ತದ ಪೈರು ನೀರಿನಲ್ಲಿ ಕೊಳೆತು ಹೋಗುವ ಆತಂಕವೂ ವ್ಯಕ್ತವಾಗಿದೆ. ಸಾವಿರಾರು ರೂ. ಖರ್ಚು ಮಾಡಿ ನಾಟಿ ಮಾಡಿರುವುದು ನಷ್ಟವಾಗಬಹುದೆಂದು ರೈತರು ಕಂಗಲಾಗಿದ್ದಾರೆ.

ರಾಷ್ಟ್ರೀಯ ಹೆದ್ದಾರಿ ಬೈಪಾಸ್ ರಸ್ತೆಯಲ್ಲಿ ಸೇತುವೆ ಮಾಡದೆ ಸಣ್ಣ ಪೈಪ್ ಅಳವಡಿಸಿರುವುದರಿಂದ ನೀರು ಸರಾಗವಾಗಿ ಹರಿಯದೆ ಮೋಳೆ ಬಡಾವಣೆಯ ಮಹೇಶ್, ಚನ್ನಬಸವ ಎಂಬುವರಿಗೆ ಸೇರಿದ ಸುಮಾರು ಐದಾರು ಎಕರೆ ಕಟಾವಿಗೆ ಬಂದಿದ್ದ ಕಬ್ಬು ನೀರಿನಲ್ಲಿ ಜಲಾವೃತಗೊಂಡಿದೆ. ಈ ಕಾರಣ ಭಾನುವಾರ ರೈತರು ಹೆದ್ದಾರಿಗೆ ಅಳವಡಿಸಿರುವ ಪೈಪ್‌ಗಳಲ್ಲಿ ಸಿಲುಕಿದ್ದ ತ್ಯಾಜ್ಯ, ಗಿಡಗಂಟಿಗಳನ್ನು ತಾವೇ ತೆರವು ಮಾಡಿ ಸರಾಗವಾಗಿ ಹರಿಯಲು ಅವಕಾಶ ಮಾಡಿಕೊಳ್ಳುವುದು ಕಂಡು ಬಂದಿದೆ.

ಇತ್ತೀಚೆಗೆ ಕಾವೇರಿ ನದಿ ಪ್ರವಾಹ ಬಂದಾಗ ಉಸ್ತುವಾರಿ ಸಚಿವ ಕೆ.ವೆಂಕಟೇಶ್, ಕಂದಾಯ ಸಚಿವ ಕೃಷ್ಣಬೈರೇಗೌಡ, ಸಂಸದ ಸುನೀಲ್‌ಬೋಸ್, ಶಾಸಕ ಎ.ಆರ್.ಕೃಷ್ಣಮೂರ್ತಿ ಅವರು ದಾಸನಪುರ ಕಾವೇರಿ ನದಿ ಪ್ರವಾಸ ಸ್ಥಳಗಳನ್ನು ವೀಕ್ಷಣೆ ಮಾಡಲು ಬಂದಾಗ ರೈತರು ರಾಷ್ಟ್ರೀಯ ಹೆದ್ದಾರಿ ರಸ್ತೆ ನಿರ್ಮಾಣ ಆಗಿರುವುದರಿಂದ ಮಳೆಯ ನೀರು ಮುಂದಕ್ಕೆ ಹೋಗಲು ಸಾಧ್ಯವಿಲ್ಲ. ಅವಶ್ಯಕತೆ ಇರುವ ಸ್ಥಳಗಳಲ್ಲಿ ಸೇತುವೆಗಳು ಹಾಗೂ ಭಾರಿ ಗಾತ್ರದ ಪೈಪ್‌ಗಳನ್ನು ಅಳವಡಿಸಿ ಎಂದು ಮನವಿ ಮಾಡಿಕೊಂಡಿದ್ದರು. ಆದರೂ ಪ್ರಯೋಜನವಾಗಿಲ್ಲ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈಗಾಗಲೇ ರಾಷ್ಟ್ರೀಯ ಹೆದ್ದಾರಿ ಇಂಜಿನಿಯರ್‌ಗಳಿಗೆ ಮಳೆ ಬಂದರೆ ಜಮೀನುಗಳಲ್ಲಿ ನೀರು ನಿಂತುಕೊಳ್ಳುವ ಸ್ಥಳದಲ್ಲಿ ನೀರು ನಿಲ್ಲದಂತೆ ಕ್ರಮವಹಿಸಬೇಕೆಂದು ತಿಳಿಸಿದ್ದೇನೆ. ಅವರು ಭೇಟಿ ನೀಡಿ ವೀಕ್ಷಿಸಿದ್ದು, ಸಮಸ್ಯೆ ಬಗ್ಗೆ ಅರಿವಾಗಿದೆ. ಶೀಘ್ರದಲ್ಲೇ ರಸ್ತೆ ನಿರ್ಮಾಣ ಮಾಡಿರುವ ಪ್ರಾಜೆಕ್ಟ್ ವ್ಯವಸ್ಥಾಪಕರಿಗೆ ಸ್ಥಳ ಪರಿಶೀಲನೆ ನಡೆಸಿ ಶಾಶ್ವತ ಪರಿಹಾರಕ್ಕೆ ಮುಂದಾಗುತ್ತೇವೆ.ಬಿ.ಆರ್.ಮಹೇಶ್, ಉಪವಿಭಾಗಾಧಿಕಾರಿ, ಕೊಳ್ಳೇಗಾಲ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net