ಆದಿಶಕ್ತಿ ಮಾರಮ್ಮ ದೇವಸ್ಥಾನ ಜೀರ್ಣೋದ್ದಾರಕ್ಕೆ ಚಾಲನೆ

Published on

ಕೊಳ್ಳೇಗಾಲ: ತಾಲೂಕಿನ ಸತ್ತೇಗಾಲ ಆದಿಶಕ್ತಿ ಮಾರಮ್ಮ ದೇವಸ್ಥಾನ ಜೀರ್ಣೋದ್ದಾರಕ್ಕೆ ಶಾಸಕರು, ಮಾಜಿ ಶಾಸಕರು ಎಲ್ಲ ಜನಾಂಗದ ಮುಖಂಡರು ಸೋಮವಾರ ಚಾಲನೆ ನೀಡಿದರು.

ಗ್ರಾಮದ ಆದಿಶಕ್ತಿ ಮಾರಮ್ಮನ ದೇವಸ್ಥಾನವು ಹಳೆಯದಾಗಿದ್ದು, ಮಳೆ ಬಿದ್ದರೆ ದೇವಾಲಯದ ಛಾವಣಿ ಸೋರುತ್ತಿರುವುದರಿಂದ ಸತ್ತೇಗಾಲ ಗ್ರಾಮದ ಎಲ್ಲ ವರ್ಗದ ಮುಖಂಡರು ಸಭೆ ನಡೆಸಿ ದೇವಸ್ಥಾನ ಹಳೆಯದಾಗಿರುವುದರಿಂದ ಇದನ್ನು ಸಣ್ಣಪುಟ್ಟ ರಿಪೇರಿ ಮಾಡುವ ಬದಲು ದೇವಸ್ಥಾನದ ಕಟ್ಟಡವನ್ನು ಕೆಡವಿ ಎಲ್ಲ ಸಮುದಾಯದವರಿಂದ ಆರ್ಥಿಕ ನೆರವು ಪಡೆದು ಹೊಸದಾಗಿ ಮಾರಮ್ಮನ ದೇವಸ್ಥಾನ ನಿರ್ಮಾಣ ಮಾಡೋಣ ಎಂದು ಒಮ್ಮತದ ತೀರ್ಮಾನ ಕೈಗೊಂಡು, ದೇವಸ್ಥಾನದ ಕಟ್ಟಡವನ್ನು ಕೆಡವಿದ್ದರು.'

ಶಿವಸಮುದ್ರದ ಮಧ್ಯರಂಗನಾಥ ದೇವಸ್ಥಾನದ ಪ್ರಧಾನ ಅರ್ಚಕ ಶ್ರೀಧರ್, ಉಗನಿಯ ವೀರಭದ್ರಸ್ವಾಮಿ ಅರ್ಚಕ ನಾಗರಾಜು, ಸತ್ತೇಗಾಲ ವಿಶ್ವನಾಥ ದೇವಸ್ಥಾನದ ಅರ್ಚಕ ಚಂದ್ರಶೇಖರ ಮೂರ್ತಿ, ಮಾರಮ್ಮನ ದೇವಸ್ಥಾನದ ಅರ್ಚಕ ಲೋಕೇಶ್ ಇವರ ನೇತೃತ್ವದಲ್ಲಿ ದೇವಸ್ಥಾನದ ಮುಂಭಾಗದಲ್ಲಿ ವಿಶೇಷ ಪೂಜೆ ಸಲ್ಲಿಸಿ ದೇವಸ್ಥಾನದ ಕಟ್ಟಡಕ್ಕೆ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಯಿತು.

ಶಾಸಕ ಎಂ.ಆರ್.ಮಂಜುನಾಥ್ ಮಾತನಾಡಿ, ದೇವಸ್ಥಾನ ಜೀರ್ಣೋದ್ದಾರಕ್ಕೆ ವೈಯಕ್ತಿಕವಾಗಿ 5 ಲಕ್ಷ ರೂ.ನೀಡಲಾಗುವುದೆಂದು ಹೇಳಿ ಮುಂದಿನ ದಿನಗಳು ಸಹ ಆರ್ಥಿಕ ನೆರವು ನೀಡಲಾಗುವುದು. ತ್ವರಿತವಾಗಿ ದೇವಸ್ಥಾನ ನಿರ್ಮಿಸಿ ಭಕ್ತರಿಗೆ ಅನುಕೂಲ ಮಾಡಿಕೊಡಿ ಎಂದು ಹೇಳಿದರು. ಮಾಜಿ ಶಾಸಕರ ಆರ್.ನರೇಂದ್ರ, ಜಿ.ಎನ್.ನಂಜುಂಡಸ್ವಾಮಿ, ಬಿಜೆಪಿ ಹಿರಿಯ ಮುಖಂಡ ಡಾ.ದತ್ತೇಶ್‌ಕುಮಾರ್ ಸೇರಿದಂತೆ ಸತ್ತೇಗಾಲ ಗ್ರಾಮದ ಸತ್ತೇಗಾಲ, ಅಗ್ರಹಾರ, ಯಡಕುರಿಯ, ಸತ್ತೇಗಾಲ ಹ್ಯಾಂಡ್‌ಪೋಸ್ಟ್ ಸೇರಿದಂತೆ ಎಲ್ಲ ವರ್ಗದ ಮುಖಂಡರು, ಯುವಕರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net