

ಕೊಳ್ಳೇಗಾಲ: ಶ್ರೀಗಂಧದ ಮರದ ತುಂಡುಗಳು ಹಾಗೂ ಚಕ್ಕೆ ಸಾಗಣೆ ಆರೋಪದ ಮೇರೆಗೆ ಬಂಧನಕ್ಕೊಳಗಾಗಿದ್ದ ನಾಲ್ವರು ಅಪರಾಧಿಗಳ ಪೈಕಿ ಇಬ್ಬರಿಗೆ 5 ವರ್ಷಗಳ ಕಾಲ ಸೆರೆವಾಸ, 50 ಸಾವಿರ ರೂ.ದಂಡ, ದಂಡ ಪಾವತಿಸಲು ವಿಫಲರಾದರೆ 6 ತಿಂಗಳ ಜೈಲು ಶಿಕ್ಷೆ ವಿಧಿಸಿ ಅಪರ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಆದೇಶಿಸಿದೆ.
ಹನೂರು ತಾಲೂಕಿನ ಕೆ.ಕೆ.ಡ್ಯಾಂ ಗ್ರಾಮದ ಮಾದೇವ (ಎ1 ), ಕುಂಬೇಗೌಡ (ಎ2), ರಂಗ (ಎ3), ಅಬ್ದುಲ್ ಜಾಬೀರ್ (ಎ4) ಅಪರಾಧಿಗಳು. ಈ ಪೈಕಿ ಮಾದೇವ, ರಂಗ ಶಿಕ್ಷೆಗೆ ಗುರಿಯಾದವರು. ಎರಡನೇ ಆರೋಪಿ ಕುಂಬೇಗೌಡ ವಿಚಾರಣೆ ಸಮಯದಲ್ಲಿ ಮೃತಪಟ್ಟಿದ್ದಾನೆ. ನಾಲ್ಕನೇ ಆರೋಪಿ ಅಬ್ದುಲ್ ಜಬೀರ್ ಆರೋಪದಿಂದ ಮುಕ್ತನಾಗಿದ್ದು ನ್ಯಾಯಾಲಯದಿಂದ ಬಿಡುಗಡೆಯಾಗಿದ್ದಾನೆ.
2020 ಸೆ.16ರಂದು ಅರಣ್ಯ ಸಿಬ್ಬಂದಿ ರಸುಲ್ ವಾಲಿಕರ್ ಮತ್ತು ಸಿಬ್ಬಂದಿ ಮಧ್ಯಾಹ್ನ 3 ಗಂಟೆ ಸುಮಾರಿನಲ್ಲಿ ಲೊಕ್ಕನಹಳ್ಳಿ ಕಳ್ಳಬೇಟೆ ಶಿಬಿರದಿಂದ ಲೊಕ್ಕನಹಳ್ಳಿ ಸೂಲರ್ ಗೇಟ್ ಕಡೆಗೆ ತೆರಳುತ್ತಿದ್ದರು. ಈ ವೇಳೆ ಮಾದೇವ, ರಂಗ, ಕುಂಬೇಗೌಡ 16 ಕೆಜಿ ಹಸಿ ಶ್ರೀಗಂಧದ ತುಂಡುಗಳು ಮತ್ತು ಚಕ್ಕೆಗಳನ್ನು ಬ್ಯಾಗ್‌ನಲ್ಲಿ ಸಾಗಣೆ ಮಾಡುತ್ತಿದ್ದಾಗ ಅರಣ್ಯ ಸಿಬ್ಬಂದಿ ಮಾಲು ಸಮೇತ ಬಂಧಿಸಿದ್ದರು. ಈ ವೇಳೆ ವಿಚಾರಣೆ ನಡೆಸಿದಾಗ ಅಬ್ದುಲ್ ಜಾಬೀರ್ ಎಂಬಾತನಿಗೆ ಮಾರಾಟ ಮಾಡುವುದಾಗಿ ತಿಳಿಸಿದ್ದಾರೆ. ಬಳಿಕ ಸಿಬ್ಬಂದಿ ಅಬ್ದುಲ್ ಜಾಬೀರ್‌ನನ್ನು ಬಂಧಿಸಿ ಅರಣ್ಯ ಕಾಯ್ದೆಯಡಿ ದೂರು ದಾಖಲಿಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ವಿಚಾರಣೆ ನಡೆಸಿದ ಅಪರ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ನ್ಯಾಯಾಧೀಶ ಟಿ.ಸಿ.ಶ್ರೀಕಾಂತ್ ಅಪರಾಧಿಗಳಾದ ಮಾದೇವ, ರಂಗನಿಗೆ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ಪಬ್ಲಿಕ್ ಪ್ರಾಸಿಕ್ಯೂಟರ್ ಬಿ.ಪಿ.ಮಂಜುನಾಥ ವಾದ ಮಂಡಿಸಿದ್ದರು.