ಕೊಳ್ಳೇಗಾಲ: ಗುಂಡಾಲ್ ಜಲಾಶಯದ ಅಚ್ಚುಕಟ್ಟು ಪ್ರದೇಶಕ್ಕೆ ಒಳಪಡುವ 5,100 ಎಕರೆ ಪ್ರದೇಶಕ್ಕೆ ಸಮನಾಗಿ ನೀರು ಹರಿಸಬೇಕೆನ್ನುವ ರೈತರ ಹೋರಾಟಕ್ಕೆ ಕೊನೆಗೂ ನ್ಯಾಯ ಸಿಕ್ಕಿದೆ.
ಅನಿರ್ದಿಷ್ಟಾವಧಿ ಧರಣಿ ನಡೆಸುತ್ತಿದ್ದ ರೈತರಿಗೆ ಶಾಸಕ ಎಂ.ಆರ್.ಮಂಜುನಾಥ್ ಕೊಟ್ಟ ಮಾತಿನಂತೆ ನೀರಿನ ಸಮಸ್ಯೆ ಬಗೆಹರಿಸಿದ್ದು ಗುಂಡಾಲ್ ಜಲಾಶಯ ಹಳೆಯ ಸ್ಥಿರ ಅಚ್ಚುಕಟ್ಟು ಕಟ್ಟು ರೈತರ ಮೊಗದಲ್ಲಿ ಖುಷಿ ತಂದಿದೆ. ಗುಂಡಾಲ್ ಜಲಾಶಯ ಹಳ್ಳದಿಂದ ಬರುವ ನೀರು ಚಿಕ್ಕಿಂದುವಾಡಿ ಹೊರವಲಯದಲ್ಲಿರುವ ದುರ್ಗಿ ಕಟ್ಟೆಗೆ ಬರುವ ನೀರು ಕವಲೊಡೆದು 2 ಭಾಗಗಳಾಗಿ ಹರಿಯುತ್ತದೆ. ಈ ಪೈಕಿ ಒಂದು ಭಾಗವಾದ ಪಾಳ್ಯಕೆರೆ ಮೂಲಕ ಸುಮಾರು 800 ಎಕರೆ ಕೃಷಿ ಭೂಮಿಗೆ ನೀರುಣಿಸಬೇಕಿದೆ. ಮತ್ತೊಂದು ಭಾಗವಾದ ದೊಡ್ಡರಂಗನಾಥ ಕೆರೆ ಮೂಲಕ ಮುಂದುವರಿದು ಚಿಕ್ಕರಂಗನಾಥ ಕೆರೆ, ಕೊಂಗಳಗೆರೆ, ತಟ್ಟಕೆರೆ, ಹಂಪಾಪುರ ಕೆರೆ, ಪಾಪನಕೆರೆ, ಧನೆಗೆರೆ ಕೆರೆಗೆ ಒಟ್ಟು 4,300 ಎಕರೆ ಕೃಷಿ ಭೂಮಿಗೆ ನೀರು ಸರಬರಾಜು ಮಾಡಬೇಕಿದೆ.
ಮೂರು ದಶಕಗಳಿಂದ ದುರ್ಗಿ ಕಟ್ಟೆಯಿಂದ ಪಾಳ್ಯಕೆರೆ ವ್ಯಾಪ್ತಿಯ 800 ಎಕರೆಗೆ ಶೇ.87 ನೀರು ಹರಿಸಲಾಗುತ್ತಿದೆ. 4,300 ಎಕರೆ ಪ್ರದೇಶವಿರುವ ದೊಡ್ಡರಂಗನಾಥ ಕೆರೆ ಭಾಗಕ್ಕೆ ಕೇವಲ ಶೇ.13 ನೀರು ಬಿಡಲಾಗುತ್ತಿದೆ. ಇದರಿಂದ ಈ ಭಾಗದ ರೈತರಿಗೆ ಅನ್ಯಾಯವಾಗುತ್ತಿದೆ. ಒಂದು ಕಣ್ಣಿಗೆ ಸುಣ್ಣ ಮತ್ತೊಂದು ಕಣ್ಣಿಗೆ ಬೆಣ್ಣೆ ಎಂಬಂತಾಗಿತ್ತು. ನ್ಯಾಯಯುತವಾಗಿ ಗುಂಡಾಲ್ ನೀರನ್ನು ಒದಗಿಸಲಾಗುತ್ತಿಲ್ಲ ಎಂದು ರೈತ ಸಂಘಟನೆಗಳು ನಿರಂತರವಾಗಿ ಧರಣಿ, ಹೋರಾಟಗಳು ನಡೆದಿದ್ದವು.
ಇದರಿಂದ ಬೇಸತ್ತಿದ್ದ ಗುಂಡಾಲ್ ಜಲಾಶಯ ಹಳೇ ಸ್ಥಿರ ಅಚ್ಚುಕಟ್ಟು ಪ್ರದೇಶ ರೈತರ ಹಿತರಕ್ಷಣಾ ಸಂಘದ ಪದಾಧಿಕಾರಿಗಳು ಸತತವಾಗಿ ಕೊಳ್ಳೇಗಾಲದ ಕಬಿನಿ ಕಚೇರಿ ಮುಂಭಾಗ 42 ದಿನಗಳ ಕಾಲ ಅನಿರ್ದಿಷ್ಟಾವಧಿ ಧರಣಿ ಹೂಡಿದ್ದರು. ಈ ಬಗ್ಗೆ ಮಾಹಿತಿ ತಿಳಿದ ಹನೂರು ವಿಧಾನಸಭಾ ಕ್ಷೇತ್ರದ ಶಾಸಕ ಎಂ.ಆರ್.ಮಂಜುನಾಥ್ ಧರಣಿ ಸ್ಥಳಕ್ಕೆ ಖುದ್ದು ಭೇಟಿ ನೀಡಿ ರೈತರ ಮನವಿ ಆಲಿಸಿ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದರು.
ಹೋರಾಟಗಾರರಿಗೆ ಕೊಟ್ಟ ಮಾತಿನಂತೆ ಶಾಸಕ ಎಂ.ಆರ್.ಮಂಜುನಾಥ್ ಗುಂಡಾಲ್ ಜಲಾಶಯ ವ್ಯಾಪ್ತಿಯ ಕೆರೆ, ಕಾಲುವೆಗಳಿಗೆ ಭೇಟಿ ನೀಡಿದ್ದು ವಾಸ್ತವ ಸ್ಥಿತಿ ಅವಲೋಕಿಸಿದರು. ನೀರಾವರಿ ಇಲಾಖೆ ಅಧಿಕಾರಿಗಳ ಜತೆ ಸುದೀರ್ಘ ಚರ್ಚೆ ನಡೆಸಿದರು. ದುರ್ಗಿ ಕಟ್ಟೆಗೆ ತೆರಳಿ ಎರಡು ಭಾಗದ ಕೃಷಿ ಪ್ರದೇಶದ ಲೆಕ್ಕಾಚಾರಕ್ಕೆ ಅನುಗುಣವಾಗಿ ಪಾಳ್ಯ ಕೆರೆ ಭಾಗದ 800 ಎಕರೆ ಪ್ರದೇಶಕ್ಕೆ ಶೇ.13, ದೊಡ್ಡರಂಗನಾಥ ಕೆರೆ ಭಾಗದಲ್ಲಿ ಬರುವ 4,300 ಎಕರೆ ಪ್ರದೇಶಕ್ಕೆ ಶೇ.87 ನೀರು ಸರಬರಾಜು ಮಾಡಿ ಎರಡು ಭಾಗದ ರೈತರಿಗೂ ನ್ಯಾಯ ಕೊಡಿಸುವ ಕೆಲಸ ಮಾಡಿದ್ದಾರೆ. ಇದರಿಂದ ದೀರ್ಘ ಕಾಲದ ರೈತರ ಬೇಡಿಕೆಗೆ ಕೊನೆಗೂ ಮುಕ್ತಿ ದೊರಕಿದಂತಾಗಿದೆ.
ಜೀವನಾಡಿ
ಹನೂರು ಹಾಗೂ ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ರೈತರಿಗೆ ಗುಂಡಾಲ್ ಜಲಾಶಯ ಜೀವನಾಡಿಯಾಗಿದೆ. ಗುಂಡಾಲ್ ಜಲಾಶಯ ವ್ಯಾಪ್ತಿಯಲ್ಲಿ ಒಟ್ಟು 15 ಸಾವಿರ ಎಕರೆ ಕೃಷಿ ಭೂಮಿ ಇದೆ. ಗುಂಡಾಲ್ ಜಲಾಶಯ 0.97 ಟಿಎಂಸಿ ನೀರು ಸಾಮರ್ಥ್ಯ ಹೊಂದಿದೆ. 5,100 ಎಕರೆ ಭತ್ತ, 2 ಸಾವಿರ ಎಕರೆಯಲ್ಲಿ ಅರೆ ಬೆಳೆ ಬೆಳೆಯಲಾಗುತ್ತದೆ. ರೈತರ ಬೇಡಿಕೆಯಂತೆ ಶಾಸಕರ ಸಮಾಕ್ಷಮದಲ್ಲಿ ಪಾಳ್ಯ ಕೆರೆ ಮತ್ತು ದೊಡ್ಡರಂಗನಾಥ ಕೆರೆ, ಎರಡು ಭಾಗಕ್ಕೂ ದುರ್ಗಿಕಟ್ಟೆಯಿಂದ ಕೃಷಿ ಭೂಮಿಗೆ ಅನುಗುಣವಾಗಿ ನೀರು ಹರಿಸಲಾಗುತ್ತಿದೆ ಎಂದು ಕಬಿನಿ ಎಇಇ ರಮೇ ಶ್ ತಿಳಿಸಿದ್ದಾರೆ.
ಶಾಸಕರ ಕಾರ್ಯಕ್ಕೆ ಮೆಚ್ಚುಗೆ
ಮೂರು ದಶಕಗಳಿಂದ ಕಣ್ಣಾಮುಚ್ಚಾಲೆ ಆಟವಾಡುತ್ತಿದ್ದ ಸಮಸ್ಯೆಗೆ ಶಾಸಕ ಎಂ.ಆರ್.ಮಂಜುನಾಥ್ ಪರಿಹಾರ ಮಾರ್ಗ ನೀಡಿದ್ದಾರೆ. ಇದು ಈ ಭಾಗದ ರೈತರ ಮೊಗದಲ್ಲಿ ಮಂದಹಾಸ ತಂದಿದೆ. ಶಾಸಕರ ಕಾರ್ಯಕ್ಕೆ ಗುಂಡಾಲ್ ಜಲಾಶಯ ಸ್ಥಿರ ಅಚ್ಚುಕಟ್ಟು ಪ್ರದೇಶದ ರೈತರ ಹಿತರಕ್ಷಣಾ ಸಮಿತಿ ರೈತರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಮೊದಲ ಹಂತದ ಹೋರಾಟಕ್ಕೆ ಜಯ ದೊರೆತಿದೆ. ಮೂರು ದಶಕಗಳಿಂದ ಗುಂಡಾಲ್ ಹಳ್ಳದಿಂದ ಹರಿದು ದುರ್ಗಿಕಟ್ಟೆ ಸೇರುತ್ತಿದ್ದ ನೀರು ದೊಡ್ಡರಂಗನಾಥ ಕೆರೆ ಭಾಗದ 4300 ಎಕರೆಗೆ ಪ್ರದೇಶಕ್ಕೆ ಅಗತ್ಯಕ್ಕೆ ತಕ್ಕಂತೆ ಬರುತ್ತಿರಲಿಲ್ಲ. ಈ ಕಾರಣ ನಿರಂತರವಾಗಿ ನಮ್ಮ ಸಂಘ ಹೋರಾಟ ನಡೆಸುತ್ತಿತ್ತು. ಇದೀಗ ಶಾಸಕ ಎಂ.ಆರ್.ಮಂಜುನಾಥ್ ನಮ್ಮ ಹೋರಾಟಕ್ಕೆ ಸ್ಪಂದಿಸಿದ್ದಾರೆ. ನ್ಯಾಯಯುತವಾಗಿ ಈ ಭಾಗಕ್ಕೆ ಸಿಗಬೇಕಾದ ನೀರನ್ನು ಕೊಡಿಸಿದ್ದಾರೆ. ಮುಂದೆ, ಕೆರೆ, ಕಾಲುವೆ ಅಭಿವೃದ್ಧಿ ಮಾಡುವ ಭರವಸೆ ನೀಡಿದ್ದಾರೆ.ದಶರಥ್, ಅಧ್ಯಕ್ಷ, ಗುಂಡಾಲ್ ಜಲಾಶಯ ಹಳೆ ಸ್ಥಿರ ಅಚ್ಚುಕಟ್ಟು ಪ್ರದೇಶದ ರೈತರ ಹಿತರ ಕ್ಷಣಾ ಸಂಘ
ಗುಂಡಾಲ್ ಜಲಾಶಯ ವ್ಯಾಪ್ತಿಯ ಕೆರೆ, ಕಾಲುವೆ ಸಮಸ್ಯೆಗಳನ್ನು ವೀಕ್ಷಣೆ ಮಾಡಿದ್ದೇನೆ. ಮುಂದಿನ ದಿನಗಳಲ್ಲಿ ಗುಂಡಾಲ್ ಜಲಾಶಯ ವ್ಯಾಪ್ತಿಯಲ್ಲಿ ರೈತರಿಗೆ ಅನುಕೂಲವಾಗುವಂತೆ ಅಭಿವೃದ್ಧಿ ಕೆಲಸ ಮಾಡಲಾಗುವುದು. ಸದ್ಯ ರೈತರಿಗಾಗಿದ್ದ ನೀರಿನ ಸಮಸ್ಯೆ ಬಗೆಹರಿಸಿದ್ದೇನೆ. ದುರ್ಗಿಕಟ್ಟೆಯಿಂದ ಎರಡು ಭಾಗದ ರೈತರಿಗೂ ನೀರು ಹರಿಯುತ್ತಿದೆ.ಎಂ.ಆರ್.ಮಂಜುನಾಥ್, ಶಾಸಕ, ಹನೂರು ವಿಧಾನಸಭಾ ಕ್ಷೇತ್ರ