

ಕೊಳ್ಳೇಗಾಲ: ತಾಲೂಕಿನ ಮಲೆ ಮಹದೇಶ್ವರ ವನ್ಯಜೀವಿ ವಿಭಾಗ ಕೊಳ್ಳೇಗಾಲ ಬಫರ್ ವಲಯದ ಸತ್ತೇಗಾಲ ಜಾಗೇರಿ ಶಾಖೆ ಮತ್ತು ಭರಚುಕ್ಕಿ ಗಸ್ತಿನ ವ್ಯಾಪ್ತಿಗೆ ಬರುವ ಜಾಗೇರಿ ಮೀಸಲು ಅರಣ್ಯ ಪ್ರದೇಶದ ಕೇಂಬಾರೆ ಅರಣ್ಯ ಪ್ರದೇಶದಲ್ಲಿ ಅರಣ್ಯಾಧಿಕಾರಿಗಳು ಶನಿವಾರ ಒತ್ತು ವರಿ ಕಾರ್ಯಾಚರಣೆ ನಡೆಸಿದರು.
ಸುಮಾರು 4 ಎಕರೆ ಅರಣ್ಯ ಪ್ರದೇಶವನ್ನು 2018ರಲ್ಲಿ ಅಕ್ರಮವಾಗಿ ಒತ್ತುವರಿ ಮಾಡಿದ ಸಂಬಂಧ ಬೂದಗಟ್ಟೆದೊಡ್ಡಿ ಗ್ರಾಮದ ಬಸವಬೋವಿ ಪುತ್ರ ಸ್ವಾಮಿ ಮತ್ತು ಸರೋಜಾದೇವಿ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಕೊಳ್ಳೇಗಾಲ ವನ್ಯಜೀವಿ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ನ್ಯಾಯಾಲಯದಲ್ಲಿ ಕರ್ನಾಟಕ ಅರಣ್ಯ ಕಾಯ್ದೆ 1963ರ ಕಲಂ 64ಎ ಅನ್ವಯ ಅನಧಿಕೃತ ಅರಣ್ಯ ಪ್ರದೇಶ ಒತ್ತುವರಿ ಕುರಿತು ನಡುವಳಿ ನಡೆಸಿ ಅರಣ್ಯ ಪ್ರದೇಶ ಒತ್ತುವರಿ ತೆರವುಗೊಳಿಸಲು 2019 ಡಿ.2ರಂದು ಆದೇಶಿಸಲಾಗಿತ್ತು.
ಇದೀಗ ಮಲೆ ಮಹದೇಶ್ವರ ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ.ಜಿ.ಸಂತೋಷ್ ಕುಮಾರ್ ಮಾರ್ಗದರ್ಶನದಲ್ಲಿ ಕೊಳ್ಳೇಗಾಲ ವನ್ಯಜೀವಿ ಉಪವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕೆ.ಶಿವರಾಮ್ ನೇತೃತ್ವದಲ್ಲಿ ಕೊಳ್ಳೇಗಾಲ ಬಫರ್ ವಲಯದ ವಲಯ ಅರಣ್ಯಾಧಿಕಾರಿ ಯು.ಜಿ ಭರತ್ ಹಾಗೂ ವಲಯದ ಎಲ್ಲಾ ಸಿಬ್ಬಂದಿ ಹಾಗೂ ಕೊಳ್ಳೇಗಾಲ ಗ್ರಾಮಾಂತರ ಪೊಲೀಸ್ ಸಿಬ್ಬಂದಿ ಬಂದೋಬಸ್ತಿನಲ್ಲಿ ಕಂದಾಯ ಇಲಾಖೆಯ ಸಿಬ್ಬಂದಿ ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿ ಸಹಾಯದಿಂದ ಒತ್ತುವರಿ ತೆರವುಗೊಳಿಸಲಾಗಿದೆ.
ತೆರವುಗೊಳಿಸಿದ ಸ್ಥಳದಲ್ಲಿ ಗುಂಡಿ ತೋಡಿ ನೆಡುತೋಪು ಕಾಮಗಾರಿ ಮಾಡುವ ಮುಖಾಂತರ ಮತ್ತು ಮಳೆ ನೀರು ಸಂಗ್ರಹಣಾ ಗುಂಡಿ(ಟ್ರಂಚ್) ತೆಗೆಸಿ, ಅರಣ್ಯ ಇಲಾಖೆಯ ವ್ಯಾಪ್ತಿಗೆ 10 ಎಕರೆ ಅರಣ್ಯ ಪ್ರದೇಶವನ್ನು ಸೇರ್ಪಡೆ ಮಾಡಲಾಯಿತು.
ಅರಣ್ಯಾಧಿಕಾರಿಗಳು ಒತ್ತುವರಿ ತೆರವು ಮಾಡುವ ವೇಳೆ ಸ್ಥಳೀಯ ರೈತರು ವಿರೋಧ ವ್ಯಕ್ತಪಡಿಸಿ, ಆಕ್ರೋಶ ಹೊರ ಹಾಕಿದರು.