ರೈತ ಸಂಘದ ಪದಾಧಿಕಾರಿಗಳ ಪ್ರತಿಭಟನೆ

Published on

ಕೊಳ್ಳೇಗಾಲ: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಬುಧವಾರ ಪಟ್ಟಣದ ಸೆಸ್ಕ್ ಕಚೇರಿ ಮುಂಭಾಗ ರಾಜ್ಯ ರೈತ ಸಂಘದ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು.

ಪಟ್ಟಣದ ಎಪಿಎಂಸಿ ಆವರಣದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು ನಂತರ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿ ಧಿಕ್ಕಾರ ಕೂಗಿದರು. ರೈತ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಶ್ರೀಕಂಠಸ್ವಾಮಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ರೈತರು ಹಾಗೂ ಗ್ರಾಹಕರಿಗೆ ವಿ ದ್ಯುತ್ ಸರಬರಾಜಿನ ಬಗ್ಗೆ ಮಾಹಿತಿ ನೀಡದೆ ವಿದ್ಯುತ್ ನಿಲುಗಡೆ ಮಾಡಿ ಕಿರುಕುಳ ನೀಡಲಾಗುತ್ತಿದೆ. ಇದರಿಂದ ರೈತರಿಗೆ ತುಂಬ ತೊಂದರೆಯಾಗಿದೆ ಎಂದು ದೂರಿದರು.

ಹಕ್ಕೊತ್ತಾಯಗಳು:
ತೋಟದ ಮನೆಗಳಿಗೆ ರಾತ್ರಿ ವೇಳೆ ವಿದ್ಯುತ್ ಕಡಿತ ಮಾಡುತ್ತಿರುವುದನ್ನು ನಿಲ್ಲಿಸಿ ಸಂಜೆ 6 ಗಂಟೆಯಿಂದ ಬೆಳಗಿನ ಜಾವ 6 ಗಂಟೆಯವರೆಗೆ ನಿರಂತರ ವಿದ್ಯುತ್ ನೀಡಬೇಕು. ಅಕ್ರಮ ಸಕ್ರಮ ಯೋಜನೆಯನ್ನು ಹಿಂದಿನ ಮಾದರಿ ಜಾರಿ ಮಾಡಬೇಕು. ವಿದ್ಯುತ್ ಅವಘಡಕ್ಕೆ ಒಳಗಾಗಿ ಬೆಳೆ ನಷ್ಟ ಆಗಿರುವ ರೈತರಿಗೆ ಪರಿಹಾರ ನೀಡಬೇಕು. ಇಲಾಖೆ ಸಿಬ್ಬಂದಿ ಕೇಂದ್ರ ಸ್ಥಾನಗಳಲ್ಲಿ ವಾಸಿಸಬೇಕು. ಕಬ್ಬಿಣದ ಕಂಬಗಳ ಬದಲಿಗೆ ಸಿಮೆಂಟ್ ಕಂಬಗಳನ್ನು ಅಳವಡಿಸಬೇಕು. ಹಗಲು ವೇಳೆ ಕನಿಷ್ಠ 12 ಗಂಟೆ ತ್ರೀ ಫೇಸ್ ವಿದ್ಯುತ್ ನೀಡಬೇಕು ಎಂದು ಒತ್ತಾಯಿಸಿದರು.

ಸೆಸ್ಕ್ ಎಸ್‌ಇ ಸೋಮಶೇಖರ್ ಸ್ಥಳಕ್ಕೆ ಆಗಮಿಸಿ ರೈತರ ಮನವಿ ಸ್ವೀಕರಿಸಿ ತೋಟದ ಮನೆಗಳಿಗೆ ಸಂಜೆ 6 ಗಂಟೆಯಿಂದ ಬೆಳಗಿನ ಜಾವ 6 ಗಂಟೆಯವರೆಗೆ ವಿದ್ಯುತ್ ನೀಡುವ ಭರವಸೆ ನೀಡಿದರು. ತಿಂಗಳೊಳಗೆ ವಿದ್ಯುತ್ ಅವಘಡದಿಂದ ಹಾನಿಗೊಳಗಾದವರಿಗೆ ಬೆಳೆ ಪರಿಹಾರ ನೀಡಲಾಗುತ್ತದೆ. ಜೋತು ಬಿದ್ದಿರುವ ವಿದ್ಯುತ್ ತಂತಿಗಳನ್ನು ದುರಸ್ತಿ ಮಾಡಲಾಗುವುದು. ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿ ವಾಸಿಸುವಂತೆ ಕ್ರಮವಹಿಸುತ್ತೇವೆ ಎಂದರು.

ಸೆಸ್ಕ್ ಇಇ ಅನಿತಾ, ಎಇಇ ರಾಜು ರೈತರ ಸಮಸ್ಯೆ ಆಲಿಸಿದರು. ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಗೌಡೇಗೌಡ, ತಾಲೂಕು ಅಧ್ಯಕ್ಷ ಶಿವಮಲ್ಲು, ಕಾರ್ಯದರ್ಶಿ ಪೆರಿಯಾನಾಯಗಂ, ಭಾಸ್ಕರ್, ರವಿನಾಯ್ಡು, ಮಧವನಹಳ್ಳಿ ಬಸವರಾಜು, ಮಣಿ, ಲಾರೆನ್ಸ್, ಪೊನ್ನುಸ್ವಾಮಿ, ವಸಂತ, ಮಹದೇವಸ್ವಾಮಿ, ವಾಸು, ಮಾದೇಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net