ಡಿಸಿ ಸೇರಿ 16 ಜನರಿಗೆ ನೋಟಿಸ್

25-kollegal-1
Published on

ಕೊಳ್ಳೇಗಾಲ: ಒಳಚರಂಡಿ ಮಂಡಳಿಯಿಂದ ಕೊಳ್ಳೇಗಾಲ ನಗರಸಭೆ ವ್ಯಾಪ್ತಿಯಲ್ಲಿ ಕೈಗೊಂಡಿದ್ದ ಒಳಚರಂಡಿ ಕಾಮಗಾರಿ ಪೂರ್ಣಗೊಳ್ಳದಿದ್ದರೂ ನಗರಸಭೆಗೆ ಹಸ್ತಾಂತರಿಸಿಕೊಂಡಿರುವ ಬಗ್ಗೆ ಆರೋಪಿಸಿ ಸದಸ್ಯೆಯೊಬ್ಬರು ಲೋಕಾಯುಕ್ತಕ್ಕೆ ದೂರು ನೀಡಿದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಸೇರಿದಂತೆ 16 ಜನರಿಗೆ ನೋಟಿಸ್ ಜಾರಿ ಮಾಡಿದೆ.

ಕೊಳ್ಳೇಗಾಲ ನಗರಸಭೆ ವ್ಯಾಪ್ತಿಯ 31 ವಾರ್ಡ್‌ಗಳಲ್ಲಿ ಒಳಚರಂಡಿ ಮಂಡಳಿಯಿಂದ 97.11 ಕೋಟಿ ರೂ. ವೆಚ್ಚದಲ್ಲಿ ಒಳಚರಂಡಿ ಕಾಮಗಾರಿ ಕೈಗೊಳ್ಳಲಾಗಿತ್ತು. ಆದರೆ, ಈ ಕಾಮಗಾರಿ ಪೂರ್ಣಗೊಳ್ಳುವ ಮೊದಲೇ ಇದನ್ನು ನಗರಸಭೆಗೆ ಹಸ್ತಾಂತರಿಸಲಾಗಿದೆ. ಇಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ನಗರಸಭೆ ಸದಸ್ಯೆ ಜಯಮೇರಿ ಅವರು ಜೂ.5 ರಂದು ಲೋಕಾಯುಕ್ತಕ್ಕೆ ಐವರು ಅಧಿಕಾರಿಗಳು, ನಗರಸಭೆಯ 9 ಸದಸ್ಯರು, ಗುತ್ತಿಗೆದಾರರು ಸೇರಿದಂತೆ 15 ಜನರ ವಿರುದ್ಧ ದೂರು ನೀಡಿದ್ದರು.

ಈ ಹಿನ್ನೆಲೆಯಲ್ಲಿ ಲೋಕಾಯುಕ್ತರ ನಿರ್ದೇಶನದಂತೆ ತನಿಖೆ ನಡೆಸುವ ಸಂಬಂಧ ಲೋಕಾಯುಕ್ತ ಅಪರ ನಿಬಂಧಕರು, ಬಿಡಬ್ಲುೃ ಎಸ್‌ಎಸ್‌ಬಿ ಚಾಮರಾಜನನಗರ ಇಇ ಎಸ್.ಉಮೇಶ್, ಚಾಮರಾಜನಗರ ಡಿಯುಡಿಸಿಯ ಹಿಂದಿನ ಯೋಜನಾ ನಿರ್ದೇಶಕ ಕೆ.ಸುರೇಶ್, ಕೊಳ್ಳೇಗಾಲ ನಗರಸಭೆಯ ಹಿಂದಿನ ಪ್ರಭಾರ ಎಇಇ ಸಿ.ಎಂ.ನಟರಾಜು, ಕಂದಾಯ ವಿಭಾಗದ ಹಿಂದಿನ ಎಇಇ ಗಂಗಾಧರ್, ಯುಜಿಡಿ ಕಾಮಗಾರಿ ಗುತ್ತಿಗೆದಾರ ಮೈಸೂರಿನ ರಾಮೇಗೌಡ, ಹಿಂದಿನ ಪೌರಾಯುಕ್ತ ಎಸ್.ನಂಜುಂಡಸ್ವಾಮಿ, ನಗರಸಭಾ ಮಾಜಿ ಅಧ್ಯಕ್ಷ ಎಸ್.ರಮೇಶ್, ಅವರ ಪತ್ನಿ ಮಾಜಿ ಅಧ್ಯಕ್ಷೆ ಹಾಗೂ 3ನೇ ವಾರ್ಡ್‌ನ ಹಾಲಿ ಸದಸ್ಯೆ ಸಿ.ಎನ್.ರೇಖಾ ರಮೇಶ್, 20ನೇ ವಾರ್ಡ್‌ನ ಸದಸ್ಯೆ ಸುಮೇರಾ ಬೇಗಂ, ಅವರ ಪತಿ ಮಾಜಿ ಉಪಾಧ್ಯಕ್ಷ ಅಕ್ಕಲ್ ಪಾಷ, 14ನೇ ವಾರ್ಡ್‌ನ ಸದಸ್ಯ ಎ.ಪಿ.ಶಂಕರ್, 17ನೇ ವಾರ್ಡ್‌ನ ಹಾಲಿ ಸದಸ್ಯ ಮತ್ತು ಮಾಜಿ ಅಧ್ಯಕ್ಷ ಬಸ್ತಿಪುರ ಶಾಂತರಾಜು, 30ನೇ ವಾರ್ಡ್‌ನ ಸದಸ್ಯ ಜಿ.ಎಂ.ಸುರೇಶ್ ಮತ್ತು 15ನೇ ವಾರ್ಡ್‌ನ ಸದಸ್ಯ ಎಸ್.ರಾಘವೇಂದ್ರ ಅವರಿಗೆ ಅಂಚೆ ಮೂಲಕ ನೋಟಿಸ್ ಕಳುಹಿಸಿದ್ದು ಸೆ.25ರೊಳಗೆ ಪ್ರಕರಣದ ಕುರಿತು ಅಗತ್ಯ ದಾಖಲೆಗಳೊಂದಿಗೆ ದ್ವಿಪ್ರತಿಯಲ್ಲಿ ತಮ್ಮ ಕಚೇರಿಗೆ ಸಲ್ಲಿಸುವಂತೆ ಸೂಚನೆ ನೀಡಿದ್ದಾರೆ.
ಯುಜಿಡಿ ಕಾಮಗಾರಿ ಸಂಪೂರ್ಣವಾಗದಿದ್ದರೂ ಕಾನೂನು ಬಾಹಿರವಾಗಿ ಕೊಳ್ಳೇಗಾಲ ನಗರಸಭೆಗೆ ಹಸ್ತಾಂತರ ಮಾಡಿಕೊಂಡಿರುವ ಬಗ್ಗೆ ದಾಖಲೆಗಳ ಸಮೇತ ದೂರನ್ನು ಸಲ್ಲಿಸಿದ್ದರಿಂದ, 2023 ಮೇ 30ರಂದು ಉಪವಿಭಾಗಾಧಿಕಾರಿ ಸಲ್ಲಿಸಿರುವ ತನಿಖಾ ವರದಿ ಮೇಲೆ ಕೈಗೊಂಡ ಕ್ರಮದ ಬಗ್ಗೆ ಮತ್ತು ಕೊಳ್ಳೇಗಾಲ ನಗರಸಭೆ ನಡಾವಳಿಗಳು ಮತ್ತು ಕಡತ ಕಾಣೆಯಾದ ಬಗ್ಗೆ ವರದಿಯನ್ನು ಅಗತ್ಯ ದಾಖಲಾತಿಗಳೊಂದಿಗೆ ದ್ವಿಪ್ರತಿಯಲ್ಲಿ ಕಚೇರಿಗೆ ಸೆ.25 ರೊಳಗೆ ಸಲ್ಲಿಸುವಂತೆ ಲೋಕಾಯುಕ್ತ ಅಪರ ನಿಬಂಧಕರು ಚಾಮರಾಜನಗರ ಜಿಲ್ಲಾಧಿಕಾರಿ ಶಿಲ್ಪಾನಾಗ್ ಅವರಿಗೂ ಸೂಚಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net