ಡಿ.ದೇವರಾಜ ಅರಸು ಅವರಿಗೆ ಭಾರತರತ್ನ ನೀಡಲು ಚರ್ಚೆ

20-kollegal-1
Published on

ಕೊಳ್ಳೇಗಾಲ: ಡಿ.ದೇವರಾಜ ಅರಸು ಅವರಿಗೆ ಭಾರತ ರತ್ನ ನೀಡುವ ವಿಚಾರವಾಗಿ ಸರ್ಕಾರದ ಜತೆ ಚರ್ಚಿಸುವುದಾಗಿ ಶಾಸಕ ಎ.ಆರ್.ಕೃಷ್ಣಮೂರ್ತಿ ಹೇಳಿದರು.

ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ತಾಲೂಕು ಆಡಳಿತ, ರಾಷ್ಟೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಮಾಜಿ ಮುಖ್ಯ ಮಂತ್ರಿ ಡಿ.ದೇವರಾಜ ಅರಸು ಅವರ 109ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಡಿ.ದೇವರಾಜ ಅರಸು ಅವರು ಮೇರು ರಾಜಕಾರಣಿ, ಅಪರೂಪದ ಮುಖ್ಯಮಂತ್ರಿಯಾಗಿದ್ದರು. ಬಡವರ ಪರವಾಗಿ, ಸಾಮಾಜಿಕ ನ್ಯಾಯದ ಪರವಾಗಿ ಇದ್ದರು. ಹಿಂದುಳಿದ ವರ್ಗಗಳಿಗೆ ಮೀಸಲಾತಿ ಕಲ್ಪಿಸಿ ಕೊಟ್ಟಿದ್ದಾರೆ. ತಂದೆ ಬಿ.ರಾಚಯ್ಯ ಅವರ ರಾಜಕೀಯದ ಜೀವನದಲ್ಲಿ ಡಿ.ದೇವರಾಜ ಅರಸು ಒಡನಾಡಿಯಾಗಿದ್ದರು. ಈ ರಾಜಕೀಯ ಸ್ನೇಹ ಬಹಳ ಗಟ್ಟಿಯಾಗಿತ್ತು ಎಂದು ಸ್ಮರಿಸಿದರು.

ದೇವರಾಜ ಅರಸು ಅವರು ಇಂದಿರಾಗಾಂಧಿಗೆ ರಾಜಕೀಯ ಮರುಜನ್ಮ ನೀಡಿದವರಾಗಿದ್ದಾರೆ. ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಿಂದ ಇಂದಿರಾಗಾಂಧಿ ಸ್ಪರ್ಧಿಸಿ ಗೆದ್ದಿದ್ದರು. ಇದಕ್ಕೆ ದೇವರಾಜ ಅರಸು ಅವರ ಸಹಕಾರ ಹೆಚ್ಚಿತ್ತು ಎಂದರು. ಪ್ರೊ.ಪಿ.ವಿ.ನಂಜರಾಜ ಅರಸು ಮಾತನಾಡಿ, ದೇವರಾಜ ಅರಸು ಅವರ ಸಾಮಾಜಿಕ ಕಾಂತ್ರಿಯನ್ನು ಸ್ಮರಿಸಬೇಕಿದೆ. ದಲಿತರಿಗೆ, ಶೋಷಿತರಿಗೆ ಮೀಸಲಾತಿ ನೀಡಿ ಅವರ ಅಭಿವೃದ್ಧಿ ಶ್ರಮಿಸಿದ್ದಾರೆ. ರಾಜ್ಯದ ಮುಖ್ಯ ಮಂತ್ರಿಯಾಗಿದ್ದ ಸಂದರ್ಭ ಉಳುವವನೇ ಭೂಮಿಯ ಒಡೆಯ ಕಾರ್ಯಕ್ರಮವನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಿದರು. ಪ್ರಬಲರು ತಿರುಗಿಬಿದ್ದರೂ ತಲೆ ಕೆಡಿಸಿಕೊಳ್ಳದೆ ಭ್ರಷ್ಟಾಚಾರ ಮುಕ್ತವಾದ ರಾಜಕಾರಣಿ ಆಗಿದ್ದರು. ಮಾನವೀಯ ದೃಷ್ಟಿಕೋನ ಹೊಂದಿದ್ದರು. ಬಡ ಜನರಿಗೆ ನ್ಯಾಯ ಕೊಡಿಸುವುದೇ ಅವರ ಧ್ಯೇಯವಾಗಿತ್ತು. ಅವರ ಬಳಿ ಸ್ವಂತ ಮನೆ, ಕಾರು ಕೂಡ ಇರಲಿಲ್ಲ. ಅವರ ಪತ್ನಿ ಅನಾರೋಗ್ಯಕ್ಕೆ ತುತ್ತಾಗಿ ಆಸ್ಪತ್ರೆಗೆ ದಾಖಲಾದಾಗ ಚಿಕಿತ್ಸಾ ವೆಚ್ಚಭರಿಸಲು ರೂ.12 ಸಾವಿರ ಕೂಡ ಇರಲಿಲ್ಲ ಎಂದು ಸ್ಮರಿಸಿದರು. ದೇವರಾಜ ಅರಸು ರಾಜ್ಯದ ಮುಖ್ಯಮಂತ್ರಿ ಎಂದು ಯಾವತ್ತೂ ಕೂಡ ಗರ್ವ ಪಡಲಿಲ್ಲ. ಸಾಮಾನ್ಯರಂತೆ ಬದುಕು ನಡೆಸಿದ್ದಾರೆ. ಅವರ ಸೇವೆಗೆ ಭಾರತ ರತ್ನ ನೀಡಬೇಕು ಎಂದು ಹೇಳಿದರು.

ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷ ಎಸ್.ಜಯಣ್ಣ ಮಾತನಾಡಿ, ದೇವರಾಜ ಅರಸು ಅವರ ಕಾಲ ಬಡತನ ವಿಮೋಚನಾ ಕಾಲವಾಗಿದ್ದು, ಅದನ್ನು ಮರೆಯುವಂತಿಲ್ಲ. ಇಂದಿರಾಗಾಂಧಿ ಅವರ 20 ಅಂಶಗಳ ಕಾರ್ಯಕ್ರಮಗಳಲ್ಲಿ ಒಂದಾದ ಉಳುವವನೇ ಭೂಮಿಯ ಒಡೆಯ ಕಾರ್ಯಕ್ರಮ ಅದೆಷ್ಟೋ ಬಡವರ ಬದುಕನ್ನು ಬೆಳಗಿಸಿದೆ ಎಂದರು. ಈ ಸಂದರ್ಭ ಪದವಿ ಪೂರ್ವ ಶಿಕ್ಷಣದಲ್ಲಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು. ಉಪವಿಭಾಗಾಧಿಕಾರಿ ಬಿ.ಆರ್.ಮಹೇಶ್, ಡಿವೈಎಸ್ಪಿ ಎಂ.ಧಮೇಂದ್ರ, ತಹಸೀಲ್ದಾರ್ ಎಂ.ಮಂಜುಳಾ, ನಗರಸಭೆ ಪೌರಯುಕ್ತ ಎ.ರಮೇಶ್, ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುಳಾ , ತಾ.ಪಂ. ಪ್ರಭಾರ ಕಾರ್ಯನಿರ್ವಾಹಕ ಅಧಿಕಾರಿ ಎಂ.ಶಿವಪ್ರಕಾಶ್, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಎಂ.ಶಿವರಾಜು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net