

ಕೊಳ್ಳೇಗಾಲ: ವರದಕ್ಷಿಣೆ ಕಿರುಕುಳ ನೀಡಿ ಪತ್ನಿ ಕೊಲೆಗೈದಿದ್ದ ಅಪರಾಧಿ ಪತಿಗೆ ಕೊಳ್ಳೇಗಾಲ ಅಪರ ಜಿಲ್ಲಾ ಸೆಷನ್ಸ್ ನ್ಯಾಯಾಲಯ ಜೀವಾವಧಿ ಶಿಕ್ಷೆ ಹಾಗೂ 1 ಲಕ್ಷ ರೂ. ದಂಡವಿಧಿಸಿ ತೀರ್ಪು ನೀಡಿದೆ.
ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ತೀರ್ಥ ಗ್ರಾಮದ ನಿವಾಸಿ ಹಾಗೂ ಈ ಹಿಂದೆ ಹನೂರು ತಾಲೂಕಿನಲ್ಲಿ ಪಿಡಿಒ ಆಗಿದ್ದ ಆನಂದ ಶ್ಯಾಮ್ ಕಾಂಬಳೆ ಬಿನ್ ಶ್ಯಾಮ್ (33) ಶಿಕ್ಷೆಗೆ ಗುರಿಯಾದ ಅಪರಾಧಿ. ಈತ ಜಮಖಂಡಿ ತಾಲೂಕಿನ ಆಲಬಾಳು ಗ್ರಾಮದ ಚಿದಾನಂದ ವಿಠಲ ಕಾಂಬಳೆ ಅವರ ಪುತ್ರಿ ವಿದ್ಯಾಶ್ರೀಯನ್ನು 2019ರ ಜು.11ರಂದು ವಿವಾಹವಾಗಿದ್ದ. ವಿವಾಹದ ವೇಳೆ 264 ಗ್ರಾಂ ಚಿನ್ನಾಭರಣವನ್ನು ವರದಕ್ಷಿಣೆಯಾಗಿ ಪಡೆದಿದ್ದ. ವಿವಾಹದ ಬಳಿಕ ಕೊಳ್ಳೇಗಾಲ ಟೌನ್ ಬಸ್ತೀಪುರ ಬಡಾವಣೆಯಲ್ಲಿ ಬಾಡಿಗೆ ಮನೆಯಲ್ಲಿ ಪತ್ನಿ ಮತ್ತು 7 ತಿಂಗಳ ಮಗುವಿನೊಂದಿಗೆ ವಾಸವಿದ್ದ.
ಆನಂದ ಶ್ಯಾಮ್ ಕಾಂಬಳೆ ಪತ್ನಿಗೆ ತವರು ಮನೆಯಿಂದ 2 ಲಕ್ಷ ರೂ. ವರದಕ್ಷಿಣೆ ತರುವಂತೆ ಕಿರುಕುಳ ನೀಡುತ್ತಿದ್ದ. ಈ ವಿಚಾರವನ್ನು ವಿದ್ಯಾಶ್ರೀ ತವರು ಮನೆಯವರಿಗೆ ತಿಳಿಸಿದ್ದಳು. ಬಳಿಕ ಕಿರುಕುಳ ನೀಡದಂತೆ ಪಾಲಕರು ತಿಳಿವಳಿಕೆ ನೀಡಿದ್ದರು. ಆದರೆ, 2022 ಮಾ.14 ರಂದು ರಾತ್ರಿ 9 ಗಂಟೆಯಲ್ಲಿ ವರದಕ್ಷಿಣೆ ಹಣ ತರುವಂತೆ ಪೀಡಿಸಿದ್ದಾನೆ. ಇದಕ್ಕೆ ನಿರಾಕರಿಸಿದ್ದರಿಂದ ಪತ್ನಿ ಕುತ್ತಿಗೆಯನ್ನು ತನ್ನ ಕೈಗಳಿಂದ ಬಲವಾಗಿ ಹಿಸುಕಿ ಕೊಲೆ ಮಾಡಿದ್ದ. ಬಳಿಕ ವಿದ್ಯಾಶ್ರೀ ತಂದೆಗೆ ಫೋನ್ ಮಾಡಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಹೇಳಿದ್ದ.
ಈ ಸಂಬಂಧ ಮಗಳ ಸಾವಿಗೆ ಅನುಮಾನ ವ್ಯಕ್ತಪಡಿಸಿ ಪಾಲಕರು ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರು ದಾಖಲಿಸಿಕೊಂಡಿದ್ದ ಪೊಲೀಸರು ವಿಚಾರಣೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶ ಟಿ.ಸಿ.ಶ್ರೀಕಾಂತ್ ತೀರ್ಪು ಪ್ರಕಟಿಸಿದರು. ಸರ್ಕಾರದ ಪರವಾಗಿ ಬಿ.ಪಿ.ಮಂಜುನಾಥ ವಾದ ಮಂಡಿಸಿದ್ದರು.