

ಕೊಳ್ಳೇಗಾಲ: ಸ್ವಾತಂತ್ರ್ಯ ಎಂಬುದು ಸುಭದ್ರ ಜೀವನದ ಅಡಿಪಾಯ ಎಂದು ಮುಡಿಗುಂಡ ಮಹಾದೇವಸ್ವಾಮಿ ಅಭಿಪ್ರಾಯಪಟ್ಟರು.
ಪಟ್ಟಣದ ಹಾರ್ಟ್‌ಫುಲ್‌ನೆಸ್ ಸಭಾಂಗಣದಲ್ಲಿ ಭಾನುವಾರ ಚಾಮರಾಜನಗರ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತು ಹಾಗೂ ಶ್ರೀ ರಾಮಚಂದ್ರ ಮಿಷನ್ ಸಂಸ್ಥೆ ವತಿಯಿಂದ ಆಯೋಜಿಸಿದ್ದ 78ನೇ ಸ್ವಾತಂತ್ರ್ಯೋತ್ಸವ ಕವಿಗೋಷ್ಠಿ ಕಾರ್ಯಕ್ರಮದಲ್ಲಿ ಮಾತನಾಡಿ, ಸ್ವಾತಂತ್ರ್ಯ ಎಂಬುದು ಭಾರತೀಯರ ಅಭಿವೃದ್ಧಿಯ ಸಂಕೇತ. ಜವಾಬ್ದಾರಿಯುತ ಜೀವನ ನಡೆಸಲು ಅದೇ ಮುನ್ನುಡಿ. ಸುಭದ್ರ ಜೀವನದ ಅಡಿಪಾಯ ಎಂದು ತಿಳಿಸಿದರು.
ಶ್ರೀರಾಮಚಂದ್ರ ಮಿಷನ್‌ನ ಹಿರಿಯ ಅಭ್ಯಾಸಿಗಳಾದ ಜಗನ್ನಾಥ್ ಶೆಟ್ಟರು ಮಾತನಾಡಿ, ಹಂಗುಗಳಿಲ್ಲದ ಜೀವನವೇ ಸ್ವಾತಂತ್ರ್ಯ ಜೀವನ. ನಮ್ಮ ಅಧ್ಯಾತ್ಮಿಕ ಸಾಧನೆಗೆ ನಾವು ಅರಿಷಡ್ವರ್ಗಗಳಿಂದ ಬಿಡುಗಡೆ ಹೊಂದಿ ಸಾಧನೆ ಮಾಡಬೇಕು. ಸರಿಯಾದದ್ದನ್ನು ಮಾಡಲು ಇರುವುದೇ ನಿಜವಾದ ಸ್ವಾತಂತ್ರ್ಯ ಎಂದರು.
ದೇವರಾಜ್ ಮಾತನಾಡಿ, 78 ವರ್ಷಗಳ ಹಿಂತಿರುಗಿ ನೋಡಿದಾಗ ನಾವು ಸಾಧಿಸಿದ್ದೇನು? ಇನ್ನೂ ಸಾಧಿಸಬೇಕಾದುದ್ದೇನು? ಎಂಬುದರ ಬಗ್ಗೆ ಪ್ರತಿಯೊಬ್ಬ ಭಾರತೀಯ ಆತ್ಮವಿಮರ್ಶೆ ಮಾಡಿಕೊಳ್ಳಬೇಕು ಎಂದರು.
ಕವಿಗಳಾದ ವೇಣು, ಸವಿತಾ ರಾಜಶೇಖರ್, ಅರುಣಾಚಲಯ್ಯ, ರಮೇಶ್, ಶಿವಣ್ಣ, ನಾಗೇಶ್ವರಿ, ಸುಧಾ, ಸುನೀತಾ, ಪ್ರಭಾಮಣಿ ಕಾವ್ಯವಾಚನ ಮಾಡಿದರು. ಚುಟುಕು ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಡಾ.ಮಧುಸೂದನ್, ರಾಜ್ಯ ಸಂಪನ್ಮೂಲ ವ್ಯಕ್ತಿ ಶಿವಣ್ಣ ಇಂದ್ವಾಡಿ, ಶಿವನಂಜು, ಕೊಳ್ಳೇಗಾಲ ಹಾರ್ಟ್‌ಫುಲ್‌ನೆಸ್ ಸಂಸ್ಥೆಯ ಸುಷ್ಮಾ, ಡಾ.ಮಧು ಇದ್ದರು.