ಜಿಲ್ಲೆ ಜಾನಪದ ಕಾವ್ಯಗಳ ತವರೂರು

Published on

ಕೊಳ್ಳೇಗಾಲ: ಚಾಮರಾಜನಗರ ಜಿಲ್ಲೆ ಜಾನಪದ ಕಾವ್ಯಗಳ ತವರೂರು ಎಂದು ಸಾಹಿತಿ ಮಹದೇವ ಶಂಕನಪುರ ಅಭಿಪ್ರಾಯಪಟ್ಟರು.
ತಾಲೂಕಿನ ಸಿದ್ದಯ್ಯನಪುರ ಗ್ರಾಮದ ಕನಕ ಭವನದಲ್ಲಿ ಇತ್ತೀಚೆಗೆ ನಡೆದ ಜಾನವಿ ಜಾನಪದ ಮತ್ತು ಸಾಂಸ್ಕೃತಿಕ ಟ್ರಸ್ಟ್ ಉದ್ಘಾಟನೆ ಮತ್ತು ನೀಲಗಾರರ ಮೇಳ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಜಿಲ್ಲೆ ಕಲೆ, ಸಾಹಿತ್ಯ, ಕ್ರೀಡೆ ಸೇರಿದಂತೆ ಅನೇಕ ಚಟುವಟಿಕೆಗಳಿಗೆ ಹೆಸರುವಾಸಿಯಾಗಿದೆ. ಈ ನಿಟ್ಟಿನಲ್ಲಿ ಜಾನಪದ ಕಲೆಗೆ ಹೆಚ್ಚು ಒತ್ತು ನೀಡಿರುವ ಜಿಲ್ಲೆ ಇದ್ದರೆ ಅದು ಚಾಮರಾಜನಗರ. ಈ ನೆಲದಲ್ಲಿ ಅಸಂಖ್ಯಾತ ಜನಪದ ಕಲಾವಿದರು, ನೀಲಗಾರರು ಜನಪದ ಕಾವ್ಯಗಳನ್ನು ಹಾಡುವುದರ ಮೂಲಕ ತಮ್ಮ ಶಕ್ತಿಯನ್ನು ಪ್ರದರ್ಶನ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಸಿದ್ದಯ್ಯನಪುರ ಗ್ರಾಮದ ಕೈಲಾಸ್‌ಮೂರ್ತಿ ಅವರು ಟ್ರಸ್ಟ್ ಉದ್ಘಾಟಿಸಿದ್ದಾರೆ. ಹಾಗಾಗಿ ಕಲಾವಿದರು ಇಂತಹ ವೇದಿಕೆಯನ್ನು ಸದುಪಯೋಗಪಡೆದುಕೊಳ್ಳಬೇಕು ಎಂದರು.

ಜನಪದ ಕಲಾವಿದರು ಶ್ರೀಮಂತರಲ್ಲ. ಹಾಗಾಗಿ ಕಲಾವಿದರು ತಮ್ಮ ಕಲೆಯನ್ನು ಪ್ರದರ್ಶನ ಮಾಡುತ್ತಿದ್ದಾರೆ. ಕಲೆ ಹಾಗೂ ಸಾಹಿತ್ಯಕ್ಕೆ ಯಾರೂ ಬೆಲೆಕಟ್ಟಲು ಸಾಧ್ಯವಿಲ್ಲ. ಇಂದಿನ ಯುಗದಲ್ಲಿ ಹೆಚ್ಚಾಗಿ ಜನರು ಮೊಬೈಲ್ ಸೇರಿದಂತೆ ಅನೇಕ ದುಶ್ಚಟಗಳಿಗೆ ಬಲಿಯಾಗುತ್ತಿದ್ದಾರೆ. ಹಾಗಾಗಿ ಮೊದಲು ಇದು ನಿಲ್ಲಬೇಕು. ವಿದ್ಯಾವಂತರು ಜಾನಪದವನ್ನು ಕಲಿತು ಹಾಡುವುದರ ಮೂಲಕ ಮೂಲ ಜನಪದ ಕಲಾವಿದರಿಗೆ ಸವಾಲಾಗಿದ್ದಾರೆ. ಇದನ್ನು ಜಾನಪದ ಅಕಾಡೆಮಿ ಹಾಗೂ ಕನ್ನಡ ಸಂಸ್ಕೃತಿ ಇಲಾಖೆ ಎಚ್ಚರಿಕೆಯಿಂದ ಮೂಲ ಜನಪದ ಗಾಯಕರಿಗೆ ಸವಲತ್ತುಗಳು ಹಾಗೂ ವೇದಿಕೆ ಸಿಗುವಂತ ಕೆಲಸವನ್ನು ಮಾಡಬೇಕು ಎಂದರು.

ಹೊಂಡರಬಾಳು ಮಠದ ನೀಲಕಂಠ ಸ್ವಾಮೀಜಿ, ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಚಾಮರಾಜು, ಜಾನವಿ ಜಾನಪದ ಮತ್ತು ಸಾಂಸ್ಕೃತಿಕ ಟ್ರಸ್ಟ್ ಸಂಸ್ಥಾಪಕ ಕೈಲಾಸ ಮೂರ್ತಿ, ಸಾಹಿತಿ ನಾಗರತ್ನಮ್ಮ, ಜಾನಪದ ಅಕಾಡೆಮಿ ಸದಸ್ಯ ಡಾ.ಉಮೇಶ್ ಮತ್ತಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net