ನೀರಾವರಿ ಇಲಾಖೆ ಕಚೇರಿ ಎದುರು ಪ್ರತಿಭಟನೆ

8-kollegal-1
Published on

ಕೊಳ್ಳೇಗಾಲ: ಕೆರೆ, ಕಟ್ಟೆಗಳಿಗೆ ಕಬಿನಿ ನಾಲೆಯ ಮೂಲಕ ನೀರು ತುಂಬಿಸುವಂತೆ ಒತ್ತಾಯಿಸಿ ಗುಂಡಾಲ್ ಜಲಾಶಯದ ಸ್ಥಿರ ಅಚ್ಚುಕಟ್ಟು ಪ್ರದೇಶದ ಹಿತರಕ್ಷಣಾ ಸಮಿತಿ ಪದಾಧಿಕಾರಿಗಳು ಗುರುವಾರ ಪಟ್ಟಣದ ನೀರಾವರಿ ಇಲಾಖೆ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು.

ಗುಂಡಾಲ್ ಜಲಾಶಯದ ಸ್ಥಿರ ಅಚ್ಚುಕಟ್ಟು ಪ್ರದೇಶದ ಹಿತರಕ್ಷಣಾ ಸಮಿತಿ ಅಧ್ಯಕ್ಷ ದಶರಥ್ ಮಾತನಾಡಿ, ರೈತರ ಅನುಕೂಲಕ್ಕೆ ಗುಂಡಾಲ್ ಜಲಾಶಯ ವ್ಯಾಪ್ತಿಗೆ ಬರುವ ಕೆರೆಗಳನ್ನು ತುಂಬಿಸಬೇಕು. ಒತ್ತುವರಿ ಆಗಿರುವ ಕೆರೆಯ ಜಾಗವನ್ನು ತೆರವುಗೊಳಿಸಬೇಕು. ನಾಲೆಗಳಲ್ಲಿ ಹೂಳೆತ್ತುವ ಕಾಮಗಾರಿ ನಡೆದಿಲ್ಲ. ಜಂಗಲ್ ಕಟಿಂಗ್ ಮಾಡಿಲ್ಲ. ಕಾವೇರಿ ನದಿಯಲ್ಲಿ ಪ್ರವಾಹ ಉಂಟಾಗಿ ಎಲ್ಲ ನೀರು ವ್ಯರ್ಥವಾಗಿ ತಮಿಳುನಾಡಿಗೆ ಹರಿದು ಹೋಗಿದೆ. ಆದರೂ, ನಮ್ಮ ಕೆರೆಗಳಿಗೆ ನೀರು ತುಂಬಿಸಿಲ್ಲ. ಕೆರೆಯಲ್ಲಿ ನಿರ್ಮಿಸಿರುವ ಯುಜಿಡಿ ತೆರವುಗೊಳಿಸಬೇಕೆಂದು ಆಗ್ರಹಿಸಿದರು.

ರೈತರ ಸಮಸ್ಯೆ ಆಲಿಸಿದ ಕಾವೇರಿ ಮತ್ತು ಕಬಿನಿ ನಾಲಾ ವಿಭಾಗದ ಕಾರ್ಯಪಾಲಕ ಇಂಜಿನಿಯರ್ ರಮೇಶ್ ಮಾತನಾಡಿ, ಎರಡು ದಿನದಲ್ಲಿ ಕೆರೆ ಒತ್ತುವರಿ ತೆರವಿಗೆ ಕ್ರಮ ಕೈಗೊಳ್ಳುತ್ತೇವೆ. ರೈತರ ಬೇಡಿಕೆಯಂತೆ ಕೆರೆಗಳಿಗೂ ನೀರು ತುಂಬಿಸಲು ಕ್ರಮವಹಿಸುತ್ತೇವೆ ಎಂದು ಭರವಸೆ ನೀಡಿದ ನಂತರ ರೈತ ಮುಖಂಡರು ಪ್ರತಿಭಟನೆ ಕೈಬಿಟ್ಟರು. ಚಾಮರಾಜ್, ದಶರಥ್, ನಟರಾಜು, ಸಿದ್ದರಾಜು, ಲಕ್ಷ್ಮಣ, ರಾಮಕೃಷ್ಣ, ಚಂದ್ರು, ರಾಜಣ್ಣ, ಮಲ್ಲಣ್ಣ, ಮೂರ್ತಿ, ಕಂಪೇಗೌಡ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net