ಸಹಜ ಜೀವನಕ್ಕೆ ಮರಳಲು ಹೆಣಗಾಟ

8-kollegal-2,,
Published on

ಕೊಳ್ಳೇಗಾಲ: ಕಾವೇರಿ ನದಿ ಪ್ರವಾಹ ಸಂಕಷ್ಟಕ್ಕೆ ಸಿಲುಕಿ ಜನರು ಗ್ರಾಮ ತೊರೆದು ಕಾಳಜಿ ಕೇಂದ್ರ ಸೇರಿದರು. ನೆರೆ ತಗ್ಗಿದ ಮೇಲೆ ಗ್ರಾಮಗಳಿಗೆ ಮರಳಿಬಂದ ಜನರು ಸಹಜ ಸ್ಥಿತಿಗೆ ಮರಳಲು ಹೆಣಗಾಡುತ್ತಿದ್ದಾರೆ.

ತಾಲೂಕಿನ ಮುಳ್ಳೂರು, ಹಳೇ ಹಂಪಾಪುರ, ದಾಸನಪುರ, ಹಳೇ ಅಣಗಳ್ಳಿ, ಯಡಕೂರಿಯ ಗ್ರಾಮಗಳ ಜನರು ಪ್ರವಾಹದಿಂದ ತೊಂದರೆಗೆ ಸಿಲುಕಿ ಕಾಳಜಿ ಕೇಂದ್ರದಲ್ಲಿದ್ದರು. ಇದೀಗ ಪ್ರವಾಹದಿಂದ ಹಾನಿಗೀಡಾದ ಬಿರುಕು ಬಿಟ್ಟ ಗೋಡೆಗಳು, ಕುಸಿತಕ್ಕೆಕೊಳಗಾದ ಮನೆಗಳು, ನೀರಿನಿಂದ ವಸ್ತಿಯಾದ ಕಚ್ಚಾ ಮನೆಗಳಿಗೆ ಹಿಂದಿರುಗಿದ್ದಾರೆ. ಪ್ರವಾಹ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿತ್ತು. ಚರಂಡಿ, ತ್ಯಾಜ್ಯ ಮಿಶ್ರಿತ ನೀರು ಮನೆಯೊಳಗೆ ರಾಡಿಯಾಗಿದ್ದನ್ನು ಕಂಡು ಮರುಗುತ್ತಿದ್ದಾರೆ. ಆದರೀಗ ಈ ಮನೆಗಳನ್ನು ಶುದ್ಧಗೊಳಿಸುವುದೇ ದೊಡ್ಡ ತಲೆನೋವಾಗಿದೆ. ನೆರೆ ಬರುತ್ತದೆ ಎಂದು ಅಧಿಕಾರಿಗಳು ರಾತ್ರೋರಾತ್ರಿ ಜನರನ್ನು ಊರು ಬಿಡಿಸಿದರು. ಕಾಳಜಿ ಕೇಂದ್ರಕ್ಕೆ ಕರೆ ತಂದರು. ಆದರೆ, ನೆರೆ ತಗ್ಗಿ ಕಾಳಜಿ ಕೇಂದ್ರದಿಂದ ಮನೆಗೆ ಬಂದ ಜನರ ಪಾಡನ್ನು ಮಾತ್ರ ಹಿಂತಿರುಗಿ ಜಿಲ್ಲಾಡಳಿತ ನೋಡಲಿಲ್ಲ ಎಂದು ನೆರೆ ಪೀಡಿತ ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪರಿಹಾರ ನೀಡಿಲ್ಲ: ಪ್ರವಾಹದಿಂದ ದಾಸನಪುರ ಮುಳುಗಡೆಗೊಂಡಾಗ ಸುಮಾರು 15 ಮನೆಗಳು ಹಾನಿಯಾದವು. ಕೆಲ ಮನೆಗಳು ಬಿರುಕು ಬಿಟ್ಟಿವೆ. ಮುಳ್ಳೂರು ಗ್ರಾಮದ ನದಿ ಪಾತ್ರದ 50 ಮನೆಗಳು ಸೇರಿದಂತೆ, ದಾಸನಪುರ, ಹಳೇ ಅಣಗಳ್ಳಿ ಗ್ರಾಮದ ಬಹುಪಾಲು ಮನೆಗಳಿಗೆ ನೀರು ನುಗ್ಗಿ ಗಬ್ಬು ನಾರುತ್ತಿದೆ. ಮನೆಯೊಳಗೆ ನುಗ್ಗಿದ್ದ ಕೊಳಚೆ ನೀರು, ತ್ಯಾಜ್ಯವನ್ನು ಹೊರಹಾಕುವ ಕಾರ್ಯದಲ್ಲಿ ಜನರು ತೊಡಗಿದ್ದಾರೆ. 2019ರಲ್ಲಿ ಪ್ರವಾಹ ಸಂಭವಿಸಿದ ವೇಳೆ ನೀರು ನುಗ್ಗಿದ ಮನೆಗಳನ್ನು ಸ್ವಚ್ಛ ಮಾಡಿಕೊಳ್ಳಲು ತಕ್ಷಣಕ್ಕೆ 10 ಸಾವಿರ ರೂ. ಪರಿಹಾರ ನೀಡಲಾಗಿತ್ತು. ಆದರೆ, ಈ ಬಾರಿ ನೆರೆ ತಗ್ಗಿದ ಮೇಲೆ ಇತ್ತ ಸುಳಿದಿಲ್ಲ. ಸ್ವಚ್ಛತಾ ಪರಿಹಾರವನ್ನು ನೀಡಿಲ್ಲ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡರು.

ನೆಮ್ಮದಿ ಕೆಡಿಸಿದ ನೆರೆ
ನೆರೆ ನದಿ ಪಾತ್ರದ ಗ್ರಾಮಗಳಿಗೆ ಶಾಪವಾಗಿದೆ. ಈ ಭಾಗದ ನದಿ ಪಾತ್ರದ ಜನರ ನೆಮ್ಮದಿ ಕೆಡಿಸಿದೆ. ಕಾಳಜಿ ಕೇಂದ್ರದಿಂದ ಮನೆಗೆ ಬಂದ ಜನರು ಸಂಪೂರ್ಣವಾಗಿ ಸಹಜ ಜೀವನಕ್ಕೆ ಮರಳಲಿಲ್ಲ. ಪ್ರವಾಹ ನಂತರ ಮನೆ ಹಾನಿ ಸೇರಿದಂತೆ ಇನ್ನಿತರ ಹಾನಿ ಬಗ್ಗೆ ಸರ್ವೇ ನಡೆಸಿ ಪರಿಹಾರ ನೀಡುವ ಭರವಸೆಯನ್ನು ಅಧಿಕಾರಿಗಳು ನೀಡಬೇಕಿತ್ತು. ಆದರೆ, ಆ ಕೆಲಸವಾಗಿಲ್ಲ. ನದಿಯಲ್ಲಿ ನೀರಿದೆ ಎಂದು ಲಕ್ಷಾಂತರ ರೂ. ವ್ಯಯಿಸಿ ಜಲಪಾತೋತ್ಸವ ಸಮಾರಂಭ ಮಾಡುತ್ತಿದ್ದಾರೆ. ಇದು ಬೆಕ್ಕಿಗೆ ಆಟ, ಇಲ್ಲಿಗೆ ಪ್ರಾಣ ಸಂಕಟ ಎಂಬಂತಾಗಿದೆ ಎಂದು ಗ್ರಾಮಗಳ ಪ್ರಜ್ಞಾವಂತ ಯುವಕರು ಬೇಸರ ವ್ಯಕ್ತಪಡಿಸಿದ್ದಾರೆ.

ಪರಿಹಾರ ಪ್ರಕ್ರಿಯೆ ಜರೂರಾಗಲಿ
ಕಬಿನಿ ಹಾಗೂ ಕೆಆರ್‌ಎಸ್ ಜಲಾಶಯ ಭರ್ತಿಯಾದ ನಂತರ 2.20 ಲಕ್ಷ ಕ್ಯೂಸೆಕ್ ನೀರನ್ನು ನದಿಗೆ ಬಿಡಲಾಗಿತ್ತು. ಹಾಗಾಗಿ ಜು.31 ರಂದು ತಡರಾತ್ರಿ ತಾಲೂಕಿನ ನದಿ ಪಾತ್ರದ ಗ್ರಾಮಗಳಾದ ಮುಳ್ಳೂರು, ಹಳೇಅಣಗಳ್ಳಿ, ಹಳೇ ಹಂಪಾಪುರ, ಹರಳೆ, ದಾಸನಪುರ, ಯಡಕೂರಿಯ ಗ್ರಾಮಗಳು ಜಲಾವೃತವಾದವು. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲಾಡಳಿತ 6 ಕಡೆ ತೆರೆಯಲಾಗಿದ್ದ ಕಾಳಜಿ ಕೇಂದ್ರಗಳಿಗೆ ಸುಮಾರು 950ಕ್ಕೂ ಹೆಚ್ಚು ಜನರನ್ನು ಕರೆದೊಯ್ದು ಆಶ್ರಯ ನೀಡಿದರು. ಊಟೋಪಚಾರ, ವಸತಿ, ಅಗತ್ಯ ಸೌಲಭ್ಯ ನೀಡಿದರು. ಆ.2 ರಂದು ನದಿಯಲ್ಲಿ ನೀರು ತಗ್ಗಿತ್ತು. ಆ.3 ರಂದು ಈ ಕಾರಣಕ್ಕೆ ತಾಲೂಕು ಆಡಳಿತ ವಾಹನಗಳಲ್ಲಿ ಕಾಳಜಿ ಕೇಂದ್ರದಿಂದ ಜನರನ್ನು ಗ್ರಾಮಗಳಿಗೆ ಕಳುಹಿಸಿಕೊಟ್ಟರು. ಆ.4 ರಂದು ಸಂತ್ರಸ್ತರು ಸಂರ್ಪೂಣವಾಗಿ ಸ್ವಗ್ರಾಮಗಳಿಗೆ ಮರಳಿದರು. ಹಾನಿಯಾದ ಹಳೆಯ ಮನೆಗಳಲ್ಲೇ ವಾಸವಿದ್ದೇವೆ. ಮನೆಯಲ್ಲಿ ಚಿಕ್ಕ ಮಕ್ಕಳಿದ್ದಾರೆ. ಅಧಿಕಾರಿಗಳು ಜರೂರಾಗಿ ಮನೆ, ಬೆಳೆ ಹಾನಿ ಸರ್ವೇ ಸಡೆಸಿ ಪರಿಹಾರ ನೀಡಬೇಕು. ಕಚ್ಚಾ ಮನೆಗಳನ್ನು ಗುರುತಿಸಿ ಹೊಸ ಮನೆ ಕಟ್ಟಿಸಿಕೊಡಬೇಕೆಂದು ಗ್ರಾಮಸ್ಥರು ಒತ್ತಾಯಿಸುತ್ತಿದ್ದಾರೆ.

2019ರಲ್ಲಿ ಉಂಟಾದ ಪ್ರವಾಹದ ವೇಳೆ ಹಾನಿಗೊಳಗಾದ ಮನೆಗಳನ್ನು ಗುರುತಿಸಿ 35 ಮನೆಗಳನ್ನು ಸರ್ಕಾರ ಕಟ್ಟಿಸಿಕೊಟ್ಟಿತ್ತು. ಈ ಬಾರಿ ಕೆಲ ಮನೆಗಳು ಹಾನಿಯಾಗಿವೆ. ಕಾಳಜಿ ಕೇಂದ್ರದಲ್ಲಿ ಸ್ವಚ್ಛತೆಗೆ ಹಣ ನೀಡುತ್ತೇವೆ ಎಂದು ಹೇಳಿ ಕಳುಹಿಸಿದ್ದರು. ಆದರೆ, 5 ದಿನವಾದರೂ ಯಾವ ಅಧಿಕಾರಿಯೂ ಬಂದು ನೋಡಿಲ್ಲ. ನಾವೇ ಮನೆಯೊಳಗಿದ್ದ ತ್ಯಾಜ್ಯ ತೆಗೆಯುತ್ತಿದ್ದೇವೆ.ಕೃಷ್ಣ, ಗ್ರಾಪಂ ಸದಸ್ಯ ದಾಸನಪುರ ಪ್ರವಾಹ ನೀರು ನುಗ್ಗಿ ಮನೆಯೊಳಗಿದ್ದ ಸಾಮಗ್ರಿಗಳು ಚೆಲ್ಲಾಪಿಲ್ಲಿಯಾಗಿವೆ. 2019ರಲ್ಲಿ ಸ್ವಚ್ಛತಾ ಕಾರ್ಯಕ್ಕೆ 10 ಸಾವಿರ ರೂ. ನೀಡಿದ್ದರು. ಅದರಂತೆ, ಜರೂರಾಗಿ ನೀರು ನುಗ್ಗಿದ ಮನೆಗಳಿಗೆ ಹಣ ನೀಡಲಿ. ಜನರಿಗೆ ಊಟಕ್ಕೂ ಸಮಸ್ಯೆ ಆಗಿದೆ. ಸಹಜ ಸ್ಥಿತಿ ತಲುಪುವವರೆಗೆ ಜನರಿಗೆ ದಿನಸಿ ಸಾಮಗ್ರಿ ನೀಡಬೇಕು. ಜಿಲ್ಲಾಡಳಿತ ಈ ಬಗ್ಗೆ ಕ್ರಮವಹಿಸಬೇಕು.ಮುಳ್ಳೂರು, ಗ್ರಾಪಂ ಉಪಾಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net