ಕೊಳ್ಳೇಗಾಲ: ಸಮಾಜ ಹಾಗೂ ಮಠಾಧಿಪತಿಗಳ ನಡುವೆ ಉತ್ತಮ ಬಾಂಧವ್ಯ ಇರಬೇಕು ಎಂದು ಸಾಲೂರು ಬೃಹ್ಮಮಠದ ಪೀಠಾಧಿಪತಿ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಹೇಳಿದರು.
ಪಟ್ಟಣದ ಶ್ರೀ ವೆಂಕಟೇಶ್ವರ ಮಹಲ್‌ನಲ್ಲಿ ಮಂಗಳವಾರ ನಂದೀಶ್ ಗೆಳೆಯರ ಬಳಗ ವತಿಯಿಂದ ಚಾಮರಾಜನಗರ ಜಿಲ್ಲಾ ವೀರಶೈವ ಲಿಂಗಾಯತ ಮಹಾಸಭಾ ಅಧ್ಯಕ್ಷರು ಹಾಗೂ ಪದಾಧಿಕಾರಿಗಳಿಗೆ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು. ಸಮಾಜದ ಆಂತರಿಕ ಕಲಹಕ್ಕೆ ಮಠಗಳನ್ನು ಬಳಸಿಕೊಳ್ಳಬಾರದು. ಸಮಾಜದ ಒಳಿತಿಗಾಗಿ ಮಠಗಳನ್ನು ಬಳಸಿಕೊಳ್ಳಬೇಕು. ಭಕ್ತರ ಸಲಹೆಗಳನ್ನು ಮಠಾಧಿಪತಿಗಳು ಪಡೆದುಕೊಳ್ಳಬೇಕು. ಮಠಗಳಿಗೆ ಜನರು ಸಮಸ್ಯೆಯನ್ನು ಮಾತ್ರ ತೆಗೆದು ಕೊಂಡು ಬರುತ್ತಿದ್ದಾರೆ, ಒಳ್ಳೆಯ ಚಿಂತನೆಯನಲ್ಲ. ಈ ರೀತಿ ಆಗಬಾರದು ಎಂದು ನುಡಿದರು.
ದಯವೇ ಧರ್ಮದ ಮೂಲ ಎಂದು ಬಸವಣ್ಣನವರು ತಿಳಿಸಿದ್ದಾರೆ. ಆದರೆ, ಧರ್ಮದ ಹೆಸರಲ್ಲಿ ರಾಜಕೀಯ, ವೈಭವೀಕರಣ ಮಾಡಲಾಗುತ್ತಿದೆ. ಇತ್ತೀಚೆಗೆ ನಡೆದ ವೀರಶೈವ ಲಿಂಗಾಯತ ಮಹಾಸಭಾ ಚುನಾವಣೆಯಲ್ಲಿ ಪುರುಷರು 108 ಪಂಗಡ, ಒಡಕುಗಳಿವೆ ಎಂಬುದನ್ನು ತೋರಿದರು. ಆದರೆ, ಮಹಿಳೆಯರು ಮೇಲುಗೈ ಸಾಧಿಸಿದರು. ಮಹಿಳಾ ನಿರ್ದೇಶಕರ ಅವಿರೋಧವಾಗಿ ಆಯ್ಕೆಯಾಗಿ ಒಗ್ಗಟ್ಟು ತೋರಿಸಿದರು ಎಂದು ಹೇಳಿದರು.
ಸಂಘದ ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾದ ನಂದೀಶ್ ಶ್ರೀ ಮಲೆ ಮಹದೇಶ್ವರ ಬೆಟ್ಟಕ್ಕೆ ಭೇಟಿ ನೀಡಿದ್ದರು. ಈ ವೇಳೆ ಸಂಘದಲ್ಲಿರುವ ಒಡಕುಗಳನ್ನು ಸರಿಪಡಿಸಿಕೊಂಡು ಒಗ್ಗಟ್ಟಿನಿಂದ ಹೋಗುವ ಮಾರ್ಗವನ್ನು ಹುಡುಕಿಕೊಳ್ಳಿ ಎಂದು ಹೇಳಿದ್ದೇನೆ. ಗುಂಪು ಗುಂಪಾಗಿ ಬರಬೇಡಿ, ಪರಸ್ಪರ ದೂರ ಬೇಡಿ, ಸಂಘದ ಉದ್ದೇಶಗಳನ್ನು, ಆಶೋತ್ತರಗಳನ್ನು ಪಾಲಿಸಬೇಕು ಎಂದು ಸಲಹೆ ನೀಡಿರುವುದಾಗಿ ತಿಳಿಸಿದರು.
ಮಾಜಿ ಶಾಸಕಿ ಪರಿಮಳಾ ನಾಗಪ್ಪ ಮಾತನಾಡಿ, ನಮ್ಮ ಸಮಾಜಕ್ಕೆ ಅಧಿಕಾರ ಇಳಿಮುಖವಾಗುತ್ತಿದೆ. ವಿಭಾಗ ಮಟ್ಟದ 5 ಜಿಲ್ಲೆಗಳ ಪೈಕಿ ಗುಂಡ್ಲುಪೇಟೆಯಲ್ಲಿ ಲಿಂಗಾಯತ ಸಮುದಾಯಕ್ಕೆ ಸೇರಿದ ಗಣೇಶ್ ಪ್ರಸಾದ್ ಒಬ್ಬರೇ ಶಾಸಕರಾಗಿದ್ದಾರೆ. ಈ ಬಗ್ಗೆ ಎಲ್ಲರೂ ಚಿಂತನೆ ಮಾಡಬೇಕು ಎಂದರು.
ಜನನಿ ಆಸ್ಪತ್ರೆಯ ವ್ಯೆದ್ಯ ಡಾ.ಪ್ರವೀಣ್ ಕುಮಾರ್ ಮಾತನಾಡಿ, ಸಂಘದ ಜಿಲ್ಲಾಧ್ಯಕ್ಷ ನಂದೀಶ್ ಕೋವಿಡ್ ಸಂದರ್ಭದಲ್ಲಿ ಸಮಾಜಮುಖಿಯಾಗಿ ಕೆಲಸ ಮಾಡಿದ್ದಾರೆ. ಶೈಕ್ಷಣಿಕ, ಸಾಮಾಜಿಕ, ಆರ್ಥಿಕವಾಗಿ ಸಮಾಜದ ಜನರು ಸಬಲೀಕರಣಗೊಳ್ಳಬೇಕು ಎಂದರು. ಅಖಿಲ ಭಾರತ ವೀರಶೈವ ಮಹಾಸಭಾದ ಜಿಲ್ಲಾಧ್ಯಕ್ಷ ಮೂಡ್ಲೂಪುರ ನಂದಿಶ್ ಮಾತನಾಡಿ, 2 ಬಾರಿಗೆ ಸಮಾಜದ ಜನರು ನನ್ನನ್ನು ಅಧ್ಯಕ್ಷನಾಗಿ ಆಯ್ಕೆ ಮಾಡಿದ್ದಾರೆ. ಇದು ನನ್ನ ಜವಾಬ್ದಾರಿ ಹೆಚ್ಚಿಸಿದೆ. ಸಮುದಾಯದ ನೊಂದವರ ಪರವಾಗಿ ನಾನು ನಿಲ್ಲುತ್ತೇನೆ ಎಂದು ಹೇಳಿದರು.
ಗುಂಡ್ಲುಪೇಟೆ ತಾಲೂಕು ಅಧ್ಯಕ್ಷ ರವಿ, ಯಳಂದೂರು ಅಧ್ಯಕ್ಷ ಮಹದೇವ, ಹನೂರು ಅಧ್ಯಕ್ಷ ಸೋಮಶೇಖರ್, ನಗರಸಭೆ ಸದಸ್ಯ ಜಿ.ಪಿ.ಶಂಕರ್, ಮುಖಂಡರಾದ ಶಿವಬಸಪ್ಪ, ವೀರಭದ್ರಸ್ವಾಮಿ, ಡಾ.ಶ್ವೇತಾ ಮಧುವನಹಳ್ಳಿ ಪ್ರಕಾಶ್, ನಿರ್ದೇಶಕರು ಮತ್ತಿತರಿದ್ದರು.