

ಕೊಳ್ಳೇಗಾಲ: ತಾಲೂಕಿನ ಹಳೇ ಹಂಪಾಪುರ ಗ್ರಾಮ, ಹಳೇ ಅಣಗಳ್ಳಿಗೆ ಉಪವಿಭಾಗಾಧಿಕಾರಿ ಬಿ.ಆರ್.ಮಹೇಶ್ ಶುಕ್ರವಾರ ಭೇಟಿ ನೀಡಿ ಜಲಾವೃತಗೊಂಡಿರುವ ಜಮೀನನ್ನು ವೀಕ್ಷಿಸಿದರಲ್ಲದೆ, ಸುರಕ್ಷತಾ ಕ್ರಮ ವಹಿಸುವಂತೆ ರೈತರಿಗೆ ಸಲಹೆ ನೀಡಿದರು.
ಕಾವೇರಿ ಜಲಾನಯನ ಪ್ರದೇಶಗಳಲ್ಲಿ ನಿರಂತರವಾಗಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಕಾವೇರಿ ನದಿ ಉಕ್ಕಿ ಹರಿಯುತ್ತಿರುವ ಪರಿಣಾಮ ತಾಲೂಕಿನ ಹಳೇ ಹಂಪಾಪುರ, ಹಳೇ ಅಣಗಳ್ಳಿ ಗ್ರಾಮದ ಜಮೀನುಗಳು ಜಲಾವೃತವಾಗಿತ್ತು. ಇದೀಗ ಜಿಲ್ಲಾಧಿಕಾರಿ ಸೂಚನೆ ಮೇರೆಗೆ ಎಸಿ ಭೇಟಿ ನೀಡಿದ್ದರು.
ಕಬಿನಿಯಿಂದ 30 ಸಾವಿರ ಕ್ಯೂಸೆಕ್ ಹಾಗೂ ಕೆಆರ್‌ಎಸ್‌ನಿಂದ 1 ಲಕ್ಷ ಕ್ಯೂಸೆಕ್ ನೀರನ್ನು ನದಿಗೆ ಹರಿಬಿಟ್ಟಿರುವುದರಿಂದ ಜನರು ನದಿಯ ಬಳಿ ತೆರಳಬಾರದು, ಅಲ್ಲದೆ ಮಕ್ಕಳು ಹಾಗೂ ಜಾನುವಾರುಗಳನ್ನು ನದಿಯ ಕಡೆ ಕಳುಹಿಸಿದಂತೆ ಎಚ್ಚರಿಕೆ ವಹಿಸಬೇಕು ಎಂದು ಎಸಿ ಬಿ.ಆರ್.ಮಹೇಶ್ ಸಲಹೆ ನೀಡಿದರು.
ಈಗಾಗಲೇ ತಾಲೂಕು ಹಾಗೂ ಗ್ರಾಮ ಮಟ್ಟದ ವಿಪತ್ತು ನಿರ್ವಹಣ ಸಮಿತಿ ಕಟ್ಟೆಚ್ಚರ ವಹಿಸಿದೆ. 24*7 ವಿವಿಧ ಅಧಿಕಾರಿಗಳು ಕೆಲಸ ಮಾಡುತ್ತಿದ್ದಾರೆ. ಜತೆಗೆ ಕಾಳಜಿ ಕೇಂದ್ರ ತೆರೆಯಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಜಲಾಶಯದಿಂದ ನೀರನ್ನು ಹೆಚ್ಚಿನ ಪ್ರಮಾಣದಲ್ಲಿ ಬಿಟ್ಟಿರುವ ಬಗ್ಗೆ ಮುಳ್ಳೂರು, ಹಳೇ ಹಂಪಾಪುರ, ದಾಸನಪುರ, ಹಳೇ ಅಣಗಳ್ಳಿ, ಹರಳೆ, ಯಡಕುರಿಯಾ ಇತರ ಗ್ರಾಮಗಳಲ್ಲಿ ಈಗಾಗಲೇ ಸ್ಥಳೀಯ ಗ್ರಾಮ ಪಂಚಾಯಿತಿಗಳಿಂದ ಟಾಮ್ ಟಾಮ್ ನಡೆಸಲಾಗಿದೆ. ಪೊಲೀಸ್ ಇಲಾಖೆ ಸಹಕಾರದೊಂದಿಗೆೆ ಪ್ರವಾಹ ಎದುರಿಸಲು ಕ್ರಮ ವಹಿಸಲಾಗಿದೆ. ಜಲಾವೃತವಾದ ಜಮೀನುಗಳಲ್ಲಿ ಶೇ.5 ರಷ್ಟು ಜಮೀನಿನಲ್ಲಿ ಮಾತ್ರ ಕಬ್ಬು, ಭತ್ತ ಬೆಳೆ ಇದೆ ಎಂದು ಮಾಹಿತಿ ನೀಡಿದರು.
ಗುರುವಾರ ಸಂಜೆವರೆಗೆ ನದಿ ಪಾತ್ರದಲ್ಲಿ ತುಂಬಿ ಹರಿಯುತ್ತಿದ್ದ ನದಿ ರಾತ್ರಿ ಜಮೀನುಗಳಿಗೆ ನುಗ್ಗಿದೆ. ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ನದಿಗಳಿಗೆ ನೀರನ್ನು ಹರಿ ಬಿಡುವ ಸಾಧ್ಯತೆ ಇರುವುದರಿಂದ ನದಿಯಲ್ಲಿ ಪ್ರವಾಹ ಹೆಚ್ಚಳವಾಗಿ ಯಾವುದೇ ಕ್ಷಣದಲ್ಲಾದರೂ ಅಪಾಯದ ಮಟ್ಟ ಮೀರಬಹುದು ಎಂದು ಜನ ಆತಂಕಕ್ಕೊಳಗಾಗಿದ್ದಾರೆ.