

ಕೊಳ್ಳೇಗಾಲ: ಕನಕಪುರದ ಸಮೀಪದ ಮಾಳಗಾಳು ಗ್ರಾಮದಲ್ಲಿ ದಲಿತ ಯುವಕನ ಮುಂಗೈ ಕಡಿದಿರುವ ಪ್ರಕರಣ ಖಂಡಿಸಿ ಬುಧವಾರ ಪಟ್ಟಣದ ಅಂಬೇಡ್ಕರ್ ಪ್ರತಿಮೆ ಆವರಣದಲ್ಲಿ ತಾಲೂಕು ಬಿ.ಆರ್.ಅಂಬೇಡ್ಕರ್ ಸಂಘಟನೆಗಳ ಒಕ್ಕೂಟ ಪ್ರತಿಭಟನೆ ನಡೆಸಿತು. ಪ್ರತಿಮೆ ಮುಂಭಾಗ ಸಮಾವೇಶಗೊಂಡ ಪ್ರತಿಭಟನಾಕಾರರು, ರಾಮನಗರ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ವಿರುದ್ಧ ಧಿಕ್ಕಾರ ಮೊಳಗಿಸಿದರು.
ಈ ವೇಳೆ ಮುಖಂಡ ಶೇಖರ್ ಮಾತನಾಡಿ, ಮಾಳವಾಳು ಗ್ರಾಮದಲ್ಲಿ ಜು.21 ರಂದು ದಲಿತರ ಬಡಾವಣೆಗೆ ನುಗ್ಗಿ ದೌರ್ಜನ್ಯ ಎಸಗಿದ್ದಾರೆ. ಈ ವೇಳೆ ವೈರಮುಡಿ ಅವರ ಪುತ್ರ ಅನೀಶ್ ಎಂಬಾತನ ಮೇಲೆ ಮಾರಕಾಸ್ತ್ರದಿಂದ ಹಲ್ಲೆ ನಡೆಸಲಾಗಿದೆ. ಆತನ ಮುಂಗೈ ಕಡಿದು ಹಾಕಲಾಗಿದೆ. ಮಹಿಳೆಯರು ಹಾಗೂ ಮಕ್ಕಳ ಮೇಲೆ ದೌರ್ಜನ್ಯ ಮಾಡಲಾಗಿದೆ. ಈ ಅಮಾನವೀಯ ಕೃತ್ಯ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಅಣುಕಿಸುವಂತಿದೆ. ರೌಡಿ ಶೀಟರ್ ಆಗಿ ಗಡಿಪಾರಾಗಿದ್ದ ಹರ್ಷ ಅಲಿಯಾಸ್ ಕೈಮಾ ಎಂಬಾತ ತನ್ನ ಸಹಚರರ ಜತೆಗೂಡಿ ಹಲ್ಲೆ ನಡೆಸಿದ್ದಾನೆ. ಸಿಎಂ ಸಿದ್ದರಾಮಯ್ಯ ಹಾಗೂ ರಾಮನಗರ ಜಿಲ್ಲಾಡಳಿತ 1 ವಾರದೊಳಗೆ ಈ ಬಗ್ಗೆ ಪರಿಶೀಲಿಸಿ ತಪಿಸ್ಥರಿಗೆ ಕಾನೂನು ಕ್ರಮ ಜರುಗಿಸದಿದ್ದರೆ ಕೊಳ್ಳೇಗಾಲದಿಂದ ಕನಕಪುರ ಚಲೋ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತದೆ ಎಂದು ಎಚ್ಚರಿಸಿದರು.
ವಕೀಲ ರಾಜೇಂದ್ರ ಮಾತನಾಡಿ, ಮಾಳವಾಳು ಗ್ರಾಮದಲ್ಲಿ ದಲಿತರ ಮೇಲೆ ನಿರಂತರವಾಗಿ ದೌರ್ಜನ್ಯ ನಡೆಯುತ್ತಿದೆ. ಕನಕಪುರದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಹಿಂದಿನ ವಿಧಾನಸಭೆ ಚುನಾವಣೆಯಲ್ಲಿ ಕ್ಷೇತ್ರದ ಜನ ಗೆಲ್ಲಿಸಿದ್ದಾರೆ. ಇದರಲ್ಲಿ ದಲಿತರು ಹೆಚ್ಚು ಮತ ನೀಡಿದ್ದಾರೆ. ಆದರೀಗ, ದಲಿತರ ಕೈ ಕಡಿದಿರುವುದು ಇಷ್ಟು ಮಟ್ಟಿಗೆ ಸರಿ, ಈ ಕೃತ್ಯದಲ್ಲಿ ಭಾಗಿಯಾಗಿರುವ 7 ಆರೋಪಿಗಳನ್ನು ಬಂಧಿಸದಿದ್ದರೆ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಸಿದರು. ಪ್ರತಿಭಟನಾ ಸ್ಥಳಕ್ಕೆ ತಹಸೀಲ್ದಾರ್ ಮಂಜುಳಾ ಆಗಮಿಸಿ ಮನವಿ ಸ್ವೀಕರಿಸಿದರು. ಪಿಎಸಿಸಿ ಮಾಜಿ ಅಧ್ಯಕ್ಷ ಸೋಮಶೇಖರ್, ಮುಖಂಡರಾದ ಎಸ್.ಸಿದ್ದಪ್ಪಾಜಿ, ನಟರಾಜು ಮಾಳಿಗೆ, ನಟರಾಜು, ಶಂಕರ್ ಚೇತನ್, ಜಯಶಂಕರ್, ಜೆ.ನಿಂಗರಾಜು, ರೇವಣ್ಣ ಹಳೇ ಹಂಪಾಪುರ, ತೇರಂಬಳ್ಳಿ ಗ್ರಾ.ಪಂ ಸದಸ್ಯ ಪುರುಷೋತ್ತಮ ಮತ್ತಿತರಿದ್ದರು.