ನರ್ತನ ಕಮ್ಮಟ ಕಲಾರ್ಪಣ ನೃತ್ಯ ಶಾಲೆ

24-kollegal-1,,
Published on

ಕೊಳ್ಳೇಗಾಲ: ಚಿಕ್ಕಂದಿನಿಂದಲೂ ಎಸ್.ಕಾವ್ಯಾ ಅವರಿಗಿದ್ದ ಭರತನಾಟ್ಯದ ಮೇಲಿನ ಒಲವು ಇದೀಗ ಕಲಾರ್ಪಣ ನೃತ್ಯ ಶಾಲೆ ಮೂಲಕ ನೂರಾರು ಮಕ್ಕಳ ಕಲಾತ್ಮಕ ಚಟುವಟಿಕೆ ರೂಪಿಸುವ ವೇದಿಕೆಯಾಗಿದೆ.

ಸಾಂಸ್ಕೃತಿಕನಗರಿ ಮೈಸೂರಿನ ಪಿ.ಎಸ್.ಶ್ರೀಧರಮೂರ್ತಿ ಮತ್ತು ಕೆ.ನಾಗಮಣಿ ದಂಪತಿ ಪುತ್ರಿ ಎಸ್.ಕಾವ್ಯಾಗೆ ಬಾಲ್ಯದಿಂದಲೂ ಭರತನಾಟ್ಯದ ಮೇಲೆ ಹೆಚ್ಚಿನ ಆಸಕ್ತಿ. 16ನೇ ವಯಸ್ಸಿನಲ್ಲಿ ಮೈಸೂರಿನ ಕುವೆಂಪುನಗರದ ಗಾನಭಾರತಿ ವೀಣೆ ಶೇಷಣ್ಣ ಭವನದಲ್ಲಿ ಭರತನಾಟ್ಯ ಕಲಿಕೆಗೆ ಸೇರಿದರು. ಗುರುಗಳಾದ ಡಾ.ಕೃಪಾ ಫಡ್ಕೆ, ವಿದುಷಿ ನಾಗಶ್ರೀ ಅವರ ಬಳಿ ನಾಟ್ಯಾಭ್ಯಾಸ ಮಾಡಿದರು.

ಜೂನಿಯರ್, ಸೀನಿಯರ್ ಪರೀಕ್ಷೆ ಉತ್ತೀರ್ಣರಾದರು. ಅಷ್ಟರಲ್ಲಾಗಲೇ ವಾಣಿಜ್ಯಶಾಸ್ತ್ರದ ಪದವಿ ಪೂರ್ಣಗೊಂಡಿತ್ತು. ನಂತರ ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವ ವಿದ್ಯಾಲಯದಲ್ಲಿ ಭರತನಾಟ್ಯದಲ್ಲಿ ಉನ್ನತ ಅಭ್ಯಾಸ ಕೈಗೊಳ್ಳುವ ಮೂಲಕ ಕಾವ್ಯಾ ಅವರು ಎಂ.ಎ. ನೃತ್ಯ ಪದವಿ ಗಳಿಸಿದರು. ಇದರೊಂದಿಗೆ ಕಡಕೊಳದ ಆಚಾರ್ಯ ಗುರುಕುಲದಲ್ಲಿ 1 ವರ್ಷ ಭರತನಾಟ್ಯ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸಿ ಮಕ್ಕಳಿಗೆ ತರಬೇತಿ ನೀಡಿದರು. ಕೊಳ್ಳೇಗಾಲದ ನಿವಾಸಿ ಪುನೀತ್ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ಭರತನಾಟ್ಯವನ್ನೇ ಉಸಿರಾಗಿಸಿಕೊಂಡಿದ್ದ ಕಾವ್ಯಾ ‘ನೃತ್ಯಾಸಕ್ತ’ ಗ್ರಾಮೀಣ ಹಾಗೂ ಪಟ್ಟಣದ ಮಕ್ಕಳಿಗೆ ತರಬೇತಿ ನೀಡಬೇಕೆಂದು ಸಂಕಲ್ಪ ಮಾಡಿದರು. ಇವರ ಹಂಬಲಕ್ಕೆ ಪತಿ ಪುನೀತ್ ಸಾಥ್ ನೀಡಿದರು. ಇದರ ಫಲವಾಗಿ 2019 ರಲ್ಲಿ ಕೊಳ್ಳೇಗಾಲದಲ್ಲಿ ‘ಕಲಾರ್ಪಣೆ ನೃತ್ಯ ಶಾಲೆ’ ತೆರೆದು ಕಲಾಯಾನಕ್ಕೆ ವಿನೂತನ ಚಾಲನೆ ನೀಡಿದರು. ಶ್ರೀ ವಾಸವಿ ವಿದ್ಯಾಸಂಸ್ಥೆ ಹಾಗೂ ಮಾನಸ ಶಿಕ್ಷಣ ಸಂಸ್ಥೆಯಲ್ಲೂ ಕಲಾ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸಿ ಮಕ್ಕಳಿಗೆ ಭರತ ನಾಟ್ಯದ ತರಬೇತಿ ನೀಡಿದರು.

ಭಾರತೀಯ ಸಂಸ್ಕೃತಿ ಉಳಿಸುವ ಉದ್ದೇಶ
ಸನಾತನ ಕಲೆಗಳ ತವರು ಭಾರತ. ಅದರಲ್ಲೂ ಭರತನಾಟ್ಯ ದಕ್ಷಿಣ ಭಾರತದಲ್ಲಿ ಮಹತ್ವದ ಸ್ಥಾನ ಹೊಂದಿದೆ. ಈ ಕಲಾ ಸಂಸ್ಕೃತಿ ಉಳಿಯಬೇಕೆಂಬ ಉದ್ದೇಶದಿಂದ ಓದಿನೊಂದಿಗೆ ಭರತನಾಟ್ಯ ಹವ್ಯಾಸ ಬೆಳೆಸಿಕೊಂಡವರು ಕಾವ್ಯಾ. ಕಾಲಕ್ರಮೇಣ ಭರತನಾಟ್ಯದ ಪೂರಕ ಪದವಿಗಳ ಮೇಲೆ ಆಸಕ್ತಿ ವಹಿಸಿಕೊಳ್ಳುವ ಮೂಲಕ ಕಲಾ ಸೇವೆಯಲ್ಲಿ ಸಂಪೂರ್ಣ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.

ಜೀವನ ಮೌಲ್ಯಗಳನ್ನೂ ಕಲಿಸುತ್ತದೆ:
ಭರತನಾಟ್ಯ ಕೇವಲ ನೃತ್ಯವಲ್ಲ, ಶಿಸ್ತು, ಶ್ರದ್ಧೆ, ಭಕ್ತಿ, ಗುರು-ಶಿಷ್ಯರ ಸಂಬಂಧ ಸೇರಿದಂತೆ ಜೀವನ ಮೌಲ್ಯಗಳನ್ನೂ ಕಲಿಸುತ್ತದೆ. ಪುರಾಣ, ಧರ್ಮ ಹಾಗೂ ದೈವಗಳ ಆಧಾರಿತ ಕಲಿಕೆ ಇದರಲ್ಲಿದೆ. ಗುರು-ಹಿರಿಯರಿಗೆ ಗೌರವ ಸೂಚಿಸುವುದು, ಒಳ್ಳೆಯ ಹಾಗೂ ಕೆಟ್ಟ ವಿಚಾರಗಳ ಬಗ್ಗೆ ಅರಿವು ಹೊಂದುವುದು ಮತ್ತು ದೈಹಿಕ ಹಾಗೂ ಮಾನಸಿಕವಾಗಿ ಸದೃಢಗೊಂಡು ಇತರ ಸಾಧನೆಗಳಲ್ಲೂ ಕ್ರಿಯಾಶೀಲವಾಗಿರಲು ಪೂರಕ ಮತ್ತು ಪ್ರೇರಕವಾಗಲಿದೆ ಎಂಬುದು ಕಾವ್ಯಾ ಅವರ ಅಭಿಮತ.

ತರಬೇತಿ ಸ್ಥಳ
ಪಟ್ಟಣದ ದೇವಾಂಗ ಪೇಟೆಯ ಶ್ರೀ ಮಳಿಗೆ ಮಾರಮ್ಮನ ದೇವಾಲಯ ಹಿಂಭಾಗ ಕಲಾರ್ಪಣ ನೃತ್ಯ ಶಾಲೆ ಇದೆ. ವಾರದಲ್ಲಿ ಪ್ರತಿ ಶನಿವಾರ ಸಂಜೆ 4 ರಿಂದ 7 ಮತ್ತು ಭಾನುವಾರ ಬೆಳಗ್ಗೆ 9 ರಿಂದ 12 ಗಂಟೆವರೆಗೆ ಭರತನಾಟ್ಯ ತರಬೇತಿ ನೀಡಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಕಲಾ ಶಿಕ್ಷಕಿ ಎಸ್.ಕಾವ್ಯಾ ಅವರನ್ನು ಮೊ.7204461850 ಸಂಪರ್ಕಿಸಬಹುದು.

ವಿವಿಧೆಡೆೆ ಕಲಾ ಪ್ರದರ್ಶನ
ಮೈಸೂರು ದಸರೆಯ ಭಾಗವಾದ ಯುವ ದಸರಾ, ಯುವ ಸಂಭ್ರಮದಲ್ಲಿ ಕಾವ್ಯಾ ನೃತ್ಯ ಪ್ರದರ್ಶಿಸಿದ್ದಾರೆ. ಅಮರ ಕಲಾ ಸಂಘ, ಕನ್ನಡ ರಾಜ್ಯೋತ್ಸವದ ಅಂಗವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಲಾಮಂದಿರದಲ್ಲಿ ಆಯೋಜಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮ, ಧರ್ಮಸ್ಥಳ ಶ್ರೀಮಂಜುನಾಥಸ್ವಾಮಿ ಕ್ಷೇತ್ರದಲ್ಲಿ ನಡೆಯುವ ಲಕ್ಷ ದೀಪೋತ್ಸವ ಸಮಾರಂಭ, ಗದಗಿನ ಪುಟ್ಟರಾಜ ಗವಾಯಿಗಳ ಆಶ್ರಮ, ಶಿರಸಿ, ನಂಜನಗೂಡು, ಎಚ್.ಡಿ.ಕೋಟೆ, ಕೊಳ್ಳೇಗಾಲ ಸೇರಿದಂತೆ ವಿವಿಧೆಡೆ ನೃತ್ಯ ಪ್ರದರ್ಶನ ನೀಡಿ ಸೈ ಎನಿಸಿಕೊಂಡಿದ್ದಾರೆ.

ನೂರಾರು ಮಕ್ಕಳಿಗೆ ತರಬೇತಿ
ಭರತನಾಟ್ಯ ಕಲೆಯನ್ನು ಕರಗತ ಮಾಡಿಕೊಂಡು ವಿಭಿನ್ನ ಶೈಲಿಯಲ್ಲಿ ಮಕ್ಕಳಿಗೆ ನೃತ್ಯ ಪ್ರಕಾರಗಳ ತರಬೇತಿ ನೀಡುತ್ತಿರುವ ಕಾವ್ಯಾ 5 ವರ್ಷಗಳ ಅವಧಿಯಲ್ಲಿ ನೂರಾರು ಶಿಷ್ಯರಿಗೆ ಕಲಾರ್ಪಣ ನೃತ್ಯ ವೇದಿಕೆ ಮೂಲಕ ನರ್ತನ ಕಲೆ ಧಾರೆ ಎರೆದಿದ್ದಾರೆ.

ಭರತನಾಟ್ಯ ದಕ್ಷಿಣ ಭಾರತದ ಸಂಸ್ಕೃತಿಯನ್ನು ಬಿಂಬಿಸುವ ವಿಶಿಷ್ಟ ಕಲೆ. ಈ ನೆಲದ ಸಾಂಸ್ಕೃತಿಕ ಚರಿತ್ರೆಯನ್ನು ಒಳಗೊಂಡಿದೆ. ಈ ಪರಂಪರೆಯನ್ನು ಉಳಿಸುವ ನಿಟ್ಟಿನಲ್ಲಿ ಕಲಾರ್ಪಣ ನೃತ್ಯ ಶಾಲೆ ತೆರೆಯಲಾಗಿದೆ. ಭರತನಾಟ್ಯ ಕೇವಲ ನೃತ್ಯ ಎಂದುಕೊಳ್ಳಬಾರದು. ಇದು ಎಳವೆಯಲ್ಲೇ ಶ್ರದ್ಧೆ, ಭಕ್ತಿ, ವಿನಯ ಕಲಿಕೆಗೆ ಮಹಾ ಮಾರ್ಗ. ಮಕ್ಕಳು ಶಾಲಾ ಶಿಕ್ಷಣದೊಂದಿಗೆ ನಾಟ್ಯ ತರಬೇತಿ ಕಲಿಕೆಯಲ್ಲೂ ತೊಡಗಿಸಿಕೊಂಡರೆ ದೈಹಿಕ, ಮಾನಸಿಕ ವಾಗಿ ಸದೃಢರಾಗಬಹುದು. ಜೀವನ ಮೌಲ್ಯಗಳನ್ನೂ ಕಲಿಯಬಹುದು.ಎಸ್.ಕಾವ್ಯಾಕಲಾರ್ಪಣ ನೃತ್ಯ ಶಾಲೆ ಸಂಸ್ಥಾಪಕಿ, ಕೊಳ್ಳೇಗಾಲ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net