

ಕೊಳ್ಳೇಗಾಲ: ಕಾವೇರಿ ಕಣಿವೆ ಪ್ರದೇಶದಲ್ಲಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಕಾವೇರಿ ನದಿಯಲ್ಲಿ ನೀರು ಹರಿವಿನ ಪ್ರಮಾಣ ಹೆಚ್ಚಾಗಿದ್ದು ತಾಲೂಕಿನ ಸುಪ್ರಸಿದ್ಧ ಭರಚುಕ್ಕಿ ಜಲಪಾತಕ್ಕೆ ಜೀವಕಳೆ ಬರುತ್ತಿದೆ.
ಕೇರಳ ಹಾಗೂ ರಾಜ್ಯದಲ್ಲಿ ಮುಂಗಾರು ಚುರುಕುಗೊಂಡಿದೆ. ಕಾವೇರಿ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆೆಯಾಗುತ್ತಿರುವುದರಿಂದ ಕಬಿನಿ ಹಾಗೂ ಕೆಆರ್‌ಎಸ್ ಅಣೆಕಟ್ಟು ಭರ್ತಿಯಾಗುತ್ತಿದೆ. ಅಲ್ಲದೆ, ಶನಿವಾರ ಕಬಿನಿ ಅಣೆಕಟ್ಟಿನಿಂದ 20 ಸಾವಿರ ಕ್ಯೂಸೆಕ್ ನೀರನ್ನು ಹರಿಬಿಡಲಾಗಿದೆ. ಕಳೆದ ತಿಂಗಳು ಭರಚುಕ್ಕಿ ಧುಮ್ಮಿಕ್ಕಿ ಹರಿಯುವ ಸದ್ದು ಅಡಗಿ ಹೋಗಿತ್ತು. ದೂರ ಪ್ರಯಾಣ ಬೆಳೆಸಿ ಫಾಲ್ಸ್ ನೋಡಲು ಬಂದ ಪ್ರವಾಸಿಗರಿಗೆ ನೀರಿಲ್ಲದ ಕಲ್ಲು ಬಂಡೆಗಳ ದರ್ಶನ ಬೇಸರ ಉಂಟು ಮಾಡಿತ್ತು. ಆದರೆ, 15 ದಿನಗಳಿಂದ ಉತ್ತಮ ಮಳೆಯಾಗುತ್ತಿರುವ ಜಲಪಾತದಲ್ಲಿ ಹರಿಯುವ ನೀರಿನ ಪ್ರಮಾಣ ಏರಿಕೆ ಕಂಡಿದೆ. ಈ ಹಿನ್ನೆಲೆಯಲ್ಲಿ ಶನಿವಾರ ಹಾಗೂ ಭಾನುವಾರ ರಾಜ್ಯದ ನಾನಾ ಕಡೆಗಳಿಂದ ಪ್ರವಾಸಿಗರು ಶಿವನ ಸಮುದ್ರದ ಭರಚುಕ್ಕಿ ಫಾಲ್ಸ್ ವೀಕ್ಷಣೆಗೆ ಆಗಮಿಸಿದ್ದರು. ತಣ್ಣನೆ ವಾತಾವರಣ ಮತ್ತು ಮಳೆಯ ಸಿಂಚನದ ನಡುವೆ ಜಲಪಾತ ದೃಶ್ಯವನ್ನು ಕಣ್ತುಂಬಿಕೊಂಡರು. ಮಕ್ಕಳು, ವೃದ್ಧರು ಸೇರಿದಂತೆ ಕುಟುಂಬದ ಎಲ್ಲ ಸದಸ್ಯರು ತಂಡೋಪತಂಡವಾಗಿ ಭೇಟಿ ನೀಡುತ್ತಿದ್ದಾರೆ.
ಇದೇ ರೀತಿ ವರುಣನ ಕೃಪೆ ಮುಂದುವರಿದರೆ, ಪ್ರತಿ ವರ್ಷದಂತೆ ಆಗಸ್ಟ್ ತಿಂಗಳ ಎರಡನೇ ವಾರಕ್ಕೆ ಭರಚುಕ್ಕಿ ಭೋರ್ಗರೆಯುವ ರೌದ್ರ ರಮಣೀಯ ದೃಶ್ಯವನ್ನು ಕಾಣಬಹುದಾಗಿದೆ. ಮಳೆ ಚುರುಕು ಗೊಂಡಿರುವುದರಿಂದ ಪರಿಸರ ಪ್ರೇಮಿಗಳ ಮನಸ್ಸನ್ನು ಭರಚುಕ್ಕಿ ಜಲಪಾತ ಸೆಳೆಯುತ್ತಿದೆ. ಅಂತೆಯೇ, ಶನಿವಾರ ಹಾಗೂ ಭಾನುವಾರ ಸಾವಿರಾರು ಸಂಖ್ಯೆಯಲ್ಲಿ ಶಿವನ ಸಮುದ್ರದ ಶ್ರೀ ಮಧ್ಯರಂಗನಾಥ ಸ್ವಾಮಿ ದೇವಾಲಯ, ಆದಿಶಕ್ತಿ ಮಾರಮ್ಮನ ದೇವಾಲಯ, ಸೋಮೇಶ್ವರ ದೇವಾಲಯ ಹಾಗೂ ಭರಚುಕ್ಕಿ ಫಾಲ್ಸ್ ವೀಕ್ಷಣೆ ಪ್ರವಾಸಿಗರು ಆಗಮಿಸಿ ವ್ಯಾಪಾರ ವಹಿವಾಟು ಚುರುಕು ಕಂಡಿದೆ. ಚುರುಮುರಿ, ಕೂಲ್ ಡ್ರಿಂಕ್ಸ್ ಅಂಗಡಿಗಳು, ಹಣ್ಣು ಅಂಗಡಿ, ಸಸ್ಯಾಹಾರಿ ಹಾಗೂ ಮಾಂಸಾಹಾರಿ ಹೋಟೆಲ್‌ಗಳು, ಫಿಶ್ ಪಾಯಿಂಟ್ ವ್ಯಾಪಾರಿಗಳ ಮೊಗದಲ್ಲಿ ಮಂದಹಾಸ ಮೂಡಿದೆ.