

ಕೊಳ್ಳೇಗಾಲ; ಪಟ್ಟಣದ ಲಯನ್ಸ್ ಸಭಾಂಗಣದಲ್ಲಿ 2024-25ನೇ ಸಾಲಿನ ಲಯನ್ಸ್ ಸಂಸ್ಥೆಯ ನೂತನ ಪದಾಧಿಕಾರಿಗಳ ಪದವಿ ಪ್ರಧಾನ ಸಮಾರಂಭ ಹಮ್ಮಿಕೊಳ್ಳಲಾಗಿತ್ತು.
ಸಮಾರಂಭದಲ್ಲಿ ನೂತನ ಅಧ್ಯಕ್ಷ ಬಿ.ಚಿಕ್ಕಬಸವಯ್ಯ 2023-24ನೇ ಸಾಲಿನ ಸಾಲಿನ ಅಧ್ಯಕ್ಷ ವೆಂಕಟೇಶ್ ಬಾಬು ಅವರಿಂದ ಅಧಿಕಾರ ವಹಿಸಿಕೊಂಡರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ 317ಜಿ ಲಯನ್ಸ್ ಜಿಲ್ಲೆಯ 2ನೇ ಪ್ರಾಂತಪಾಲ ಮತ್ತಿದೇವ್ ಕುಮಾರ್ ಮಾತನಾಡಿ, ನಮ್ಮ ಲಯನ್ಸ್ ಸಂಸ್ಥೆ ಇಡೀ ಪ್ರಪಂಚದಲ್ಲಿ 210 ದೇಶಗಳಲ್ಲಿ ಸೇವಾಕಾರ್ಯಗಳನ್ನು ಮಾಡುತ್ತಾ ಬಂದಿದೆ. ಅದರಲ್ಲೂ ಕೊಳ್ಳೇಗಾಲದ ಲಯನ್ಸ್ ಸಂಸ್ಥೆ 48 ವರ್ಷಗಳಿಂದ ಅನೇಕ ಕೆಲಸ ಕಾರ್ಯಗಳನ್ನು ನಿರ್ವಹಿಸುತ್ತಿದೆ. ಕಣ್ಣಿನ ಚಿಕಿತ್ಸೆಗೆ ಹೆಚ್ಚಿನ ಆದ್ಯತೆ ನೀಡಿ ಇದುವರೆಗೆ 11,500 ಸಾವಿರ ಜನರಿಗೆ ಶಸ್ತ್ರ ಚಿಕಿತ್ಸೆ ಮಾಡಲಾಗಿದೆ. ಲಕ್ಷಾಂತರ ಜನರಿಗೆ ಕಣ್ಣಿನ ಉಚಿತ ತಪಾಸಣೆ ಮಾಡಿ ಹಾಗೂ ಶಾಖೆಯನ್ನು ಉತ್ತಮವಾಗಿ ನಡೆಸುತ್ತಾ ಬಂದಿದೆ. ನಮ್ಮ 317ಜಿ ಕಬ್ಲ್‌ನಲ್ಲಿ ಕೊಳ್ಳೇಗಾಲ ಲಯನ್ಸ್ ಕ್ಲಬ್ ಉತ್ತಮ ಸೇವಾಕಾರ್ಯ ಮಾಡುತ್ತಾ ಬಂದಿರುವುದನ್ನು ಪ್ರಶಂಸಿದರು.
ಅಧ್ಯಕ್ಷ ಚಿಕ್ಕಬಸವಯ್ಯ ಮಾತನಾಡಿ, ಲಯನ್ಸ್ ಸಂಸ್ಥೆಯ ಮೂಲಕ ಬಡಜನರ ಸೇವೆ ಮಾಡುವ ಅವಕಾಶ ದೊರಕಿರುವುದು ನನ್ನ ಸೌಭಾಗ್ಯ. ಲಯನ್ಸ್ ಕ್ಲಬ್ ಹಿರಿಯ ಮಾರ್ಗದರ್ಶನದಲ್ಲಿ ಸೇವಾ ಕಾರ್ಯಗಳನ್ನು ನಡೆಸುವುದಾಗಿ ತಿಳಿಸಿದರು. 2023-24ನೇ ಸಾಲಿನಲ್ಲಿ ಸಂಸ್ಥೆಯ ಸೇವಾ ಕಾರ್ಯಗಳ ವಾರ್ಷಿಕ ವರದಿಯನ್ನು ಕಾರ್ಯದರ್ಶಿ ಚೇತನ್ ಮಂಡಿಸಿದರು. 2023-24ನೇ ಸಾಲಿನ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳಿಸಿದ ಲಯನ್ಸ್ ಶಾಲೆಯ ಮಕ್ಕಳನ್ನು ಸನ್ಮಾನಿಸಲಾಯಿತು. ಹೊಸಮಾಲಂಗಿ ಶಾಲೆಗೆ ಸೂಚನಾ ಫಲಕ ವಿತರಣೆ, ಹೊಂಡರಬಾಳು ಶಾಲೆಯ ಎಲ್ಲ ಮಕ್ಕಳಿಗೆ ಪುಸ್ತಕ ವಿತರಣೆ ಮಾಡಲಾಯಿತು.
ಲಯನ್ಸ್ ಸಂಸ್ಥೆ ಪ್ರಾಂತ್ಯ ಅಧ್ಯಕ್ಷ ಶಿವರಾಮ, ವಲಯಾಧ್ಯಕ್ಷ ಚಂದ್ರಶೇಖರ್, ನಿಕಟಪೂರ್ವ ಅಧ್ಯಕ್ಷ ನಾಗರಾಜು, ವೆಂಕಟೇಶ್ ಬಾಬು, ಖಜಾಂಚಿ ಇಂದ್ರೇಶ್, ಕಾರ್ಯದರ್ಶಿ ಚೇತನ್, ಹಿರಿಯ ಸದಸ್ಯರಾದ ಜಿಎಸ್‌ಎಂ ಪ್ರಸಾದ್, ಚನ್ನಮಾದೇಗೌಡ ಹಾಗೂ ಎಲ್ಲ ಪದಾಧಿಕಾರಿಗಳು, ಸದಸ್ಯರು ಇದ್ದರು.