ಶಿವಶರಣರ ವಿಚಾರಧಾರೆ ಮನೆಮನೆಗೂ ಮುಟ್ಟಲಿ

14-kollegal-1,,
Published on

ಕೊಳ್ಳೇಗಾಲ: ಜಾಗತಿಕ ಲಿಂಗಾಯತ ಸಮಾಜದಲ್ಲಿ ಶಿಕ್ಷಣ ಹಾಗೂ ಉದ್ಯೋಗದಿಂದ ವಂಚಿತರಾದವರನ್ನು ಗುರುತಿಸಿ ಅವರನ್ನು ಬೆಳೆಸಿದ್ದೇ ಆದರೆ, ಬೆಳೆದವರು ಜಾಗತಿಕ ಲಿಂಗಾಯತ ಧರ್ಮದ ಮಹಾಸಭಾವನ್ನು ಸದೃಢಗೊಳಿಸುತ್ತಾರೆ ಎಂದು ಶ್ರೀ ಮಲೆ ಮಹದೇಶ್ವರ ಬೆಟ್ಟದ ಸಾಲೂರು ಬೃಹನ್ಮಠದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಹೇಳಿದರು.

ಪಟ್ಟಣದ ಕೊಂಗವೀರೇಗೌಡರ ಹಾಸ್ಟೆಲ್ (ಶ್ರೀ ಗುರುಮಲ್ಲೇಶ್ವರ ಸ್ಕೂಲ್) ಆವರಣದಲ್ಲಿ ಭಾನುವಾರ ಜಾಗತಿಕ ಲಿಂಗಾಯತ ಮಹಾಸಭಾ ತಾಲೂಕು ಘಟಕ ವತಿಯಿಂದ ಆಯೋಜಿಸಿದ್ದ ಫ.ಗು. ಹಳಕಟ್ಟಿ ಜಯಂತ್ಯುತ್ಸವ ಹಾಗೂ ಸಂಘದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದರು.

ಸಭೆ, ಸಮಾರಂಭ, ಬಸವ ಜಯಂತಿ ಆಚರಣೆಗಳಿಗೆ ಹೆಚ್ಚು ಒತ್ತು ನೀಡುವ ಬದಲಿಗೆ ಗ್ರಾಮೀಣ ಭಾಗದಲ್ಲಿರುವ ಶಿಕ್ಷಣ, ಉದ್ಯೋಗದಿಂದ ದೂರವಿರುವವರಿಗೆ ನೆರವಾಗಬೇಕಿದೆ. ಅಂತೆಯೇ, ಬಸವಣ್ಣನವರ ಹಾಗೂ ಎಲ್ಲ ಶಿವಶರಣರ ವಿಚಾರಧಾರೆಗಳು ಮತ್ತು ಮಾನವೀಯ ಮೌಲ್ಯಗಳನ್ನು ಮನೆ ಮನೆಗೂ ಮುಟ್ಟಿಸಬೇಕು. ಈ ನಿಟ್ಟಿನಲ್ಲಿ ಜಾಗತಿಕ ಲಿಂಗಾಯತ ಸಮಾಜ ಕೆಲಸ ಮಾಡಬೇಕು. ಕೊಳ್ಳೇಗಾಲದ ನೂತನ ಪದಾಧಿಕಾರಿಗಳಿಗೆ ಒಳ್ಳೆಯದಾಗಲಿ ಎಂದು ಹಾರೈಸಿದರು.

ಮೈಸೂರು ಕುಂದೂರು ಮಠದ ಶ್ರೀ ಡಾ.ಶರತ್‌ಚಂದ್ರ ಸ್ವಾಮೀಜಿ ಮಾತನಾಡಿ, ಫ.ಗು ಹಳಕಟ್ಟಿ ಅವರನ್ನು ವಚನ ಶಾಸ್ತ್ರದ ಪಿತಾಮಹ ಎಂದು ಕರೆಯುತ್ತೇವೆ. ಇವರ ಸಾಧನೆ ಬಗ್ಗೆ ಹಲವರಿಗೆ ಗೊತ್ತಿಲ್ಲ. ಫ.ಗು ಹಳಕಟ್ಟಿ, ಹರಡೇಕರ್ ಮಂಜಪ್ಪ, ಧಾರವಾಡದ ಮೃತ್ಯುಂಜಯ ಅಪ್ಪಗಳವರು ಇಲ್ಲದಿದ್ದರೆ ಬಸವಣ್ಣನವರನ್ನು ಮರೆತೇ ಬಿಡುತ್ತಿದ್ದೆವು ಎಂದು ತಿಳಿಸಿದರು.

ಧಾರವಾಡದ ಮೃತ್ಯುಂಜಯ ಅಪ್ಪನವರ ಮಾತಿನಂತೆ ಲಿಂಗಾಯತ ಧರ್ಮ ದೊಡ್ಡದು. ಲಿಂಗಾಯತರು ದೊಡ್ಡವರಲ್ಲ. ಇದು ಕೇಳುವುದಕ್ಕೆ ಕಹಿಯಾದರೂ, ಅದೇ ವಾಸ್ತವ. ನಮ್ಮ ಧರ್ಮದ ವಿಚಾರವಾಗಿ ನಾವು ಮಾಡಿದ ತಪ್ಪನ್ನು ಇನ್ಯಾವ ಧರ್ಮದವರು ಮಾಡಿಲ್ಲ. ಅದೇನೆಂದರೆ ಧರ್ಮದ ಮುಖ್ಯ ಮಹಾತ್ಮರನ್ನೇ ಮರೆತ್ತಿದ್ದೆವು. 12 ಶತನಮಾನದಲ್ಲಿದ್ದ ಬಸವಣ್ಣನವರು ನಮಗೆ 150 ವರ್ಷಗಳ ಹಿಂದೆ ಗೊತ್ತಿರಲಿಲ್ಲ. ಇದು ಒಂದು ಧರ್ಮ ದ್ರೋಹ ಎಂದರು.

ಫ.ಗು ಹಳಕಟ್ಟಿ ಅವರು ಸ್ವಂತ ಮನೆ ಮಾರಾಟ ಮಾಡಿ ಪ್ರಿಂಟಿಂಗ್ ಪ್ರೆಸ್ ತೆರೆದರು. ಬಸವಣ್ಣನವರ ವಿಚಾರ ಧಾರೆಗಳು ಸಾಹಿತ್ಯಗಳನ್ನು ಪ್ರಕಟಿಸಿದರು. ಇವರು ಮಾಡಿದ ಕೆಲಸದಿಂದ ಮತ್ತೊಮ್ಮೆ ಬಸವಣ್ಣ ಹಾಗೂ ಲಿಂಗಾಯತ ಧರ್ಮ ಪರಿಚಯವಾಯಿತು. ಹೀಗಾಗಿಯೇ ಫ.ಗು ಹಳಕಟ್ಟೆ ಅವರನ್ನು ವಚನ ಶಾಸ್ತ್ರದ ಪಿತಾಮಹ ಎಂದು ಕರೆಯುತ್ತೇವೆ ಎಂದರು.
ಬಸವಣ್ಣ ಕಲಹಕ್ಕೆ, ಮಾತಿನ ಮತ್ತು ಹೊಟ್ಟೆಪಾಡಿನ ಸರಕಾಗಿದ್ದಾರೆ. ಅಲ್ಲಮ ಪ್ರಭುಗಳು ಬಸವಣ್ಣನವರು ಭೂಮಿಗೂ, ಕೈಲಾಸಕ್ಕೂ ಏಣಿ ಎಂದೇಳಿದ್ದಾರೆ. ಆದರೆ, ನಾವು ಬಸವಣ್ಣ ಅವರನ್ನು ಮರೆತು ಬಿಟ್ಟಿದ್ದೇವೆ. ಅವರನ್ನು ವಿಶ್ವಕ್ಕೆ ಸೇರಿದವರಾಗಲು ನಾವು ಬಿಟ್ಟಿದ್ದೇವೆಯೆ ? ಬಸವಣ್ಣ ಎಂಬ ದೊಡ್ಡ ಅರಳಿ ಮರವನ್ನು ಲಿಂಗಾಯತರು ಬೋನ್ಸಾಯ್ ಗಿಡವಾಗಿ ಮಾಡಿ ಬಿಟ್ಟಿದ್ದೇವೆ. ಈ ಹಿನ್ನೆಲೆಯಲ್ಲಿ ಜಾಗತಿಕ ಲಿಂಗಾಯತ ಮಹಾಸಭಾ ಬಸವ ತತ್ವವನ್ನು ಎಲ್ಲರಿಗೂ ಕಲಿಸುವ ಕೆಲಸ ಮಾಡಬೇಕಿದೆ ಎಂದರು.
ಕಾನೂನು ಸಲಹೆಗಾರ ವಕೀಲ ಆರ್.ವಿರೂಪಾಕ್ಷ ಮಾತನಾಡಿ, ಜನಗಣತಿಗೆ ಬಂದರೆ ಲಿಂಗಾಯತ ಎಂದು ಕಡ್ಡಾಯವಾಗಿ ಸಮಾಜದವರು ಬರೆಸಬೇಕು ಎಂದು ಸಲಗೆ ನೀಡಿದರು.

ಮುಡಿಗುಂಡ ವಿರಕ್ತ ಮಠದ ಪೀಠಾಧಿಪತಿ ಹಾಗೂ ಜಾಗತಿಕ ಲಿಂಗಾಯತ ಮಹಾಸಭಾ ಗೌರವಾಧ್ಯಕ್ಷ ಶ್ರೀ ಕಂಠಸ್ವಾಮೀಜಿ, ಕಾಮಗೆರೆ ಪಟ್ಟದಮಠ ಶ್ರೀ ಮಮ್ಮುಡಿ ಶಾಂತ ಮಲ್ಲಿಕಾರ್ಜುನಸ್ವಾಮಿ, ಗುಂಡೇಗಾಲ ಪಟ್ಟದಮಠ ಶ್ರೀ ಮಲ್ಲಿಕಾರ್ಜುನಸ್ವಾಮೀಜಿ, ಆಲಹಳ್ಳಿ ಪಟ್ಟದ ಮಠದ ಶ್ರೀ ಶಿವಕುಮಾರ ಸ್ವಾಮೀಜಿ, ಕುಂತೂರು ಮಠ ವೀರಸಿಂಹಾಸನ ಮಠದ ಶ್ರೀ ಶಿವಪ್ರಭುಸ್ವಾಮೀಜಿ, ಚಿಲಕವಾಡಿ ಗುರುರಾಮಯೋಗೀಶ್ವರ ಮಠದ ಶ್ರೀ ಇಮ್ಮಡಿ ಗುರುಲಿಂಗಸ್ವಾಮೀಜಿ, ಹೊಂಡರಬಾಳು ಶಂಖಿನ ಸ್ವಾಮಿ ಮಠದ ಶ್ರೀ ಪ್ರಸನ್ನ ಮಲ್ಲಿಕಾರ್ಜುನ ಸ್ವಾಮೀಜಿ, ಚಿಕ್ಕಿಂದುವಾಡಿ ಪಟ್ಟದ ಮಠದ ಶ್ರೀ ಬಾಲ ಷಡಕ್ಷರಿ ಸ್ವಾಮೀಜಿ, ಕೊಳ್ಳೇಗಾಲದ ದಾಸೋಹ ಮಠದ ಶ್ರೀ ಶಿವಪ್ಪಸ್ವಾಮೀಜಿ, ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ಜಿ.ಗುರುಸ್ವಾಮಿ (ಕಾಳನಹುಂಡಿ), ಕಾನೂನು ಸಲಹೆಗಾರ ವಕೀಲ ಆರ್.ವಿರುಪಾಕ್ಷ, ಜಿಲ್ಲಾ ಕೋಶಾಧ್ಯಕ್ಷ ಎನ್.ಶಿವಪ್ರಸಾದ್, ಉಪಾಧ್ಯಕ್ಷ ಎಸ್.ಸುಂದ್ರಪ್ಪ, ತಾಲೂಕು ಅಧ್ಯಕ್ಷ ಎಂ.ಲೋಕೇಶ್ (ಬಿಂದು) ಹಾಗೂ ಸಂಘದ ಪದಾಧಿಕಾರಿಗಳು, ಮುಖಂಡರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net