

ಕೊಳ್ಳೇಗಾಲ: ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬುಧವಾರ ಕರ್ನಾಟಕ ಲೋಕಾಯುಕ್ತ ಜಿಲ್ಲಾ ಪೊಲೀಸ್ ವತಿಯಿಂದ ಸಾರ್ವಜನಿಕ ಕುಂದು ಕೊರತೆ ದೂರು ಅರ್ಜಿ ಸ್ವೀಕರಿಸಿದರು.
ಲೋಕಾಯುಕ್ತ ಜಿಲ್ಲಾ ಪೊಲೀಸ್ ಉಪ ಅಧೀಕ್ಷಕ ಮ್ಯಾಥ್ಯೂಸ್ ಥಾಮಸ್ ಸಾರ್ವಜನಿಕರಿಂದ 11 ಅರ್ಜಿ ಸ್ವೀಕಾರ ಮಾಡಿ ಮಾತನಾಡಿ, ಜನರ ಸಮಸ್ಯೆಗಳಿಗೆ ಇಲಾಖೆ ಸ್ಪಂದಿಸಲಿದೆ ಎಂದರು. ಕೊಂಗರಹಳ್ಳಿ ಗ್ರಾಮದ ದಿವಾಕರ್ ಮಾತನಾಡಿ, ನನ್ನ ಹೆಂಡತಿ ನಿಧನದ ಬಳಿಕ ಆಕೆಯ ಹೆಸರಿನಲ್ಲಿದ್ದ 2 ಮನೆಗಳನ್ನು ನನ್ನ ಮತ್ತು ನನ್ನ 2 ಹೆಣ್ಣು ಮಕ್ಕಳ ಗಮನಕ್ಕೆ ಬಾರದಂತೆ ನನ್ನ ಮಗ ಅಕ್ರಮವಾಗಿ ಇ-ಸ್ವತ್ತು ಮಾಡಿಕೊಂಡಿದ್ದಾನೆ. ಈ ಬಗ್ಗೆ ಕ್ರಮವಹಿಸುವಂತೆ ಜಿ.ಪಂ. ಸಿಇಒ, ತಾಪಂ ಇಒಗೆ ದೂರು ನೀಡಿದ್ದೆ. ಇದುವರೆಗೂ ಕ್ರಮ ವಹಿಸಿಲ್ಲ. ಜ.10 ರಂದು ಲೋಕಾಯುಕ್ತ ಅಧಿಕಾರಿಗಳಿಗೂ ಅರ್ಜಿ ಸಲ್ಲಿಸಿದ್ದೆ. ಲೋಕಾಯುಕ್ತ ಅಧಿಕಾರಿಗಳು ಕೊಂಗರಹಳ್ಳಿ ಗ್ರಾಪಂ ಪಿಡಿಒಗೆ ಸೂಕ್ತ ಕ್ರಮಕೈಗೊಂಡು ಹಿಂಬರಹ ನೀಡುವಂತೆ ಸೂಚನೆ ನೀಡಿದ್ದರು. ಆದರೆ, ಇದುವರೆಗೂ ಪಿಡಿಒ ಕ್ರಮ ವಹಿಸಿಲ್ಲ. ನನಗೆ ನನ್ನ ಮಗನಿಂದ ಅನ್ಯಾಯವಾಗಿದೆ ಎಂದು ದೂರು ಅರ್ಜಿ ಸಲ್ಲಿಸಿದರು. ಸ್ಥಳದಲ್ಲಿದ್ದ ಕೊಂಗರಹಳ್ಳಿ ಪಿಡಿಒ ಅವರಿಗೆ ಈ ದೂರು ವಿಚಾರಣೆ ಸಂಬಂಧ ಕ್ರಮ ಕೈಗೊಳ್ಳುವಂತೆ ಮ್ಯಾಥ್ಯೂಸ್ ಥಾಮಸ್ ಸೂಚನೆ ನೀಡಿದರು.
ಎಂಟ್ರಿ ಮಾಡಿಸಿಕೊಡಿ:
ಹಳೇ ಅಣಗಳ್ಳಿ ನಿವಾಸಿ ಎಂ.ದಶರಥ್ ಮಾತನಾಡಿ, ಕೊಳ್ಳೇಗಾಲ ನಗರಸಭಾ ವ್ಯಾಪ್ತಿಯ 595 ಜಡ್ 14 ರ 2 ಎಕರೆ 52 ಸೆಂಟ್ ಆಸ್ತಿಯನ್ನು ಪೌರಾಯುಕ್ತರು ಎಸ್.ಎಸ್. ಬುಕ್‌ನಲ್ಲಿ ಎಂಟ್ರಿ ಮಾಡುವಲ್ಲಿ ವಿಫಲರಾಗಿದ್ದಾರೆ. ಈ ಹಿನ್ನೆಲೆ ನಗರಸಭೆ ಆಸ್ತಿಯನ್ನು 2 ಎಕರೆ 52 ಸೆಂಟ್ ತಾಳೆಯಾಗುವಂತೆ ಎಸ್.ಎಸ್.ಬುಕ್‌ನಲ್ಲಿ ಬಿಲ್ಡಿಂಗ್ ಹಾಗೂ ಖಾಲಿ ಜಾಗವನ್ನು ಎಂಟ್ರಿ ಮಾಡುವಂತೆ ಅವರಿಗೆ ಸೂಚನೆ ನೀಡಬೇಕೆಂದು ಅರ್ಜಿ ನೀಡಿದರು.
ಚರಂಡಿ ನೀರು ಜಮೀನಿಗೆ ನುಗ್ಗುತ್ತಿದೆ:
ಧನಗೆರೆ ಗ್ರಾಮದ ಸಿದ್ದಮಲ್ಲಪ್ಪ ಮಾತನಾಡಿ, ಗ್ರಾಮದ ಬಳಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ ಬಳಿ ಬಾಕ್ಸ್ ಚರಂಡಿ ಮಾಡಲಾಗಿದೆ. ಚರಂಡಿ ಕಾಮಗಾರಿ ಸಮರ್ಪಕವಾಗಿಲ್ಲ. ಚರಂಡಿ ನೀರು ನಮ್ಮ ಜಮೀನಿಗೆ ನುಗ್ಗಿ ತೊಂದರೆ ಆಗಿದೆ ಎಂದು ದೂರಿದರು. ಈ ಬಗ್ಗೆ ಕ್ರಮವಹಿಸುವುದಾಗಿ ಧನಗೆರೆ ಪಿಡಿಒ ಅವರಿಗೆ ಲೋಕಾಯುಕ್ತ ಅಧಿಕಾರಿಗಳು ತಿಳಿಸಿದರು.
ಇ-ಸ್ವತ್ತನ್ನು ನೀಡುತ್ತಿಲ್ಲ:
ಕೊಳ್ಳೇಗಾಲ ನಿವಾಸಿ ಶಿವಸ್ವಾಮಿ ಎಂಬುವರು ನಗರಸಭೆ ವ್ಯಾಪ್ತಿಯ ಲಿಂಗಣಾಪುರದಲ್ಲಿರುವ ನಮ್ಮ ನಿವೇಶನಕ್ಕೆ ಇ-ಸ್ವತ್ತನ್ನು ನೀಡುತ್ತಿಲ್ಲ ಎಂದು ದೂರಿದರು. ನಗರಸಭೆ ಪೌರಾಯುಕ್ತ ಎ.ರಮೇಶ್ ಪ್ರತಿಕ್ರಿಯಿಸಿ, ನಗರ ಯೋಜನಾ ಇಲಾಖೆಯಿಂದ ಅನುಮೋದನೆ ಬಡಾವಣೆ ನಕ್ಷೆ ಇಲ್ಲದ ಆಸ್ತಿಗಳಿಗೆ ಇ-ಸ್ವತ್ತು ನೀಡಲು ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಿದರು. ಲೋಕಾಯುಕ್ತ ಇನ್ಸ್‌ಪೆಕ್ಟರ್ ಲೋಹಿತ್ ಕುಮಾರ್, ಶಶಿಕುಮಾರ್, ಸಿಬ್ಬಂದಿ ಮಹಾಲಿಂಗಸ್ವಾಮಿ, ಶ್ರೀನಿವಾಸ್, ತಾ.ಪಂ ಇಒ ಶ್ರೀನಿವಾಸ್, ಸಹಾಯಕ ನಿರ್ದೇಶಕ ಗೋಪಾಲಕೃಷ್ಣ, ಪೌರಾಯುಕ್ತ ರಮೇಶ್, ಕೃಷಿ ಅಧಿಕಾರಿ ಸುಂದರಮ್ಮ, ಇತರರು ಇದ್ದರು.