

ಕೊಳ್ಳೇಗಾಲ ; ಎಲ್ಲೆಡೆ ಡೆಂೆ ಉಲ್ಬಣಿಸುತ್ತಿರುವ ಹಿನ್ನೆಲೆಯಲ್ಲಿ ಆಸ್ಪತ್ರೆಗಳಲ್ಲಿ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕೆಂದು ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮೀ ಚೌಧರಿ ಸೂಚನೆ ನೀಡಿದರು.
ಪಟ್ಟಣದ ಉಪವಿಭಾಗ ಸರ್ಕಾರಿ ಆಸ್ಪತ್ರೆಗೆ ಬುಧವಾರ ಭೇಟಿ ನೀಡಿದ್ದ ವೇಳೆ ಆಸ್ಪತ್ರೆಯ ಹೊರಂಗಣದಲ್ಲಿರುವ ಚರಂಡಿಯಲ್ಲಿ ಮಡುಗಟ್ಟಿ ನಿಂತಿದ್ದ ನೀರಿನಿಂದ ಉಂಟಾಗಿದ್ದ ಅಶುಚಿತ್ವ ನೋಡಿ ಆಸ್ಪತ್ರೆಯ ಆಡಳಿತ ಮುಖ್ಯ ವೈದ್ಯಾಧಿಕಾರಿ ರಾಜಶೇಖರ್ ಅವರಿಗೆ ಸೂಚನೆ ನೀಡಿದರು.
ಆಸ್ಪತ್ರೆಯ ತುರ್ತು ನಿಗಾ ಘಟಕ (ಐಸಿಯು), ತಾಯಿ ಮತ್ತು ಮಕ್ಕಳ ಆಸ್ಪತ್ರೆ ಹಾಗೂ ಒಳರೋಗಿ ವಿಭಾಗ ಇನ್ನಿತರ ವಿಭಾಗಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಗೆ ತಪಾಸಣೆಗಾಗಿ ಆಗಮಿಸಿದ್ದ ವೇಳೆ ವೈದ್ಯಕೀಯ ಸೌಲಭ್ಯ ದೊರಕುತ್ತಿರುವ ಬಗ್ಗೆ ಖುದ್ದು ಗರ್ಭಿಣಿಯರನ್ನೇ ವಿಚಾರಿಸಿದರು. ಇದಕ್ಕೆ ಗರ್ಭಿಣಿಯರು ಪ್ರತಿಕ್ರಿಯಿಸಿ, ಉತ್ತಮವಾದ ಸೇವೆ ಸಿಗುತ್ತಿದೆ ಎಂದು ಉತ್ತರಿಸಿದರು.
ಶೌಚಗೃಹದ ಶುಚಿತ್ವ ಕಾಪಾಡಿ: ಆಸ್ಪತ್ರೆಯಲ್ಲಿರುವ ಶೌಚಗೃಹಗಳು ಸ್ವಚ್ಛವಾಗಿರಬೇಕು. ರೋಗಿಗಳಿಗೆ ಸ್ನಾನಕ್ಕೆ ಬಿಸಿ ನೀರು, ಶುದ್ಧ ಕುಡಿಯುವ ನೀರು ಸಿಗಬೇಕು. ಈ ನಿಟ್ಟಿನಲ್ಲಿ ಅಧಿಕಾರಿಗಳು ಹಾಗೂ ಸಿಬ್ಬಂದಿ ಕೆಲಸ ಮಾಡಬೇಕಿದೆ. ಇದೇ ವೇಳೆ ಖುದ್ದು ಆಸ್ಪತ್ರೆಯ ಛಾವಣಿಯಲ್ಲಿದ್ದ ನೀರಿನ ಟ್ಯಾಂಕ್‌ಗಳನ್ನು ವೀಕ್ಷಣೆ ಮಾಡಿದರು. ಟ್ಯಾಂಕ್‌ನಲ್ಲಿ ಸ್ವಲ್ಪ ಮಟ್ಟಿಗೆ ಮಣ್ಣು ಶೇಖರಣೆ ಆಗಿರುವುದನ್ನು ಕಂಡು ನೀರಿನ ತಪಾಸಣೆ ಹಾಗೂ ಟ್ಯಾಂಕರ್ ಸ್ವಚ್ಛಗೊಳಿಸಿರುವ ಬಗ್ಗೆ ನನಗೆ ವರದಿ ನೀಡಬೇಕೆಂದು ಸೂಚನೆ ನೀಡಿದರು.
ರೋಗಿಗಳಿಂದ ಉತ್ತಮ ಅಭಿಪ್ರಾಯವ್ಯಕ್ತವಾಗಿದೆ. ಈ ಬಗ್ಗೆ ಆಸ್ಪತ್ರೆಯ ವ್ಯೆದ್ಯರು ಹಾಗೂ ಸಿಬ್ಬಂದಿ ತಂಡಕ್ಕೆ ಅಭಿನಂದನೆ ತಿಳಿಸುತ್ತೇನೆ ಎಂದು ಡಾ.ನಾಗಲಕ್ಷ್ಮೀ ಚೌಧರಿ ಸುದ್ದಿಗಾರರಿಗೆ ತಿಳಿಸಿದರು.
ರೇಡಿಯೋಲಾಜಿಸ್ಟ್ ಹುದ್ದೆ ಭರ್ತಿಗಾಗಿ ಸಿಎಂಗೆ ಮನವಿ: ಉಪವಿಭಾಗ ಆಸ್ಪತ್ರೆಯಲ್ಲಿ ರೇಡಿಯೋಲಾಜಿಸ್ಟ್ ಇಲ್ಲದ ಹಿನ್ನೆಲೆಯಲ್ಲಿ ಸ್ಕ್ಯಾನಿಂಗ್ ಸೌಲಭ್ಯ ಕೊಡಲಾಗುತ್ತಿಲ್ಲ. ಇದರಿಂದ ಬಡವರು ಖಾಸಗಿ ಸ್ಕ್ಯಾನಿಂಗ್ ಸೆಂಟರ್‌ಗೆ ತೆರಳಿ ಸಾವಿರಾರು ರೂ. ನೀಡಬೇಕಿದೆ ಎಂಬ ಮಾಧ್ಯಮದವರ ದೂರಿಗೆ ಪ್ರತಿಕ್ರಿಯಿಸಿದ ನಾಗಲಕ್ಷ್ಮೀ ಚೌಧರಿ, ರೇಡಿಯೋಲಾಜಿಸ್ಟ್ ನೇಮಕಕ್ಕೆ ಸರ್ಕಾರ ಸಿದ್ಧವಿದೆ. ಹುದ್ದೆಗೆ ಯಾರೂ ನೇಮಕವಾಗುತ್ತಿಲ್ಲ. ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಹಾಗೂ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರ ಜತೆ ಚರ್ಚಿಸಿ ಶೀಘ್ರವೇ ರೇಡಿಯೋಲಾಜಿಸ್ಟ್ ನೇಮಕ ಮಾಡಿ ಕೊಡುವಂತೆ ಮನವಿ ಮಾಡಲಾಗುತ್ತದೆ ಎಂದು ತಿಳಿಸಿದರು. ಕೊಳ್ಳೇಗಾಲ ಸರ್ಕಾರಿ ಆಸ್ಪತ್ರೆಯ ಮುಖ್ಯ ಆಡಳಿತ ವೈದ್ಯಧಿಕಾರಿ ಡಾ. ರಾಜಶೇಖರ್, ವ್ಯೆದ್ಯರಾದ ಡಾ.ಲೋಕೇಶ್ವರಿ, ಡಾ.ಟೀನಾ ಹಾಗೂ ಆರೋಗ್ಯ ಮತ್ತಿತರಿದ್ದರು.