

ಕೊಳ್ಳೇಗಾಲ: ಜನ ಸಂಖ್ಯೆಯಲ್ಲಿ ಪ್ರಥಮ ಸ್ಥಾನದಲ್ಲಿದ್ದ ಚೀನಾ ದೇಶವನ್ನೇ ಭಾರತ ಹಿಂದಿಕ್ಕಿದ್ದು, ಕುಟುಂಬ ಯೋಜನಾ ಕ್ರಮಗಳನ್ನು ಪ್ರತಿಯೊಬ್ಬರು ಪಾಲಿಸಬೇಕು ಎಂದು ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ದೊರೆಸ್ವಾಮಿ ನಾಯಕ ತಿಳಿಸಿದರು.
ಪಟ್ಟಣದ ಸರ್ಕಾರಿ ಉಪವಿಭಾಗ ಆಸ್ಪತ್ರೆಯಲ್ಲಿ ಮಂಗಳವಾರ ಆಯೋಜಿಸಿದ್ದ ತಾಲೂಕು ಮಟ್ಟದ ವಿಶ್ವ ಜನಸಂಖ್ಯಾ ದಿನಾಚರಣೆಯಲ್ಲಿ ಅವರು ಮಾತನಾಡಿದರು. ಜನಸಂಖ್ಯೆ ಹೆಚ್ಚಾದಲ್ಲಿ ದೇಶ ಸಮಸ್ಯೆಗೀಡಾಗುತ್ತದೆ. ಈ ಬಗ್ಗೆ ಜನ ಜಾಗೃತಿ ಮೂಡಿಸಲು ಪ್ರತಿ ವರ್ಷ ಜು.11 ರಂದು ವಿಶ್ವ ಜನಸಂಖ್ಯಾ ದಿನ ಆಚರಣೆ ಮೂಲಕ ಜನರಿಗೆ ಅರಿವು ಮೂಡಿಸಿ ಕುಟುಂಬ ಯೋಜನಾ ಕ್ರಮಗಳ ಬಗ್ಗೆ ತಿಳಿಸಲಾಗುತ್ತಿದೆ ಎಂದರು.
ಲಿಂಗ ಸಮಾನತೆ ತರುವುದು ಮುಖ್ಯವಾಗಿದ್ದು, ಗಂಡು ಮಗುವಿದ್ದವರು ಹೆಣ್ಣಾಗಲಿ ಎಂದು, ಹೆಣ್ಣು ಇದ್ದವರೂ ಗಂಡು ಮಗುವಾಗಲಿ ಎಂಬ ಮನೋಭಾವದಿಂದ ಜನಸಂಖ್ಯೆ ಹೆಚ್ಚಾಗುತ್ತಿದೆ. ಈ ಬಗ್ಗೆ ಅರಿವಿರಬೇಕು. ಚೀನಾವನ್ನೇ ಹಿಂದಿಕ್ಕಿ ಜನಸಂಖ್ಯೆಯಲ್ಲಿ ಭಾರತ ಮುನ್ನುಗ್ಗುತ್ತಿರುವುದು ಅಪಾಯದ ಮುನ್ಸೂಚನೆ ಎಂದು ಹೇಳಿದರು.
ಹಿಂದೆ ಸಾಂಕ್ರಾಮಿಕ ರೋಗಗಳಿಂದ ಜನರು ಸಾಯುತ್ತಿದ್ದರು. ವೈದ್ಯಕೀಯ ಸೌಲಭ್ಯ ಸುಸ್ಥಿತಿಯಲ್ಲಿರುವುದರಿಂದ ಮರಣ ಪ್ರಮಾಣ ಕಡಿಮೆಯಾಗಿದ್ದು, ಜೀವಿತ ಅವಧಿ ಹೆಚ್ಚಾಗಿದೆ. ಆದ್ದರಿಂದ ಪ್ರತಿಯೊಬ್ಬರು ಕುಟುಂಬ ಯೋಜನಾ ಕ್ರಮಗಳನ್ನು ಅನುಸರಿಸಬೇಕಿದೆ. ಒಂದು ಮಗುವಿದ್ದರೆ ಮತ್ತೊಂದು ಮಗುವಿಗೆ ಅಂತರ ಕಾಯ್ದುಕೊಳ್ಳಬೇಕು ಎಂದು ಸಲಹೆ ನೀಡಿದರು. ಟಿಎಚ್‌ಒ ಗೋಪಾಲ್, ವೈದ್ಯೆ ಟೀನಾ, ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಮಂಜುನಾಥ್, ಮಕ್ಕಳ ತಜ್ಞ ವೇಣುಗೋಪಾಲ್, ಹಿರಿಯ ಆರೋಗ್ಯ ನಿರೀಕ್ಷಣಾ ಅಧಿಕಾರಿ ಹರ್ಷವರ್ಧನ್, ಹಿರಿಯ ಪ್ರಾಥಮಿಕ ಆರೋಗ್ಯ ಸುರಕ್ಷತಾ ಅಧಿಕಾರಿ ನಾಗವೇಣಿ ಇತರರು ಇದ್ದರು.