

ಕೊಳ್ಳೇಗಾಲ: ಪಡಿತರ ಚೀಟಿಗೆ ಹೊಸದಾಗಿ ಅರ್ಜಿ ಸಲ್ಲಿಸಲು ಹಾಗೂ ತಿದ್ದುಪಡಿಗಾಗಿ ಆನ್‌ಲೈನ್ ಸೇವಾ ಕೇಂದ್ರಗಳಲ್ಲಿ ನೀಡಲಾಗಿದ್ದ 2 ಗಂಟೆಗಳ ಅವಕಾಶವನ್ನು ಸರ್ವರ್ ಸಮಸ್ಯೆ ನುಂಗಿ ಹಾಕಿದ್ದು, ಪರಿಣಾಮ ಬೆರಳೆಣಿಕೆ ಜನರಿಗೂ ಸೇವೆ ಒದಗಿಸಲಾಗಿಲ್ಲ. ಇದು ಜನ ಸಾಮಾನ್ಯರ ಅಕ್ರೋಶಕ್ಕೆ ಕಾರಣವಾಗಿದೆ.
ಜು.2 ಮತ್ತು 3 ರಂದು ಬೆಳಗ್ಗೆ 10 ರಿಂದ 12 ಗಂಟೆಯವರೆಗೆ ಪಡಿತರ ಕಾರ್ಡ್‌ಗಳಿಗೆ ಹೊಸದಾಗಿ ಅರ್ಜಿ ಸಲ್ಲಿಸಲು ಹಾಗೂ 2 ರಿಂದ 4 ಗಂಟೆಯವರೆಗೆ ಪಡಿತರ ಕಾರ್ಡ್‌ಗಳ ತಿದ್ದುಪಡಿಗೆ ಸರ್ಕಾರ ಅವಕಾಶ ನೀಡಿತ್ತು. ಈ ಹಿನ್ನೆಲೆಯಲ್ಲಿ ಮಾಹಿತಿ ತಿಳಿದ ಜನರು ಕೊಳ್ಳೇಗಾಲ ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಇರುವ ಗ್ರಾಮ ಒನ್, ಕರ್ನಾಟಕ ಒನ್ ಹಾಗೂ ವಿವಿಧ ಆನ್‌ಲೈನ್ ಸೇವಾ ಕೇಂದ್ರಗಳ ಮುಂದೆ ನೂರಾರು ಸಂಖ್ಯೆಯಲ್ಲಿ ಜಮಾಯಿಸಿ ಸೇವೆ ಪಡೆಯಲು ಮುಗಿಬಿದ್ದರು.
ವ್ಯೆದ್ಯಕೀಯ ಮತ್ತು ಶಿಕ್ಷಣಕ್ಕೆ ಸಂಬಂಧಿದಂತೆ, ಕುಟುಂಬದಿಂದ ಪ್ರತ್ಯೇಕ ಗೊಂಡವರು ಹೊಸ ಕಾರ್ಡ್‌ಗಳಿಗೆ ಅರ್ಜಿ ಸಲ್ಲಿಸುವರು, ತಮ್ಮ ಮಕ್ಕಳ ಹೆಸರನ್ನು ಕಾರ್ಡ್‌ಗೆ ಸೇರ್ಪಡೆಗೊಳಿಸಲು, ಸರ್ಕಾರದ ಯೋಜನೆಗಳನ್ನು ಪಡೆಯಲು ರೇಷನ್ ಕಾರ್ಡ್ ಅಗತ್ಯವಿರುವವರು, ಲೋಪದೋಷ ಸರಿಪಡಿಸಲು ಇಂತಹ ಹಲವು ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ ಎಂದು ಆನ್‌ಲೈನ್ ಕೇಂದ್ರಗಳತ್ತ ಓಡೋಡಿ ಬಂದರು. ನಾ ಮುಂದು, ತಾ ಮುಂದು ಎಂದು ಸೇವೆ ಪಡೆಯಲು ಮುಂದಾದರು. ಆದರೆ, ಅವರಿಗೆ ಅಲ್ಲಿ ಕಾದಿದ್ದು ಸರ್ವರ್ ಸಮಸ್ಯೆ. ಮಕ್ಕಳು, ಮಹಿಳೆಯರು, ವಯೋವೃದ್ಧರು ಗಂಟೆಗಟ್ಟಲೆ ಕಾದು ಸುಣ್ಣವಾದರೂ ಬಂದ ಕೆಲಸವಾಗಲಿಲ್ಲ. ಇದರಿಂದ ಬೇಸತ್ತ ಜನರು ವ್ಯವಸ್ಥೆಯ ವಿರುದ್ಧ ಕಿಡಿಕಾರಿದ್ದಾರೆ. ಸರ್ವರ್ ತೆರೆದು ಸೇವೆ ಪಡೆದುಕೊಳ್ಳಿ ಎನ್ನುವ ಸರ್ಕಾರ ಸಮರ್ಪಕವಾಗಿ ಸರ್ವರ್ ಏಕೆ ನೀಡುವುದಿಲ್ಲ ಎಂದು ಅಸಮಾಧಾನ ಹೊರಹಾಕಿದರು.
ನಾಮ್ ಕೇ ವಾಸ್ತೆ ಅವಕಾಶ: ರಾಜ್ಯ ಸರ್ಕಾರದ ಗೃಹಲಕ್ಷ್ಮಿ ಯೋಜನೆ ಜಾರಿ ಬಳಿಕ ರೇಷನ್ ಕಾರ್ಡ್‌ಗೆ ಬೇಡಿಕೆ ಹೆಚ್ಚಾಗಿದೆ. ಕುಟುಂಬದಿಂದ ಪ್ರತ್ಯೇಕಗೊಂಡು ಹೊಸ ಕಾರ್ಡ್‌ಗಳಿಗೆ ಅರ್ಜಿ ಸಲ್ಲಿಸುವವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಸರ್ಕಾರಗಳ ಸಾಲ ಸೌಲಭ್ಯ ಪಡೆಯಲು ರೇಷನ್ ಕಾರ್ಡ್ ಅಗತ್ಯವಿದೆ. 1 ವರ್ಷದ ಹಿಂದೆಯೆ ಅರ್ಜಿ ಹಾಕಿ ಕಾರ್ಡ್‌ಗಳಿಗೆ ನೂರಾರು ಜನರು ಕಾದು ಕುಳಿತಿದ್ದಾರೆ. ಇವೆಲ್ಲ ಕಾರಣಗಳಿಂದ ಸರ್ಕಾರ ತಿಂಗಳಿಗೊಮ್ಮೆ ಕೆಲ ಗಂಟೆ ಕಾಲ ಸರ್ವರ್ ಓಪನ್ ಮಾಡುತ್ತಿದೆ. ಆದರೆ, ಸರ್ವರ್ ಸಮಸ್ಯೆ ಉಂಟಾಗಿ ಜನರಿಗೆ ಉಪಯೋಗವಾಗುತ್ತಿಲ್ಲ. ಸರ್ಕಾರ ಜನರ ಸಮಸ್ಯೆಗೆ ಸ್ಪಂದಿಸುತ್ತಿದ್ದೇವೆ ಎನ್ನುವ ರೀತಿ ನಾಮ್ ಕೇ ವಾಸ್ತೆಗೆ ಅವಕಾಶ ನೀಡುತ್ತಿದೆ ಎಂಬುದು ಪ್ರಜ್ಞಾವಂತರ ಆರೋಪ. ಜನರಿಗೆ ಪ್ರಾಮಾಣಿಕವಾಗಿ ಸೇವೆ ನೀಡಬೇಕೆಂಬ ಉದ್ದೇಶ ಇದ್ದಿದ್ದರೆ ತಿಂಗಳಲ್ಲಿ ಒಂದು ವಾರವಾದರೂ ಸಂಪೂರ್ಣವಾಗಿ ಅವಕಾಶ ನೀಡಬೇಕೆಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.
ಬೆರಳೆಣಿಕೆಯಷ್ಟು ಜನರು ಸೇವೆ ಪಡೆಯಲಾಗಿಲ್ಲ: ಜೂ.2 ರಿಂದ 3 ಗಂಟೆವರೆಗೆ ಆನ್‌ಲೈನ್ ಸೇವಾ ಕೇಂದ್ರದಲ್ಲಿ ಮುಗಿಬಿದ್ದ ಸಾವಿರಾರು ಜನರ ಪೈಕಿ ಸರ್ವರ್ ಬೆರಳೆಣಿಕೆ ಜನರಿಗೂ ಸೇವೆ ಸಿಗಲಿಲ್ಲ. ತಾಲೂಕಿನ ವ್ಯಾಪ್ತಿಯಲ್ಲಿ ಎರಡ್ಮೂರು ಹೊಸ ಅರ್ಜಿಗಳು ಹಾಗೂ ಕೆಲ ಕಾರ್ಡ್‌ಗಳ ತಿದ್ದುಪಡಿ ಆಗಿರಬಹುದು ಎಂದು ಅಧಿಕಾರಿಗಳು ಮೌಖಿಕವಾಗಿ ತಿಳಿಸಿದ್ದಾರೆ.
ಕೂಲಿ ಕೆಲಸ ಬಿಟ್ಟು ಬಂದ ಜನ: ಪಡಿತರ ಕಾರ್ಡ್ ತಿದ್ದುಪಡಿ ಹಾಗೂ ಅರ್ಜಿ ಹಾಕಲು ಅವಕಾಶ ನೀಡಲಾಗಿದೆ ಎಂಬ ಮಾಹಿತಿ ತಿಳಿಯುತ್ತಿದ್ದಂತೆ ಜನರು ಬಡ-ಮಧ್ಯಮ ವರ್ಗದವರು ದಿನದ ಕೂಲಿಯನ್ನು ಬಿಟ್ಟು ಎರಡೂ ದಿನ ಆನ್‌ಲೈನ್ ಸೇವಾ ಕೇಂದ್ರಗಳ ಮುಂದೆ ದೌಡಾಯಿಸಿದ್ದರು. ನೂಕುನುಗ್ಗಲಿನಲ್ಲಿ ನಿಂತು ಹೈರಾಣಾದರೂ ಸರ್ವರ್ ಸಮಸ್ಯೆಯಿಂದ ಇತ್ತ ಕೆಲಸವು ಆಗದೆ, ಅತ್ತ ಕೂಲಿಗೂ ಹೋಗದ ಪರಿಸ್ಥಿತಿ ನಿರ್ಮಾಣವಾಗಿ ವ್ಯವಸ್ಥೆ ವಿರುದ್ಧ ಹಿಡಿ ಶಾಪ ಹಾಕಿದರು.
950 ಅರ್ಜಿಗಳು ಪೆಡಿಂಗ್: 2019 ರಿಂದ 2024 ರವೆರೆಗೆ ಕೊಳ್ಳೇಗಾಲ ತಾಲೂಕು ವ್ಯಾಪ್ತಿಯಲ್ಲಿ ಈ ಹಿಂದೆ ಪಡಿತರ ಕಾರ್ಡ್‌ಗಳಿಗೆ 950 ಅರ್ಜಿಗಳು ಬಂದಿದೆ. ಸರ್ವರ್ ಸಮಸ್ಯೆ, ಮತ್ತಿತರ ಕಾರಣಗಳಿಂದ ಕಾರ್ಡ್‌ಗಳನ್ನು ವಿತರಣೆ ಮಾಡಲಾಗಿಲ್ಲ.
ಸರ್ವರ್ ಸಮಸ್ಯೆಯಿಂದ ನಿರೀಕ್ಷೆ ಮಟ್ಟದಲ್ಲಿ ಸೇವೆ ಒದಗಿಸಲು ಸಾಧ್ಯವಾಗಿಲ್ಲ. ಪ್ರತಿ ಆನ್‌ಲೈನ್ ಕೇಂದ್ರಗಳ ಮುಂದೆ ನೂರಾರು ಸಂಖ್ಯೆಯಲ್ಲಿ ಜನರು ಕಾದು ಕುಳಿತಿದ್ದರು. ಜನರು ಸರ್ವರ್ ತೊಂದರೆಯಾಗಿ ತಮ್ಮ ಕೆಲಸ ಆಗದಿರುವ ಈ ಬಗ್ಗೆ ಅಳಲು ತೋಡಿಕೊಳ್ಳುತ್ತಿದ್ದಾರೆ. ಇಲಾಖೆ ಕಡೆಯಿಂದ ಸರ್ವರ್ ಒದಗಿಸಿ ಕೊಟ್ಟರೆ ಸೇವೆ ನೀಡುತ್ತೇವೆ.ಪ್ರಸಾದ್ ಆಹಾರ ನಿರೀಕ್ಷಕಆಹಾರ ನಾಗರಿಕ ಸರಬರಾಜು ಇಲಾಖೆ ಪ್ರತಿಸಲ ಪಡಿತರ ಕಾರ್ಡ್‌ಗೆ ಸರ್ವರ್ ಸಮಸ್ಯೆ ಎದುರಾಗುತ್ತಿದೆ. ಕೊಟ್ಟಿರುವ 2 ಗಂಟೆಯೂ ಸಮರ್ಪಕವಾಗಿ ಸರ್ವರ್ ನೀಡದಿದ್ದರೆ ಸರ್ಕಾರ ಏಕೆ ಅವಕಾಶ ನೀಡಬೇಕು. ಕೂಲಿ ಕೆಲಸ ಬಿಟ್ಟು ಸಾಲಿನಲ್ಲಿ ವೃದ್ಧ್ದರು, ಮಹಿಳೆಯರು ನಿಂತಿದ್ದಾರೆ. ಜನಸಾಮಾನ್ಯರ ಜೀವನದಲ್ಲಿ ಈ ರೀತಿ ಆಟವಾಡಬಾರದು.ಕುಮಾರ್ಹಳೇ ಹಂಪಾಪುರ ಗ್ರಾಮದ ನಿವಾಸಿ ಎರಡು ದಿನಗಳಲ್ಲಿ ನೂತನ ಕಾರ್ಡ್‌ಗೆ ಅರ್ಜಿ ಸಲ್ಲಿಸಲು ನೀಡಲಾಗಿದ್ದ ತಲಾ 2 ಗಂಟೆ ಅವಕಾಶದಲ್ಲಿ ಒಬ್ಬರಿಗೆ ಮಾತ್ರ ಅರ್ಜಿಸಲು ಸಾಧ್ಯವಾಯಿತು. ಇಲಾಖೆ ಅವರು ಮೆಡಿಕಲ್ ಎಮರ್ಜೆನ್ಸಿಗೆ ಮಾತ್ರ ಬಳಸಿಕೊಳ್ಳಿ ಎಂದು ಹೇಳುತ್ತಾರೆ. ಕೊಟ್ಟಿರುವುದೇ ಕಡಿಮೆ ಸಮಯ, ಅದರಲ್ಲೂ ಸರ್ವರ್ ತೊಡಕಿನಿಂದ ಜನರು ಸದುಪಯೋಗ ಪಡೆದು ಕೊಳ್ಳಲು ಸಾಧ್ಯವಾಗಲಿಲ್ಲ.ಶಿವಪ್ರಸಾದ್ಗ್ರಾಮ ಒನ್ ಅಪರೇಟರ್, ಸಿದ್ದಯ್ಯನಪುರ ಗ್ರಾಮ, ಕೊಳ್ಳೇಗಾಲ