ನಿರ್ಗತಿಕನಿಗೆ ನೆರವಾದ ಯುವಕರು

3-kollegal-5
Published on

ಕೊಳ್ಳೇಗಾಲ: ಬುದ್ಧಿಭ್ರಮಣೆಯಿಂದ ಬಳಲುತ್ತ ಅನಾರೋಗ್ಯಕ್ಕೆ ತುತ್ತಾಗಿದ್ದ ವ್ಯಕ್ತಿಗೆ ಹಳೇ ಹಂಪಾಪುರ ಗ್ರಾಮದ ಮೂವರು ಯುವಕರು ಕೇಶಮುಂಡನ ಮಾಡಿ, ಪಟ್ಟಣದ ಆಸ್ಪತ್ರೆಗೆ ಕರೆತಂದು ಪ್ರಥಮ ಚಿಕಿತ್ಸೆ ಕೊಡಿಸಿ ಮಾನವೀಯತೆ ಮೆರೆದಿದ್ದಾರೆ.

ತಾಲೂಕಿನ ಮುಳ್ಳೂರು ಮುಖ್ಯ ರಸ್ತೆಯಿಂದ ಹಳೇಹಂಪಾಪುರ ಗ್ರಾಮಕ್ಕೆ ತೆರಳುವ ಸಂಪರ್ಕ ರಸ್ತೆಯ ಬದಿಯಲ್ಲಿರುವ ಬಸ್ ತಂಗುದಾಣದ ಕಟ್ಟಡದಲ್ಲಿ ಹಲವು ತಿಂಗಳಿನಿಂದ ವ್ಯಕ್ತಿಯೊಬ್ಬ ವಾಸವಿದ್ದನು. ಈತ ಹಿಂದಿ ಭಾಷೆ ಮಾತನಾಡುತ್ತಿದ್ದ ಈತ, ನಿತ್ಯ ಊಟವಿಲ್ಲದೆ ಸಿಕ್ಕಿದ್ದನ್ನು ತಿಂದು ಮಲಗುತ್ತಿದ್ದನು.

ಇದನ್ನು ಗಮನಿಸಿದ ಹಳೇ ಹಂಪಾಪುರ ಗ್ರಾಮದ ಕೆ.ಬಿ.ಉಮೇಶ್ ಕೆಲ ತಿಂಗಳಿನಿಂದ ಈ ವ್ಯಕ್ತಿಗೆ ಬೆಳಗ್ಗೆ ತಿಂಡಿ, ರಾತ್ರಿ ಊಟ ತಂದು ನೀಡುತ್ತಿದ್ದರು. ಇತ್ತೀಚೆಗೆ ಬುದ್ಧಿಮಾಂದ್ಯನ ಬಲಗೈ ಬೆರಳು ಗಾಯಗೊಂಡು ಹುಳುಗಳು ಬರುತ್ತಿದ್ದವು. ಇದನ್ನು ಗಮನಿಸಿದ ಉಮೇಶ್ ಹಾಗೂ ಸ್ನೇಹಿತರಾದ ಚಂದ್ರಶೇಖರ್, ಅಭಿಷೇಕ್ ಬುದ್ಧಿಮಾಂದ್ಯನನ್ನು ಕರೆದೊಯ್ದು ಕೇಶ ಮುಂಡನ ಮಾಡಿ, ಸ್ನಾನ ಮಾಡಿಸಿ ಚಿಕಿತ್ಸೆಗಾಗಿ ಕೊಳ್ಳೇಗಾಲ ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಕರೆತಂದು ದಾಖಲಿಸಿದ್ದರು. ವೈದ್ಯ ಡಾ.ಬಸವರಾಜು ಅವರಿಂದ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಚಾಮರಾಜನಗರ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ಈ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net