ಮೂವರು ವಾಹನ, ಜಾನುವಾರು ಕಳ್ಳರ ಬಂಧನ

25-kollegal-3
Published on

ಕೊಳ್ಳೇಗಾಲ; ಜಾನುವಾರು ಹಾಗೂ ವಾಹನಗಳ ಕಳವು ಪ್ರಕರಣದಲ್ಲಿ ಭಾಗಿಯಾಗಿದ್ದ ಮೂವರನ್ನು ಮಾಲು ಸಮೇತ ಸೋಮವಾರ ಪಟ್ಟಣ ಪೊಲೀಸರು ಹಾಗೂ ಅಪರಾಧ ಪತ್ತೆದಳದ ಸಿಬ್ಬಂದಿ ಬಂಧಿಸಿದ್ದಾರೆ.

ಬೆಂಗಳೂರಿನ ಆನೇಕಲ್ ಮೂಲದ ಫೈರೋಜ್ ಪಾಷ (40), ಸಾದಿಕ್ ಪಾಷ (30) ಹಾಗೂ ಚಿಂತಾಮಣಿಯ ಸಬೀರ್ (35) ಬಂಧಿತರು. ಜೂ.24ರಂದು ಮಧ್ಯಾಹ್ನ 3 ಗಂಟೆಗೆ ಪಟ್ಟಣ ಪೊಲೀಸ್ ಠಾಣೆಯ ಅಪರಾಧ ವಿಭಾಗದ ಪಿಎಸ್‌ಐ ಉಮಾವತಿ ಹಾಗೂ ಕೊಳ್ಳೇಗಾಲ ಉಪವಿಭಾಗ ಅಪರಾದ ಪತ್ತೆ ದಳದ ಸಿಬ್ಬಂದಿ ಗಸ್ತಿನಲ್ಲಿದ್ದಾಗ ತಾಲೂಕಿನ ದಾಸನಪುರ ರಸ್ತೆಯಲ್ಲಿ ಅನುಮಾನಾಸ್ಪದವಾಗಿ ಬೊಲೆರೋ ವಾಹನ ಹಾಗೂ ಬೈಕ್ ನಿಲ್ಲಿಸಿಕೊಂಡು ನಿಂತಿದ್ದ ಮೂವರನ್ನು ಪೊಲೀಸರು ಪ್ರಶ್ನಿಸಿದ್ದಾರೆ. ಈ ವೇಳೆ ಸರಿಯಾಗಿ ಉತ್ತರ ನೀಡದ ಹಿನ್ನೆಲೆಯಲ್ಲಿ ಅನುಮಾನಗೊಂಡ ಪೊಲೀಸರು ಮೂವರನ್ನೂ ಠಾಣೆಗೆ ಕರೆತಂದು ವಿಚಾರಣೆ ನಡೆಸಿದ್ದಾರೆ.

ಈ ಸಂದರ್ಭ ಮೂವರು ವಿವಿಧೆಡೆ ಕಳ್ಳತನ ಮಾಡಿರವುದು ತಿಳಿದು ಬಂದಿದೆ. ಈ ಪೈಕಿ ಕೊಳ್ಳೇಗಾಲ ಉಪವಿಭಾಗದ ವಿವಿಧ ಠಾಣೆಗಳಲ್ಲಿ 5 ಪ್ರಕರಣಗಳು ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಈ ಮೂವರನ್ನೂ ಪೊಲೀಸರು ಬಂಧಿಸಿ ನ್ಯಾಯಾಲಯದ ಆದೇಶದಂತೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಬಂಧಿತರಿಂದ 6.50 ಲಕ್ಷ ರೂ.ಮೌಲ್ಯದ 3 ಬೊಲೆರೋ ಪಿಕ್ ಅಪ್ ವಾಹನ, 60,000 ರೂ.ಮೌಲ್ಯದ 1 ಪಲ್ಸರ್ ಬೈಕ್, 50,000 ರೂ.ಮೌಲ್ಯದ 1 ಅಪ್ಪಾಚಿ ಬೈಕ್, 1.20 ಲಕ್ಷ ರೂ.ಮೌಲ್ಯದ 2 ಹಸುಗಳು, 15,000 ರೂ. ನಗದು ಸೇರಿ ದಂತೆ ಒಟ್ಟು 8.95 ಲಕ್ಷ ಬೆಳೆ ಬಾಳುವ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪದ್ಮಿನಿ ಸಾಹು, ಅಪರ ಪೊಲೀಸ್ ವರಿಷ್ಠಾಧಿಕಾರಿ ಉದ್ದೇಶ್, ಡಿವೈಎಸ್ಪಿ ಧಮೇಂದ್ರ, ವೃತ್ತ ನಿರೀಕ್ಷಕ ಶಿವಮಾದಯ್ಯ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಕೊಳ್ಳೇಗಾಲ ಪಟ್ಟಣ ಠಾಣೆಯ ಅಪರಾಧ ವಿಭಾಗದ ಪಿಎಸ್‌ಐ ಉಮಾವತಿ, ರಾಮಪುರ ಠಾ ಣೆಯ ಪಿಎಸ್‌ಐ ರಾಧಾ, ಸಿಬ್ಬಂದಿ ಅಮರೇಶ್ ರೆಡ್ಡಿ, ಸವಿರಾಜು, ಬಸವರಾಜು, ಅಪರಾಧ ಪತ್ತೆದಳದ ಎಎಸ್‌ಐ ತಕ್ಕಿವುಲ್ಲಾ, ಹೆಡ್‌ಕಾನ್‌ಸ್ಟೇಬಲ್ಗಳಾದ ವೆಂಕಟೇಶ್, ಕಿಶೋರ್, ಕಾನ್‌ಸ್ಟೇಬಲ್ಗಳಾದ ಬಿಳಿಗೌಡ, ಶಿವಕುಮಾರ್ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net