

ಕೊಳ್ಳೇಗಾಲ: ತಾಲೂಕಿನ ಜಕ್ಕಳಿ ಗ್ರಾಮದ ಕೋಟೆ ಕೆರೆ ಸಮೀಪದ ಮಹದೇವಸ್ವಾಮಿ ಅವರ ಜಮೀನಿನಲ್ಲಿ ಮಂಗಳವಾರ ತೋಟಗಾರಿಕೆ ಇಲಾಖೆ ವತಿಯಿಂದ ರೈತರಿಗೆ ಅರಿಶಿಣ ಬೆಳೆ ಬೇಸಾಯ ಮತ್ತು ನಿರ್ವಹಣೆ ಬಗ್ಗೆ ತರಬೇತಿ ಕಾರ್ಯಾಗಾರ ಆಯೋಜಿಸಲಾಗಿತ್ತು.
ಈ ವೇಳೆ ಕಾರ್ಯಕ್ರಮಕ್ಕೆ ಕೃಷಿ ವಿಜ್ಞಾನ ಕೇಂದ್ರದ ತಜ್ಞ ಡಾ.ಪಂಪನಗೌಡ ಚಾಲನೆ ನೀಡಿ ಮಾತನಾಡಿ, ಅಲೇಪಿ ಸುಪ್ರೀಂ, ರೋಮ, ಸೇಲಂ ಎಂಬ ಅರಿಶಿಣ ತಳಿಗಳನ್ನು ಕೊಳ್ಳೇಗಾಲದ ಭಾಗದಲ್ಲಿ ಹೆಚ್ಚು ಬೆಳೆಯಲಾಗುತ್ತಿದೆ. ಅದರಲ್ಲಿ, ಕರ್ಕ್ಯೂಮಿನ್ ಅಂಶ ಶೇ.3 ರಷ್ಟಿದೆ. ಆದರೆ ಪ್ರತಿಭಾ ತಳಿಯಲ್ಲಿ ಕರ್ಕ್ಯೂಮಿನ್ ಶೇ.4 ರಿಂದ 5 ರಷ್ಟು ಹೆಚ್ಚಾಗಿದೆ. ಜತೆಗೆ ಪ್ರತಿಭಾ ತಳಿಗೆ ಕೀಟ ಮತ್ತು ರೋಗವನ್ನು ತಡೆದುಕೊಳ್ಳುವ ಶಕ್ತಿ ಇರುವುದರಿಂದ ಹಾಗೂ ಇಳುವರಿಯು ಹೆಚ್ಚಾಗಿ ಬರುವುದರಿಂದ ಈ ತಳಿಯ ಬೆಳೆಯುವಂತೆ ರೈತರಿಗೆ ಸಲಹೆ ನೀಡಿದರು.
ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಎನ್.ಪ್ರಕಾಶ್ ಮಾತನಾಡಿ, ರಾಷ್ಟ್ರೀಯ ಮಿಷನ್ ಯೋಜನೆಯ ತೋಟಗಾರಿಕಾ ಬೆಳೆಗಳ ಪ್ರದೇಶ ವಿಸ್ತರಣಾ ಕಾರ್ಯ ಕ್ರಮದಡಿ ಜಿ-9 ಬಾಳೆ, ತರಕಾರಿ ಬೆಳೆಗಳು, ಹೂಗಳು, ಕೃಷಿ ಹೊಂಡ, ಪ್ಯಾಕ್‌ಹೌಸ್ (ಹಣ್ಣು ಸಂಗ್ರಹಣಾ ಘಟಕ) ಈರುಳ್ಳಿ ಸಂಗ್ರಹಣಾ ಘಟಕ ನಿರ್ಮಾಣಕ್ಕೆ ಸಹಾಯಧನವನ್ನು ಸಿಗಲಿದ್ದು ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು.
ಅಂತೆಯೇ, ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ ಕೃಷಿ ಯಂತ್ರೋಪಕರಣಗಳಿಗೆ ಸಹಾಯಧನ ನೀಡಲಾಗುತ್ತಿದೆ. ಪ್ರಧಾನಮಂತ್ರಿ ಕೃಷಿ ಸಿಂಚನ ಯೋಜನೆಯಡಿ 5 ಎಕರೆವರೆಗೆ ಸಾಮಾನ್ಯ ರೈತರಿಗೆ ಶೇ.75 ರಷ್ಟು ಹಾಗೂ ಎಸ್ಸಿ-ಎಸ್ಟಿ ರೈತರಿಗೆ ಶೇ.90 ರಷ್ಟು ಸಹಾಯಧನ ನೀಡಲಾಗುವುದು ಎಂದರು.
ತಾಳೆ ಬೆಳೆ ಅಧಿಕಾರಿ ನಾಗರಾಜು ಮಾತನಾಡಿ, ತಾಳೆ ಬೆಳೆ ಯೋಜನೆ ಬಗ್ಗೆ ರೈತರಿಗೆ ಸವಿಸ್ತರವಾಗಿ ತಿಳಿಸಿದರು. ಸಹಾಯಕ ತೋಟಗಾರಿಕೆ ಅಧಿಕಾರಿ ಗಂಗಾಧರ್, ರೈತರಾದ ಕೆಂಪನಪಾಳ್ಯ ಕುಮಾರಸ್ವಾಮಿ, ಪುಟ್ಟಬುದ್ಧಿ ಆರಾಧ್ಯ, ಮಂಜುನಾಥ, ನಾಗಣ್ಣ, ಶಿವಕುಮಾರ್, ಶಿವಲಿಂಗಸ್ವಾಮಿ, ಮಹೇಶ್ ಇದ್ದರು.