

ಕೊಳ್ಳೇಗಾಲ: ತಾಲೂಕಿನ ಪಾಳ್ಯದ ಗ್ರಾಮಾಂತರ ಪ್ರೌಢಶಾಲೆ (ಅನುದಾನಿತ) ಆವರಣ ಅನೈತಿಕ ತಾಣವಾಗಿ ಮಾರ್ಪಟಿದ್ದು, ವಿದ್ಯಾರ್ಥಿಗಳ ಪಾಠ ಪ್ರವಚನಗಳಿಗೆ ತೊಂದರೆಯಾಗುತ್ತಿದೆ.
ಅಂದಾಜು 4 ಎಕರೆಯಷ್ಟು ವಿಶಾಲವಾದ ಬಯಲು ಪ್ರದೇಶದಲ್ಲಿ ಈ ಶಾಲೆಯಿದ್ದು, ಕ್ರೀಡಾ ಚುಟವಟಿಕೆಗಳಿಗೆ ಹೇಳಿ ಮಾಡಿಸಿದಂತೆ ಮೈದಾನವಿದೆ. 1965ರಲ್ಲಿ ಆರಂಭಗೊಂಡ ಈ ಶಾಲೆಯಲ್ಲಿ 8ರಿಂದ 10ನೇ ತರಗತಿವರೆಗೆ ಮಕ್ಕಳು ವ್ಯಾಸಂಗ ಮಾಡುತ್ತಾರೆ. ಹಗಲಿನಲ್ಲಿ ಸದಾ ಶೈಕ್ಷಣಿಕ ಚಟುವಟಿಕೆ ನಡೆದರೆ ಕತ್ತಲಾಗುತ್ತಿದಂತೆ ಶಾಲಾ ಆವರಣದಲ್ಲಿ ಮದ್ಯ ಪ್ರಿಯರು ಕ್ಕಿಕ್ಕೇರಿಸಿಕೊಳ್ಳುತ್ತಾರೆ. ಬೆಳಗ್ಗೆ ಶಾಲೆಗೆ ಬಂದ ಶಿಕ್ಷಕರು ಹಾಗೂ ಮಕ್ಕಳು ಸಿಗರೇಟು, ಮದ್ಯದ ಪೌಚ್, ಬಾಟಲಿಗಳನ್ನು ಮೊದಲು ದರ್ಶನ ಮಾಡಬೇಕು.
ಶಾಲೆಯನ್ನು ಕೊಳ್ಳೇಗಾಲ ತಾಲೂಕು ಎಜುಕೇಷನ್ ಸೊಸೈಟಿ ನಿರ್ವಹಿಸುತ್ತಿದ್ದು, ಮಕ್ಕಳಿಗೆ ಪೂರಕವಾದ ವಾತಾವರಣವಿಲ್ಲ. ಮೈದಾನದ ಸುತ್ತಲೂ ಗಿಡ-ಗಂಟಿ ಬೆಳೆದುಕೊಂಡಿದ್ದು ಹಾವು-ಚೇಳುಗಳ ವಾಸಸ್ಥಾನವಾಗಿದೆ. ಇದರಿಂದ ಮಕ್ಕಳು ಆತಂಕದಲ್ಲೇ ಮೈದಾನದಲ್ಲಿ ಆಟವಾಡುವ ಪರಿಸ್ಥಿತಿ ಇದೆ. ಅನುದಾನಿತ ಶಾಲೆಯಾದ ಕಾರಣ ಪಂಚಾಯಿತಿ ತಲೆ ಕೆಡಿಸಿಕೊಳ್ಳುತ್ತಿಲ್ಲ.
ಇತಿಹಾಸ: ಶಾಲೆ 50 ವರ್ಷ ಪೂರೈಸಿದ್ದು, ಸಾವಿರಾರು ಮಕ್ಕಳಿಗೆ ವಿದ್ಯೆ ನೀಡಿದೆ. ಇಲ್ಲಿ ಓದಿದವರು ಉನ್ನತ ಹುದ್ದೆಯಲ್ಲಿದ್ದಾರೆ. ಪಾಳ್ಯ ಗ್ರಾಮದ ಮುಖ್ಯ ರಸ್ತೆಯ ಬಲ ಭಾಗಕ್ಕೆ ಶಾಲೆಯಿದೆ. ಜನರು ಬಹಿರ್ದೆಸೆಗೆ ಹೋಗುವುದರಿಂದ ಮಕ್ಕಳು ಮೂಗು ಮುಚ್ಚಿಕೊಂಡು ಶಾಲೆಯ ಒಳಗೆ ಹಾಗೂ ಹೊರಗೆ ಹೋಗಬೇಕಿದೆ.
ಕ್ರಮ ವಹಿಸದ ಪೊಲೀಸ್ ಇಲಾಖೆ: ಶಾಲಾ ಆವರಣದಲ್ಲಿ ಮದ್ಯ ಕುಡಿದು ಮೋಜು, ಮಸ್ತಿ ಮಾಡಿದರೂ ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳುತ್ತಿಲ್ಲ. ರಾತ್ರಿ ವೇಳೆ ಗಸ್ತು ತಿರುಗಿ ಶಾಲೆ ಮೈದಾನದಲ್ಲಿ ಕಿಕ್ಕೇರಿಸಿ ಕೊಳ್ಳುವವರ ವಿರುದ್ಧ ಕಾನೂನು ಕ್ರಮ ಜರುಗಿಸಿದರೆ ಈ ಅಕ್ರಮ ಚಟುವಟಿಕೆ ತಡೆಗಟ್ಟಬಹುದು ಎಂಬುದು ಪ್ರಜ್ಞಾವಂತರ ಮಾತು.
ಶಾಲಾ ಆವರಣದಲ್ಲಿ ಗಿಡಗಂಟಿ ಬೆಳೆದು ಅವ್ಯವಸ್ಥೆಯಾಗಿದೆ. ಈ ಹಿಂದೆ ಪಂಚಾಯಿತಿ 2 ಬಾರಿ ಸ್ವಚ್ಛ ಮಾಡಿತ್ತು. ಆದರೆ ಹಲವು ತಿಂಗಳಿನಿಂದ ಸ್ವಚ್ಛ ಮಾಡಿಲ್ಲ. ರಾತ್ರಿ ವೇಳೆ ಶಾಲೆ ಆವರಣವನ್ನು ಬಾರ್ ಮಾಡಿಕೊಳ್ಳುತ್ತಾರೆ.ನವೀನ್ ಕುಮಾರ್ ಮುಖ್ಯ ಶಿಕ್ಷಕ, ಪಾಳ್ಯ ಗ್ರಾಮಾಂತರ ಪ್ರೌಢಶಾಲೆ ಇದು ಅನುದಾನಿತ ಶಾಲೆಯಾದ ಕಾರಣ ನಾವು ಶಾಲೆಯ ಅಭಿವೃದ್ಧಿಗೆ ಅನುದಾನ ನೀಡಲು ಅವಕಾಶವಿಲ್ಲ. ಪಂಚಾಯಿತಿ ಬೋರ್ಡ್ ಜತೆ ಚರ್ಚಿಸಿ ಆವರಣವನ್ನು ಸ್ವಚ್ಛಗೊಳಿಸಲಾಗುವುದು. ಶಾಲೆ ಮುಂಭಾಗ ರಸ್ತೆಯಲ್ಲಿ ಮಲ, ಮೂತ್ರ ವಿಸರ್ಜನೆ ಮಾಡದಂತೆ ಜಾಗೃತಿ ಮೂಡಿಸಲಾಗುವುದು.ಜುನೇದ್ ಅಹಮ್ಮದ್ ಪಿಡಿಒ, ಪಾಳ್ಯ ಪಂಚಾಯಿತಿ