

ಕೊಳ್ಳೇಗಾಲ: ತಾಲೂಕಿನ ಗುಂಡಾಲ್ ಜಲಾಶಯಕ್ಕೆ ಸೇರಿದ ಬಲ ದಂಡನಾಲೆ ಹಾಗೂ ಎಡದಂಡ ನಾಲೆಯ ಕಾಲುವೆಗಳನ್ನು ನೀರಾವರಿ ಅಧಿಕಾರಿಗಳ ಜತೆ ಹನೂರು ಶಾಸಕ ಎಂ.ಆರ್.ಮಂಜುನಾಥ್ ಭಾನುವಾರ ವೀಕ್ಷಿಸಿದರು.
ತಾಲೂಕಿನ ಸತ್ತೇಗಾಲ ಏತ ನೀರಾವರಿ, ಕಡೆಗದ್ದೆ ಬಯಲಿನ ಕೆರೆ, ಕಾಲುವೆಗಳು, ಧನಗೆರೆ ಜಾಗೀರ್‌ದಾರ್ ಅಣೆಕಟ್ಟೆ, ಧನಗೆರೆ ಕಟ್ಟೆ, ಕಬಿನಿ ಬಲದಂಡೆ ನಾಲೆ, ತೆಳ್ಳನೂರು ನಾಲೆಗಳಿಗೆ ಖುದ್ದು ಶಾಸಕರು ಭೇಟಿ ನೀಡಿ ಪರಿಶೀಲಿಸಿದರು. ಶಾಸಕ ಎಂ.ಆರ್.ಮಂಜುನಾಥ್ ಮಾತನಾಡಿ, ಮಳೆಗಾಲದಲ್ಲಿ ಕೆರೆ, ಕಟ್ಟೆ, ಕಾಲುವೆಗಳಲ್ಲಿ ನೀರು ನಿಲ್ಲುವಂತೆ ನೀರಾವರಿ ಅಧಿಕಾರಿಗಳು ಕ್ರಮವಹಿಸಬೇಕಿದೆ. ಕಾಲುವೆಗಳ ಗಿಡ ಗಂಟಿಗಳನ್ನು ತೆರವುಗೊಳಿಸಿ ಅಭಿವೃದ್ಧಿಪಡಿಸಿದರೆ ಕೃಷಿಗೆ ಅನುಕೂಲವಾಗಲಿದೆ. ಇನ್ನು ಸತ್ತೇಗಾಲ, ಕಡೆಗದ್ದೆ ನೀರಾವರಿ ಕೆರೆಯನ್ನು ಸರ್ವೇ ಮಾಡಿ ಒತ್ತುವರಿ ತೆರವುಗೊಳಿಸಿ ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕಬಿನಿ ಕಾರ್ಯಪಾಲಕ ಇಂಜಿನಿಯರ್ ರಮೇಶ್, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ರಾಮಕೃಷ್ಣ, ಕರುಣಾಮಯಿ, ಸಹಾಯಕ ಇಂಜಿನಿಯರ್ ನವೀನ್, ಭಸವೇಶ್, ಸತ್ತೇಗಾಲ ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆಂಪರಾಜು, ಮಾಜಿ ಸದಸ್ಯ ಪ್ರಭು, ಮುಖಂಡರಾದ ಸೈಯದ್ ಅಕ್ರಮ್, ಚಿನ್ನ ವೆಂಕಟೇಶ್, ಮಂಜೇಶ್‌ಗೌಡ, ಗೋಪಾಲ್‌ನಾಯಕ, ಡಿ.ಕೆ.ರಾಜು, ಎಸ್.ಆರ್. ಮಹಾದೇವ, ಜಿ.ಮಹಾದೇವ ಮತ್ತಿತರಿದ್ದರು.