ಕುರುಬನ ಕಟ್ಟೆ ಮಠದಲ್ಲಿ ವಿಶೇಷ ಪೂಜೆ

17kglphoto-5,,... (1)
Published on

ಕೊಳ್ಳೇಗಾಲ: ತಾಲೂಕಿನ ಕುರುಬನಕಟ್ಟೆ ಮಠದಲ್ಲಿ ಭೀಮನ ಅಮಾವಾಸ್ಯೆ ಪ್ರಯುಕ್ತ ಸೋಮವಾರ ವಿಶೇಷ ಪೂಜಾ ಕೈಂಕರ್ಯಯು ಶ್ರೀ ಮಠದ ಧರ್ಮಾಧಿಕಾರಿ ಶ್ರೀ ವರುಣ ಲಿಂಗರಾಜ ಅರಸ್ ಅವರ ಸಾನಿಧ್ಯದಲ್ಲಿ ನೆರವೇರಿತು.

ಬೆಳಗ್ಗೆ ಶ್ರೀ ಮಂಟೇಸ್ವಾಮಿ ಶಿಷ್ಯರಾದ ಶ್ರೀ ಜ್ಯೋತಿಲಿಂಗಯ್ಯ, ಚೆನ್ನಯ್ಯನವರ ಗದ್ದಿಗೆ ಹಾಗೂ ಉತ್ಸವ ಮೂರ್ತಿಗಳಾದ ಕಂಡಾಯಗಳಿಗೆ ವಿವಿಧ ಬಗೆಯ ಹೂಗಳಿಂದ ಅಲಂಕರಿಸಲಾಗಿತ್ತು. ಭಕ್ತರು ಹಾಗೂ ನೀಲಗಾರರ ಸಾಂಪ್ರದಾಯಿಕ ವಿಧಿ ವಿಧಾನಗಳಲ್ಲಿ ಗದ್ದುಗೆ ಹಾಗೂ ಉತ್ಸವ ಮೂರ್ತಿಗಳಾದ ಕಂಡಾಯಗಳಿಗೆ ಪೂಜೆ ನೆರವೇರಿಸಲಾಯಿತು. ಜಿಲ್ಲೆ ಸೇರಿದಂತೆ ಅಕ್ಕಪಕ್ಕದ ಜಿಲ್ಲೆಗಳಾದ ಮೈಸೂರು, ಮಂಡ್ಯದಿಂದಲೂ ಭಕ್ತರು ಆಗಮಿಸಿದ್ದರು.

ದೇವಾಲಯದಲ್ಲಿ ಪ್ರತಿ ಸೋಮವಾರ-ಶುಕ್ರವಾರ ಅಮಾವಾಸ್ಯೆ, ಹುಣ್ಣಿಮೆ ಹಾಗೂ ಹಬ್ಬದ ದಿನಗಳಲ್ಲಿ ವಿಶೇಷ ಪೂಜೆ ನಡೆಯುತ್ತದೆ. ಭೀಮನ ಅಮಾವಾಸ್ಯೆ ಪ್ರಯುಕ್ತ ಸ್ವಾಮಿಗೆ ವಿಶೇಷ ಪೂಜೆ ಇದ್ದರಿಂದ ಸಾವಿರಾರು ಭಕ್ತರು ಸ್ವಾಮೀಜಿಯ ದರ್ಶನಕ್ಕೆ ಬಂದಿದ್ದರು. ಭಕ್ತರಿಗೆ ಮಠದ ವತಿಯಿಂದ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ತಾಲ್ಲೂಕಿನ ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳಾದ ಚಿಕ್ಕಲ್ಲೂರು ಶ್ರೀ ಸಿದ್ದಪ್ಪಾಜಿ ಸ್ವಾಮಿ ದೇವಾಲಯ, ಶಿವನ ಸಮುದ್ರದ ಸಾಮೂಹಿಕ ದೇವಾಲಯಗಳಾದ ಆದಿಶಕ್ತಿ ಮಾರಮ್ಮ ದೇವಾಲಯ, ಪ್ರಸನ್ನ ಮೀನಾಕ್ಷಿ ದೇವಾಲಯ ಹಾಗೂ ಮಧ್ಯರಂಗ ಖ್ಯಾತಿಯ ಜಗನ್ಮೋಹನ ಶ್ರೀರಂಗನಾಥಸ್ವಾಮಿ ದೇವಾಲಯ ಸೇರಿದಂತೆ ವಿವಿಧ ದೇವಾಲಯಗಳಲ್ಲೂ ವಿಶೇಷ ಪೂಜೆಗಳು ನೆರವೇರಿದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net