ಕಲೆ, ಸಾಹಿತ್ಯ ಉಳಿವಿಗೆ ಪ್ರೋತ್ಸಾಹ ಅಗತ್ಯ

23-kollegal-2
Published on

ಕೊಳ್ಳೇಗಾಲ: ಕಲೆ, ಸಾಹಿತ್ಯ ಉಳಿಯಬೇಕಾದರೆ ಪ್ರೋತ್ಸಾಹ ಅತ್ಯಗತ್ಯ ಎಂದು ನಿವೃತ್ತ ಪ್ರಾಂಶುಪಾಲ ಹಾಗೂ ಕರ್ನಾಟಕ ಕಲಾಶ್ರೀ ಪ್ರಶಸ್ತಿ ಪುರಸ್ಕೃತ ಪ್ರೊ.ಮಲ್ಲಣ್ಣ ಅಭಿಪ್ರಾಯ ಪಟ್ಟರು.

ಪಟ್ಟಣದ ಜೆಎಸ್‌ಎಸ್ ಮಹಿಳಾ ಕಾಲೇಜು ಸಭಾಂಗಣದಲ್ಲಿ ಭಾನುವಾರ ಮೈಸೂರಿನ ಹಂಸಧ್ವನಿ ಸಾಂಸ್ಕೃತಿಕ ಟ್ರಸ್ಟ್, ಬೆಂಗಳೂರಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಆಯೋಜಿಸಿದ್ದ ಸಾಂಸ್ಕೃತಿಕ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.
ವ್ಯಕ್ತಿ ಹೊಸತನ್ನು ಕಂಡ ಬಳಿಕವಷ್ಟೇ ಅದರ ಹೂರಣ ಚರ್ಚೆ ಸಾಧ್ಯ. ಹೀಗಾಗಿ ತುಂಬಾ ಬೆರಗನ್ನು ತರುವ ಸ್ವರ ಸಾಹಿತ್ಯದ ಪದಗಳು ಸಂಗೀತದ ದೃಷ್ಟಿಯಿಂದ ಸೊಗಸಾಗಲಿದೆ. ನನ್ನ ಮಹಾದಾಸೆ ಏನೆಂದರೆ ಮೇರು ಗಾಯಕ ಪಿ. ಕಾಳಿಂಗರಾವ್ ಅವರ ಹಾಡುಗಾರಿಕೆಯನ್ನು ನಾಡಿನಾದ್ಯಂತ ಪಸರಿಸುವುದಾಗಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಲಯನ್ ಎಸ್.ನಾಗರಾಜು ಕೊಂಗರಹಳ್ಳಿ ಮಾತನಾಡಿ, ಕಲೆಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಈ ಕಂಪ್ಯೂಟರ್ ಯುಗದಲ್ಲಿ ನಶಿಸದಂತೆ ಕಲೆಯನ್ನು ಉಳಿಸಿ, ಬೆಳೆಸಬೇಕಾಗಿದೆ ಎಂದು ತಿಳಿಸಿದರು.
ಶ್ರೀನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಕನ್ನಡ ಸಾಹಿತ್ಯ ಪರಿಷತ್ ಸ್ಥಾಪಿಸಿದರು. ಹಾಗೆಯೇ ಕೃಷಿ, ಕೈಗಾರಿಕೆ, ನೀರಾವರಿ, ಸಾಹಿತ್ಯ ಎಲ್ಲ ಕ್ಷೇತ್ರಕ್ಕೂ ಅಪಾರ ಕೊಡುಗೆ ನೀಡಿದ್ದಾರೆ ಎಂದರು.

ಜೆಎಸ್‌ಎಸ್ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಕೊಂಗಳಪ್ಪ ಮಾತನಾಡಿ, ಹವ್ಯಾಸಗಳು ಅಂತರಂಗದ ಅನ್ವೇಷಣೆ ಹಾಗೂ ಹೊಸ ಹೊಸ ಆವಿ ಷ್ಕಾರಗಳಿಗೆ ದಾರಿ ಮಾಡಿಕೊಡುತ್ತವೆ. ಮಕ್ಕಳು ಉತ್ತಮ ಹವ್ಯಾಸಗಳನ್ನು ಬೆಳೆಸಿಕೊಂಡು ಕಲೆ, ಸಾಹಿತ್ಯದ ಕಡೆಗೆ ಗಮನಹರಿಸಬೇಕು ಎಂದು ಸಲಹೆ ನೀಡಿದರು. ನಂತರ ಕರ್ನಾಟಕ ಕಲಾಶ್ರೀ ಪ್ರಶಸ್ತಿ ವಿಜೇತ ಪ್ರೊ.ಮಲ್ಲಣ್ಣ ಅವರು ಗಾಯಕರಾದ ಪಿ.ಕಾಳಿಂಗರಾವ್ ಅವರ ಗೀತೆಗಳು, ಬಸವಣ್ಣನವರ ವಚನಗಳು, ರತ್ನನ ಪದಗಳು, ಕುವೆಂಪು ರಚಿತ ಗೀತೆಗಳು, ಪಿ.ಬಿ.ಶ್ರೀನಿವಾಸ್ ಅವರು ಹಾಡಿರುವ ಗೀತೆಗಳನ್ನು ಹಾಡಿ ರಂಜಿಸಿದರು.

ಅಕ್ಕನ ಬಳಗದ ಅಧ್ಯಕ್ಷೆ ಪುಷ್ಪಾ ನಾಗಮಲ್ಲಪ್ಪ, ಕನ್ನಡ ಸಾಹಿತ್ಯ ಪರಿಷತ್ ಕಾರ್ಯದರ್ಶಿ ಸಿ.ನಾಗರಾಜು, ನಾಮ ನಿರ್ದೇಶಕ ಕಾತ್ಯಾಯನಿ, ಸದಸ್ಯರಾದ ಪ್ರಕಾಶ್‌ಮೂರ್ತಿ, ಅಕ್ಕನ ಬಳಗದ ಕಾರ್ಯದರ್ಶಿ ಪ್ರಮೀಳಾ ನಂಜಪ್ಪ, ಲಯನ್ಸ್ ಸದಸ್ಯ ಶಿವಲಿಂಗಸ್ವಾಮಿ, ಆನಂದ್‌ರಾಮ್ ಶೆಟ್ಟಿ, ಚಿಕ್ಕಬಸವಯ್ಯ ಮತ್ತಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net