

ಕೊಳ್ಳೇಗಾಲ: ಬ್ಯಾಡ್ಮಿಂಟನ್ ಕ್ರೀಡೆಯಲ್ಲಿ ಏನಾದರೂ ಸಾಧಿಸಬೇಕೆಂಬ ಕನಸು ಕಂಡು ಕುಟುಂಬದಲ್ಲಿ ಬದಲಾದ ಪರಿಸ್ಥಿತಿಯಿಂದ ಸಂಪೂರ್ಣವಾಗಿ ಶಿಕ್ಷಣ ಹಾಗೂ ಕ್ರೀಡೆಗೆ ವಿದಾಯ ಹೇಳಿದ ಕೆಂಪನಪಾಳ್ಯದ ರಾಜಶೇಖರ್ ಅವರ ಕೈಯನ್ನು ಕೊನೆಗೂ ಭೂಮಿ ತಾಯಿ ಹಿಡಿದಿದ್ದಾಳೆ.
ಕೆಂಪನಪಾಳ್ಯ ಗ್ರಾಮದ ನಿವಾಸಿ ನಿವೃತ್ತ ಆರಕ್ಷಕ ಉಪನಿರೀಕ್ಷಕ ಮಹದೇವಪ್ಪ ಮತ್ತು ರಾಜಮ್ಮ ದಂಪತಿಗೆ ಇಬ್ಬರು ಗಂಡು ಮಕ್ಕಳು. ಅವರಲ್ಲಿ ಎರಡನೇ ಪುತ್ರ ರಾಜಶೇಖರ್ ಅವರಾಗಿದ್ದು, ಇವರ ಸಹೋದರ ಅನಾರೋಗ್ಯದಿಂದ 26 ವಯಸ್ಸಿನಲ್ಲಿಯೇ ಕಾಲವಾದರು. ಚಿಕ್ಕ ವಯಸ್ಸಿನಿಂದಲೂ ರಾಜಶೇಖರ್ ಅವರಿಗೆ ಕ್ರೀಡೆ ಮೇಲೆ ಬಹಳ ಆಸಕ್ತಿ. ತಾಲೂಕು, ಜಿಲ್ಲಾ ಮಟ್ಟದ ಬ್ಯಾಡ್ಮಿಂಟನ್‌ನಲ್ಲಿ ಉತ್ತಮ ಕ್ರೀಡಾಪಟುವಾಗಿ ಗುರುತಿಸಿಕೊಂಡಿದ್ದರು. ಜಿಲ್ಲಾ ಮಟ್ಟದ ಪಂದ್ಯಗಳಲ್ಲಿ ಆಡಿದ್ದರು. ಇವರಿಗಿದ್ದ ಕ್ರೀಡಾ ಆಸಕ್ತಿ ರಾಜ್ಯ ಮಟ್ಟದ ತಂಡದ ಜತೆ 1982ರಲ್ಲಿ ಬ್ಯಾಡ್ಮಿಂಟನ್‌ನ ನ್ಯಾಷನಲ್ ಹಂತದ ಕ್ರೀಡೆಯಲ್ಲೂ ಸ್ಪರ್ಧಿಸಿದ್ದರು. ಬ್ಯಾಡ್ಮಿಂಟನ್ ಆಟದಲ್ಲಿ ಉತ್ತಮ ಪ್ರದರ್ಶನ ನೀಡಿ ಹಲವು ಕಪ್‌ಗಳನ್ನು ಗೆದ್ದಿದ್ದರು. ಸ್ಟೋರ್ಟ್ಸ್ ಕೋಟಾದಲ್ಲಿ ಅಂದಿನ ಇಂಡಿಯನ್ ಟೆಲಿಫೋನ್ ಇಂಡಸ್ಟ್ರೀಸ್(ಐಟಿಐ) ಕಂಪನಿಯಲ್ಲಿ ಉದ್ಯೋಗ ದೊರೆತಿತ್ತು.
ಆದರೆ, ವಿಧಿ ಆಟ ಬೇರೆಯೇ ಇತ್ತು ಎನ್ನುತ್ತಾರೆ ರಾಜಶೇಖರ್. ಕ್ರೀಡೆಯ ಜತೆ ದ್ವಿತೀಯ ಪಿಯುಸಿ ಪೂರ್ಣಗೊಳಿಸಿ ಪದವಿ ವ್ಯಾಸಂಗ ಮಾಡಲು ಮುಂದಾಗಿದ್ದಾಗ ತನ್ನ ಸಹೋದರ ಕಾಲವಾದ ಕಾರಣ ಶಿಕ್ಷಣವನ್ನು ಮೊಟಕುಗೊಳಿಸಿದರು. ತಾಲೂಕಿನ ತಿಮ್ಮರಾಜೀಪುರದಲ್ಲಿರುವ ಪಿತ್ರಾರ್ಜಿತ ಜಮೀನನ್ನು ನೋಡಿಕೊಳ್ಳುವವರು ಇರಲಿಲ್ಲ. ಕುಟುಂಬದ ಬದಲಾದ ಪರಿಸ್ಥಿತಿಯಿಂದ ಕ್ರೀಡೆಯಲ್ಲೂ ಮುಂದುವರಿಯಲೂ ಸಾಧ್ಯವಾಗಿಲ್ಲ. ಮನೆಯ ಜವಾಬ್ದಾರಿ ತಮ್ಮ ಮೇಲೆ ಬಿದ್ದ ಕಾರಣ ವ್ಯವಸಾಯದ ಕಡೆ ಮುಖ ಮಾಡಬೇಕಿತ್ತು. ಆರಂಭದಲ್ಲಿ ಸಾಮಾನ್ಯ ಕೃಷಿಯಲ್ಲಿ ತೊಡಗಿದ ರಾಜಶೇಖರ್‌ಗೆ ಕಷ್ಟ ಎನಿಸಿತು. ಹಾಗೆಂದು ಕೈಚೆಲ್ಲದೆ ಮಾದರಿ ರೈತರಾಗಬೇಕೆಂಬ ಉದ್ದೇಶದಿಂದ ಮುಂದುವರಿದರು. ಕೊನೆಗೂ ಭೂಮಿ ತಾಯಿ ಕೈ ಹಿಡಿದಿದ್ದು ಅಧಿಕ ಲಾಭ ಗಳಿಸುವ ಮೂಲಕ ಉತ್ತಮ ಜೀವನ ನಡೆಸುತ್ತಿದ್ದಾರೆ. ಕಳೆದ 5 ವರ್ಷಗಳಿಂದ ಸಾವಯವ ಕೃಷಿ ಪದ್ಧತಿ ಅಳವಡಿಸಿಕೊಂಡಿದ್ದು ಪ್ರಾಯೋಗಿಕವಾಗಿ 5 ಎಕರೆಯಲ್ಲಿ ಸಾವಯವ ಕೃಷಿ ಕೈಗೊಂಡು ಭೂಮಿ ತಾಯಿಯ ಸೇವೆ ಮಾಡುತ್ತಿದ್ದಾರೆ.
ಅರಿಶಿಣ ತಂದ ಲಾಭ: ಇರುವ 12 ಎಕರೆಯಲ್ಲಿ ಎರಡೂವರೆ ಎಕರೆಯಲ್ಲಿ ಕಬ್ಬು ಬೆಳೆದಿದ್ದಾರೆ. ಭೂಮಿಯ ಫಲವತ್ತತೆ ಹೆಚ್ಚಿಸಲು 5 ಎಕರೆಯಲ್ಲಿ ಹಸಿರು ಗೊಬ್ಬರ ಹಾಕಿದ್ದಾರೆ. ಸಾವಯವ ಪದ್ಧತಿಯಲ್ಲಿ ಒಂದೂವರೆ ಎಕರೆಯಲ್ಲಿ ಅರಿಶಿಣ ಬಿತ್ತನೆ ಮಾಡಿದ್ದಾರೆ. ಉಳಿದ 3 ಎಕರೆಯಲ್ಲಿ ಚೆಂಬೆ, ಸೆಣಬು ಗಿಡವನ್ನು ಬೆಳೆಸುತ್ತಿದ್ದು, ಮಳೆ ಬಿದ್ದ ವೇಳೆ ಚೆಂಬೆ, ಸೆಣಬು ಗಿಡಗಳ ಸಹಿತ ಉಳುಮೆಮಾಡಿ ಅದನ್ನು ಕೊಳೆಯಿಸಲು ಮುಂದಾಗಿದ್ದಾರೆ.
ಮೂರು ತಿಂಗಳ ಹಿಂದೆ ಸಾವಯವ ಕೃಷಿ ಪದ್ಧತಿಯಲ್ಲಿ ಒಂದೂವರೆ ಎಕರೆಯಲ್ಲಿ ಬೆಳೆದಿದ್ದ ಅರಿಶಿಣ ಬೆಳೆಯಲ್ಲಿ 12 ಕ್ವಿಂಟಾಲ್ ಅರಿಶಿಣ ದೊರೆತು 2 ಲಕ್ಷ ರೂ.ಗೂ ಹೆಚ್ಚು ಲಾಭ ಪಡೆದುಕೊಂಡಿದ್ದಾರೆ.
ಸಮಗ್ರ ಕೃಷಿ ಮಾಡುವ ಇಚ್ಛೆ: ಜಮೀನಿನಲ್ಲಿ 70 ತೆಂಗಿನ ಮರಗಳಿವೆ. ಮಾವು, ಸೀಬೆ, ಸಪೋಟ ಗಿಡಗಳಿದ್ದು, ಮುಂದೆ 3 ಎಕರೆಯಲ್ಲಿ ವಿವಿಧ ತರಹದ ಹಣ್ಣು ಗಿಡಗಳು, ಸೊಪ್ಪು, ತರಕಾರಿ ಬೆಳೆಯಲೂ ಇಚ್ಛಿಸಿದ್ದಾರೆ. ಹೈನುಗಾರಿಕೆಗೂ ಒತ್ತು: ಮನೆಯಲ್ಲಿ 3 ಹಸುಗಳು, 1 ಕರುವಿದೆ. ಇದರ ಸಾಕಣೆಯಲ್ಲಿ ರಾಜಶೇಖರ್ ಕುಟುಂಬ ತೊಡಗಿದೆ. ಪತ್ನಿ ಬಸವರಾಜಮ್ಮಣಿ ವ್ಯವಸಾಯ ಕೆಲಸಕ್ಕೆ ಸಾಥ್ ನೀಡುತ್ತಾರೆ. ಹಸುವಿನಿಂದ 1 ತಿಂಗಳಿಗೆ 250 ಲೀ. ಹಾಲನ್ನು ಡೇರಿಗೆ ನೀಡಿ ಲಾಭ ಗಳಿಸುತ್ತಿದ್ದಾರೆ. ಹಸುವಿನ ಮೇವಿಗೆ ರಾಸಾಯನಿಕ ಹಿಂಡಿ ಬಳಕೆ ಮಾಡದೆ ಹಸಿರು, ಒಣಮೇವು ನೀಡುತ್ತಿರುವುದು ವಿಶೇಷ.
ಜಮೀನಿಗೆ ಕೊಟ್ಟಿಗೆ ಗೊಬ್ಬರ: ಹಸುಗಳಿಂದ ಶೇಖರಿಸಿದ ಗೊಬ್ಬರ, ಜೀವಾಮೃತವನ್ನು ವ್ಯವಸಾಯಕ್ಕೆ ಬಳಸುತ್ತಿದ್ದಾರೆ. ಜಮೀನಿನಲ್ಲಿ ದೊರೆಯುವ ಯಾವುದೇ ಕಸ, ಕಡ್ಡಿಯನ್ನು ತೆರವು ಮಾಡದೆ ಅದನ್ನೇ ಕೊಳೆಯಿಸಿ ಭೂಮಿ ಫಲವತ್ತೆಗೆ ಒತ್ತು ನೀಡಿದ್ದಾರೆ. 2 ಎರಡು ವರ್ಷದಲ್ಲಿ ಸಂಪೂರ್ಣ ಸಾವಯವ ಕೃಷಿ ಮಾಡುವ ಗುರಿಯೊಂದಿಗೆ ಶ್ರಮಿಸುತ್ತಿದ್ದಾರೆ.
ಚಿಕ್ಕವಯಸ್ಸಿನಿಂದಲೂ ಕ್ರೀಡೆ ಬಗ್ಗೆ ಹೆಚ್ಚಿನ ಆಸಕ್ತಿ ಇತ್ತು. ಬದಲಾದ ಪರಿಸ್ಥಿತಿಯಿಂದ ಕೃಷಿಯ ಕಡೆ ಮುಖ ಮಾಡಿದೆ. ಆರಂಭದಲ್ಲಿ ಸಾಮಾನ್ಯವಾಗಿ ರಾಸಾಯನಿಕ ಕೃಷಿ ಮಾಡುತ್ತಿದೆ. ಆದರೆ, ಸಂಪೂರ್ಣ ಸಾವಯವ ಕೃಷಿ ಮಾಡಬೇಕೆಂಬ ಉದ್ದೇಶದಿಂದ 5 ಎಕರೆಯಲ್ಲಿ ಸಾವಯವ ಕೃಷಿ ಕೈಗೊಂಡಿದ್ದೇನೆ. ಈ ಕೃಷಿಯಲ್ಲಿ ಬದುಕಿನಲ್ಲಿ ತೃಪ್ತಿ ಇದೆ.ರಾಜಶೇಖರ್, ಮಾದರಿ ರೈತ, ಕೆಂಪನಪಾಳ್ಯ ಗ್ರಾಮ