

ಕೊಳ್ಳೇಗಾಲ: ಯೋಗ ಭಾರತೀಯ ಸನಾತನ ಧರ್ಮದ ಜೀವನ ಕಲೆಯಾಗಿದ್ದು. ಶರೀರ ಮತ್ತು ಮನಸ್ಸನ್ನು ಒಂದುಗೂಡಿಸುವ ಶಕ್ತಿ ಹೊಂದಿದೆ ಎಂದು ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ಅಧ್ಯಕ್ಷ ಪಿ.ಮಂಜುನಾಥ್ ಹೇಳಿದರು.
10ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿಪಟ್ಟಣದ ಎಂಜಿಎಸ್‌ವಿ ಜೂನಿಯರ್ ಕಾಲೇಜು ಮೈದಾನದಲ್ಲಿ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ಹಾಗೂ ನಂ.1 ಕನ್ನಡ ದಿನಪತ್ರಿಕೆ ವಿಜಯವಾಣಿ ಸಹಯೋಗದಲ್ಲಿ ಶುಕ್ರವಾರ ಆಯೋಜಿಸಿದ್ದ ಯೋಗ ದಿನೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಯೋಗ ಮಾನಸಿಕ ಆರೋಗ್ಯ ನೀಡುವ ಜತೆಗೆ ದೇಹದ ಆರೋಗ್ಯವನ್ನೂ ಸದೃಢವಾಗಿರಿಸಿರುತ್ತದೆ. ಜತೆಗೆ ರೋಗಗಳನ್ನು ನಿರ್ಮೂಲನೆ ಮಾಡುತ್ತದೆ. 8 ವಿವಿಧ ಯೋಗಗಳ ಅಭ್ಯಾಸ ಮಾಡಿದರೆ ಆರೋಗ್ಯ ಸಿದ್ಧಿಸುತ್ತದೆ ಎಂದರು. 2014 ರ ಸೆ.27ರಲ್ಲಿ ಪ್ರಧಾನಿ ಮಂತ್ರಿ ನರೇಂದ್ರ ಮೋದಿ ಅವರು ವಿಶ್ವ ಸಂಸ್ಥೆಯ 69ನೇ ಮಹಾ ಅಧಿವೇಶನದಲ್ಲಿ ವಿಶ್ವ ಯೋಗ ನ ಆಚರಣೆ ಕುರಿತು ಪ್ರಸ್ತಾವನೆ ಮಂಡಿಸಿದರು. ಅಂದ 197 ದೇಶಗಳು ಯೋಗದಿನ ಆಚರಣೆಗೆ ಸಮ್ಮತಿಸಿತು. ಅದರಲ್ಲಿ 47 ಮುಸ್ಲಿಂ ರಾಷ್ಟ್ರಗಳು ಒಪ್ಪಿಗೆ ನೀಡಿತು. ಆ ಮೂಲಕ ಮೋದಿ ಅವರು ಇಡೀ ವಿಶ್ವಕ್ಕೆ ಯೋಗವನ್ನು ಪರಿಚಯಿಸಿದರು. ಅಂತೆಯೇ, ಜೂ.21ರಂದು ಇಡೀ ವಿಶ್ವವೇ ಯೋಗವನ್ನು ಆಚರಣೆ ಮಾಡುತ್ತಿದೆ ಎಂದರು.
ಇಲ್ಲಿನ ಪತಂಜಲಿ ಯೋಗ ಶಿಕ್ಷಣ ಸಭಾಂಗಣದಲ್ಲಿ ನಿತ್ಯ ಮುಂಜಾನೆ 5.30 ರಿಂದ 7 ಹಾಗೂ ಸಂಜೆ 5 ರಿಂದ 6 ರವರೆಗೆ ಮಾತೆಯರಿಗೆ ಯೋಗಾಭ್ಯಾಸ ನಡೆಯಲಿದ್ದು, ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ತಿಳಿಸಿದರು.
ಸಮಿತಿ ಗೌರವಾಧ್ಯಕ್ಷ ಆನಂದ ರಾಮಶೆಟ್ಟಿ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ದುಡ್ಡು ದೊಡ್ಡಪನಾದರೆ. ಅವರಪ್ಪ ಆರೋಗ್ಯ. ಆದ್ದರಿಂದ ಆರೋಗ್ಯಕ್ಕೆ ಯೋಗ ಅತ್ಯವಶ್ಯಕ ಎಂದರು.
1989ರಲ್ಲಿ ಗುರುಸ್ವಾಮಿ ಆರಾಧ್ಯರು ಕೊಳ್ಳೇಗಾಲದಲ್ಲಿ ಯೋಗ ತರಬೇತಿ ಆರಂಭಿಸಿದರು. ಇದಕ್ಕೆ ಪಶುಪತಿ ಅವರು ಜಾಗವನ್ನು ಉಚಿತವಾಗಿ ನೀಡಿದರು. ನಾನು ಕೂಡ ಈ ಸಮಿತಿಯಲ್ಲಿ 21 ವರ್ಷ ಕಾಲ ಕೆಲಸ ಮಾಡಿದ್ದೇನೆ ಎಂದು ಹೇಳಿದರು. ಸಮಿತಿ ಸದಸ್ಯ ನಾಗರಾಜು ಕೊಂಗರಹಳ್ಳಿ ಮಾತನಾಡಿದರು. ಸಮಿತಿಯ ಕೊಳ್ಳೇಗಾಲದ ಸಂಸ್ಥಾಪಕ ಎಚ್.ಎಸ್ ನಟರಾಜನ್, ಮುಖ್ಯ ಗುರುಗಳಾದ ಎಚ್.ಎಸ್.ಪಶುಪತಿ, ಉಪಾಧ್ಯಕ್ಷ ಕೆ.ಎಸ್. ಜಗದೀಶ್, ಕಾರ್ಯದರ್ಶಿ ಇಂದ್ರೇಶ್, ಖಜಾಂಚಿ ಪಾಡುರಂಗನ್, ಸದಸ್ಯರಾದ ನಾಗರಾಜು ಎಸ್.ಕೊಂಗರಹಳ್ಳಿ, ಯೋಗ ಶಿಕ್ಷಕಿ ಜ್ಯೋತಿ ಮತ್ತಿತರಿದ್ದರು. ಬೆಳಗ್ಗೆ 6 ರಿಂದ 7 ಗಂಟೆವರೆಗೆ ಯೋಗ ಪಟುಗಳು ವಿವಿಧ ಭಂಗಿಗಳನ್ನು ಪ್ರದರ್ಶನ ಮಾಡಿ ಸಾರ್ವಜನಿಕರನ್ನು ಆಕರ್ಷಿಸಿದರು.