

ಕೊಳ್ಳೇಗಾಲ: ಪಟ್ಟಣದ ಬಾಪುನಗರ ಸಮೀಪದ ಕೆರೆ ಏರಿಯ ರಸ್ತೆಯಲ್ಲಿ ಗುರುವಾರ ಮೊಪೆಡ್ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಮಹಿಳೆಯರು ಗಾಯಗೊಂಡಿದ್ದಾರೆ.
ಮಾಂಬಳ್ಳಿ ಗ್ರಾಮದ ನಿವಾಸಿ ವರ್ಷಿತಾ ಚಾಲನೆ ಮಾಡುತ್ತಿದ್ದ ಮೊಪೆಡ್ ಡಿಕ್ಕಿ ಹೊಡೆದು ಬಾಪುನಗರದ ನಿವಾಸಿ ದೊಡ್ಡಮ್ಮ (70), ಪುಟ್ಟಮ್ಮ (50) ಗಾಯಗೊಂಡಿದ್ದಾರೆ. ಇವರು ಕೂಲಿ ಕಾರ್ಮಿಕರಾಗಿದ್ದು, ಎಂದಿನಂತೆ ಪಟ್ಟಣದ ಕೃಷಿ ಮಾರುಕಟ್ಟೆಗೆ ಕೂಲಿ ಕೆಲಸಕ್ಕೆಂದು ನಡೆದುಕೊಂಡು ತೆರಳುತ್ತಿದ್ದಾಗ ಕೊಳ್ಳೇಗಾಲ ಟೌನ್‌ನಿಂದ ಮುಡಿಗುಂಡ ಕಡೆಗೆ ತೆರಳುತ್ತಿದ್ದ ಮೊಪೆಡ್ ಡಿಕ್ಕಿ ಹೊಡೆದು ಗಾಯಗೊಂಡಿದ್ದಾರೆ. ಸ್ಥಳೀಯರು ಗಾಯಾಳುಗಳನ್ನು ಕೊಳ್ಳೇಗಾಲ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದು, ವೈದ್ಯರ ಸಲಹೆಯಂತೆ ಪುಟ್ಟಮ್ಮ ಅವರನ್ನು ಚಾಮರಾಜನಗರ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ಈ ಸಂಬಂಧ ಪಟ್ಟಣ ಪೊಲೀಸ್ ಠಾಣೆಗೆ ಗಾಯಾಳು ದೊಡ್ಡಮ್ಮ ದೂರು ನೀಡಿದ್ದಾರೆ.