

ಕೊಳ್ಳೇಗಾಲ: ತಾಲೂಕಿನ ಹಳೇ ಹಂಪಾಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಶುಕ್ರವಾರ ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುಳಾ ಭೇಟಿ ನೀಡಿ ಪರಿಶೀಲಿಸಿದರು.
ನಂ.1 ಕನ್ನಡ ಪತ್ರಿಕೆ ವಿಜಯವಾಣಿಯಲ್ಲಿ ಜು.14ರಂದು ‘ಶಾಲಾ ಕೊಠಡಿಗಳು ಶಿಥಿಲ’ ಎಂಬ ಶೀರ್ಷಿಕೆಯಡಿ ವರದಿ ಪ್ರಕಟವಾಗಿತ್ತು. ಈ ಹಿನ್ನೆಲೆಯಲ್ಲಿ ಬಿಇಒ ಮಂಜುಳಾ ಖುದ್ದು ಭೇಟಿ ನೀಡಿ ಶಿಥಿಲಗೊಂಡಿರುವ ಕೊಠಡಿಗಳ ಪರಿಶೀಲನೆ ಮಾಡಿದರು. ನಂತರ ವಿಜಯವಾಣಿಯೊಂದಿಗೆ ಮಾತನಾಡಿದ ಅವರು, ಮಕ್ಕಳು ಕೂರುವ ಕೊಠಡಿ ಪಕ್ಕದಲ್ಲೇ ಶಿಥಿಲಗೊಂಡಿರುವ ಕಟ್ಟಡವಿದೆ. ಲೋಕೋಪಯೋಗಿ ಇಲಾಖೆಗೆ ಶಿಥಿಲಗೊಂಡಿರುವ ಕಟ್ಟಡಗಳ ಯೋಗ್ಯತಾ ಪ್ರಮಾಣ ಪತ್ರ ನೀಡಲು ಪತ್ರ ಬರೆದಿದ್ದೇನೆ. ಅವರು ಲಿಖಿತ ಉತ್ತರ ನೀಡಿದ ಬಳಿಕ ಶಿಥಿಲ ಕಟ್ಟಡಗಳನ್ನು ಗ್ರಾ.ಪಂ. ಕೆಡವುತ್ತದೆ. ಶಾಲೆಯ ಆವರಣದಲ್ಲಿ ನಿರ್ಮಿಸಿರುವ ನೂತನ ಕೊಠಡಿಯನ್ನು ಹಸ್ತಾಂತರ ಮಾಡಿಕೊಡಲು ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ಗಮನಸೆಳೆಯುತ್ತೇನೆ. ತಾಲೂಕು ವ್ಯಾಪ್ತಿಯಲ್ಲಿರುವ ಶಾಲೆಗಳಲ್ಲಿ ಎಷ್ಟು ಶಿಥಿಲ ಕಟ್ಟಡಗಳಿದೆ ಎಂಬ ಪಟ್ಟಿ ತಯಾರಿಗೂ ಮುಂದಾಗಿದ್ದೇನೆ ಎಂದರು.
ಸದ್ಯ 3 ಕಟ್ಟಡದಲ್ಲಿ ತರಗತಿ ನಡೆಯುತ್ತಿದೆ. ಈ ಪೈಕಿ ಎರಡು ಕಟ್ಟಡ ಸುಸ್ಥಿತಿಯಲ್ಲಿದೆ. ಉಳಿದ 1 ಕಟ್ಟಡ ಛಾವಣಿ ಮೇಲೆ ನೀರು ನಿಲ್ಲದಂತೆ ನೋಡಿಕೊಳ್ಳಿ ಎಂದು ಶಾಲಾ ಸಿಬ್ಬಂದಿಗೆ ಸೂಚಿಸಿದ್ದೇನೆ ಎಂದು ಮಂಜುಳಾ ವಿವರಿಸಿದರು. ಮುಖ್ಯಶಿಕ್ಷಕಿ ಮಾಣಿಕ್ಯಾ, ಗ್ರಾಪಂ ಸದಸ್ಯ ಮಹದೇವಪ್ಪ, ಎಸ್.ಡಿ.ಎಂ.ಸಿ. ಅಧ್ಯಕ್ಷ ಶಿವಮಲ್ಲು ಇತರರು ಇದ್ದರು.