ವಿಮೆ ಹಣ ಕೊಡದಿದ್ದರೆ ಅನಿರ್ದಿಷ್ಟಾವಧಿ ಧರಣಿ

16-KGLPHOTO-3,,,,
Published on

ಕೊಳ್ಳೇಗಾಲ: 2023-24ನೇ ಸಾಲಿನ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿ ತಾಲೂಕಿನ ಅರ್ಹ ರೈತರಿಗೆ ಹಣ ಸಂದಾಯವಾಗದಿದ್ದಲ್ಲಿ ಜೂ.18 ರಂದು ತಮ್ಮ ಕಚೇರಿ ಎದುರು ನೊಂದ ರೈತರೊಡಗೂಡಿ ಅನಿರ್ದಿಷ್ಟಾವಧಿ ಸತ್ಯಾಗ್ರಹ ಹಮ್ಮಿಕೊಳ್ಳುವುದಾಗಿ ರೈತ ಮುಖಂಡ ಕುಂತೂರು ನಂಜುಂಡಸ್ವಾಮಿ ಎಚ್ಚರಿಸಿದ್ದಾರೆ.

ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿ ಕೊಳ್ಳೇಗಾಲ ತಾಲೂಕಿನ ಬಹುತೇಕ ರೈತರು ಉದ್ದು, ಅರಿಶಿಣ, ರಾಗಿ, ಭತ್ತ, ಈರುಳ್ಳಿ ಸೇರಿದಂತೆ ಇತರ ಬೆಳೆಗಳ ಸಂಬಂಧ ಮುಂಗಾರು ಹಾಗೂ ಹಿಂಗಾರು ಬೆಳೆಗಳಿಗೆ 2023-24ನೇ ಸಾಲಿನಲ್ಲಿ ಇನ್ಶೂರೆನ್ಸ್ ಕಂಪನಿಗಳಿಗೆ ಆಯಾ ಬೆಳೆಗಳಿಗೆ ಅನುಸಾರವಾಗಿ ಬೆಳೆ ವಿಮೆ ಕಂತುಗಳನ್ನು ಪಾವತಿಸಿದ್ದಾರೆ. ಆದರೆ, ಸದರಿ ಬೆಳೆಗಳನ್ನು ಕಟಾವು ಸಮೀಕ್ಷೆ ಮಾಡುವ ಸಂದರ್ಭದಲ್ಲಿ ಈ ಬಗ್ಗೆ ಅಧಿಕಾರಿಗಳ ಬೇಜವಾಬ್ದಾರಿ ಮತ್ತು ಕರ್ತವ್ಯ ಲೋಪದಿಂದ ಇದುವರೆಗೂ ನೊಂದ ರೈತರಿಗೆ ಯಾವುದೇ ರೀತಿಯ ಬೆಳೆ ವಿಮೆ ಹಣಗಳು ಸಂದಾಯವಾಗಿಲ್ಲ. ಬದಲಾಗಿ, ರೈತರು ಬೆಳೆ ವಿಮೆ ಸಮೀಕ್ಷೆ ಸಂದರ್ಭದಲ್ಲಿ ಹೆಚ್ಚಿನ ಬೆಳೆ ಬೆಳೆದಿದ್ದಾರೆ ಎಂದು ವರದಿ ನೀಡಿದ್ದಾರೆ. ಹೀಗಾಗಿ, ಬೆಳೆ ವಿಮೆ ಸಕಾಲದಲ್ಲಿ ದೊರೆಯುತ್ತಿಲ್ಲ. ಪ್ರತಿ ವರ್ಷ ಮೇ ತಿಂಗಳಲ್ಲಿ ರೈತರ ಖಾತೆಗೆ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯ ಹಣ ಸಂದಾಯವಾಗುತ್ತಿತ್ತು. ಇದರಿಂದ ಮುಂದಿನ ಬೆಳೆಯ ವ್ಯವಸಾಯಕ್ಕೆ ಅನುಕೂಲವಾಗುತ್ತಿತ್ತು.

ಈ ನಡುವೆ ಹಿಂದಿನ ವರ್ಷದ ಬೆಳೆ ವಿಮೆ ಸಮೀಕ್ಷೆ ಮಾಡಿರುವ ಅಧಿಕಾರಿಗಳು ಇನ್ಶೂರೆನ್ಸ್ ಕಂಪನಿಗಳ ಜತೆ ಶಾಮೀಲಾಗಿ ರೈತರಿಗೆ ಮೋಸ ಮಾಡಿರುತ್ತಾರೆ. ಆದ್ದರಿಂದ ಕೂಡಲೇ ಅಧಿಕಾರಿಗಳನ್ನು ಕರೆಯಿಸಿ, ಸಮೀಕ್ಷೆ ಮಾಡಿರುವ ಜಮೀನುಗಳು ಹಾಗೂ ರೈತರ ಹೆಸರುಗಳ ಬಗ್ಗೆ ಸಮರ್ಪಕ ವರದಿ ತರಿಸಿಕೊಂಡು ಅಧಿಕಾರಿಗಳಿಗೆ ಕಾನೂನು ಕ್ರಮ ಜರುಗಿಸಿ, ರೈತರಿಗೆ ಬರಬೇಕಾಗಿದ ಮುಂಗಾರು ಮತ್ತು ಹಿಂಗಾರು ಉದ್ದು, ಹೆಸರು, ಹಿಂಗಾರಿನ ಭತ್ತ ಹಾಗೂ ಇತರ ಬೆಳೆ ಬಾಬ್ತು ಹಣವನ್ನು ರೈತರಿಗೆ ಇನ್ನು 3 ದಿನದಲ್ಲಿ ಸಂಬಂಧಿಸಿದ ಕಂಪನಿಗಳಿಂದ ಅಥವಾ ಸರ್ಕಾರದಿಂದ ಭರಿಸಿಕೊಡಬೇಕು. ಇಲ್ಲವಾದಲ್ಲಿ ತಮ್ಮ ಕಚೇರಿ ಎದುರು ಜೂ.18ರಂದು ಅನಿರ್ದಿಷ್ಟಾವಧಿ ಸತ್ಯಾಗ್ರಹ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಮಂಗಳವಾರ ಉಪ ವಿಭಾಗಾಧಿಕಾರಿ ಕಚೇರಿಗೆ ಲಿಖಿತ ಮನವಿ ಸಲ್ಲಿಸಿ ಕುಂತೂರು ನಂಜುಂಡಸ್ವಾಮಿ ಎಚ್ಚರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net