ಕೊಳ್ಳೇಗಾಲ ನಗರಸಭೆ ಏಕ ಬಳಕೆಯ ಪ್ಲಾಸ್ಟಿಕ್ ನಿಷೇಧ

kollegala-nagarasabhe-1200
Published on

ಚಾಮರಾಜನಗರ: ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆ ನಿಯಮಗಳು 2016 ರ ನಿಯಮ (4)2ರ ಪ್ರಕಾರ ತಿದ್ದುಪಡಿಯಂತೆ ಪಾಲಿಸೈರೀನ್ ಮತ್ತು ವಿಸ್ತರಿತ ಪಾಲಿಸೈರೀನ್ ಸೇರಿದಂತೆ ವಿವಿಧ ಏಕ ಬಳಕೆಯ ಪ್ಲಾಸ್ಟಿಕ್ (ಎಸ್‌ಯುಪಿ) ತಯಾರಿಕೆ, ವಿತರಣೆ, ಮಾರಾಟ ಮತ್ತು ಬಳಕೆಯನ್ನು 2022ರ ಜುಲೈ 1 ರಿಂದ ಜಾರಿಗೆ ಬರುವಂತೆ ನಿಷೇಧಿಸಲಾಗಿದೆ ಎಂದು ಕೊಳ್ಳೇಗಾಲ ನಗರಸಭೆ ತಿಳಿಸಿದೆ.

ಸರ್ಕಾರದ ಅಧಿಸೂಚನೆ ಸಂಖ್ಯೆ ಎಫ್‌ಇಇ 17ಇಪಿಸಿ2012 ದಿನಾಂಕ 11-03-2016ರ ಪ್ರಕಾರ ಹಲವು ಏಕಬಳಕೆ ಪ್ಲಾಸ್ಟಿಕ್ ಉತ್ಪನ್ನಗಳನ್ನು ಈಗಾಗಲೇ ನಿಷೇಧಿಸಲಾಗಿದೆ. ಅವುಗಳೆಂದರೆ ಪ್ಲಾಸ್ಟಿಕ್‌ನಿಂದ ತಯಾರಿಸಲ್ಪಟ್ಟ ಕ್ಯಾರಿ ಬ್ಯಾಗ್, ಬ್ಯಾನರ್‌ಗಳು, ಬಂಟಿಂಗ್ಸ್, ಪ್ಲೆಕ್ಸ್, ಪ್ಲೇಟ್‌ಗಳು, ಪ್ಲಾಸ್ಟಿಕ್ ಧ್ವಜಗಳು, ಕಪ್‌ಗಳು, ಸ್ಪೂನ್‌ಗಳು, ಅಂಟಿಕೊಳ್ಳುವ ಫಿಲ್ಮ್‌ಗಳು, ಎಲ್ಲಾ ದಪ್ಪದ ಡೈನಿಂಗ್ ಟೇಬಲ್‌ನಲ್ಲಿ ಹರಡಲು ಬಳಸುವ ಹಾಳೆಗಳು, ಸ್ಟ್ರಾ, ಥರ್ಮಕೋಲ್ ಮತ್ತು ಪ್ಲಾಸ್ಟಿಕ್ ಮೈಕ್ರೋ ಮಣಿಗಳಿಂದ ಮಾಡಿದ ವಸ್ತುಗಳಾಗಿವೆ.

ನವದೆಹಲಿಯ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ (ಎಂಓಇಎಫ್ ಮತ್ತು ಸಿಸಿ) ಸಚಿವಾಲಯವು ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆ (ತಿದ್ದುಪಡಿ) ನಿಯಮಗಳು 2021 ರಲ್ಲಿ ನಿಷೇಧಿತ ಉತ್ಪನ್ನಗಳ ಜೊತೆಗೆ ಹೆಚ್ಚುವರಿಯಾಗಿ ಹಲವು ಏಕಬಳಕೆಯ ಪ್ಲಾಸ್ಟಿಕ್ ಉತ್ಪನ್ನಗಳನ್ನು 1ನೇ ಜುಲೈ 2022 ರಿಂದ ಜಾರಿಗೆ ಬರುವಂತೆ ನಿಷೇಧಿಸಿ ದಿನಾಂಕ:12-08-2021ರಂದು ಆದೇಶ ಹೊರಡಿಸಿದೆ.

ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆ ನಿಯಮಗಳು 2016 ರ ನಿಯಮ(4)2ರ ಪ್ರಕಾರ ತಿದ್ದುಪಡಿಯಂತೆ ಪಾಲಿಸೈರೀನ್ ಮತ್ತು ವಿಸ್ತರಿತ ಪಾಲಿಸೈರೀನ್ ಸೇರಿದಂತೆ ಏಕ ಬಳಕೆಯ ಪ್ಲಾಸ್ಟಿಕ್(ಎಸ್‌ಯುಪಿ) ತಯಾರಿಕೆ, ವಿತರಣೆ, ಮಾರಾಟ ಮತ್ತು ಬಳಕೆಯನ್ನು ನಿಷೇಧಿಸಲಾಗಿದೆ. ಪ್ಲಾಸ್ಟಿಕ್‌ಗಳೊಂದಿಗೆ ಇಯರ್ ಬಡ್, ಬಲೂನ್‌ಗಳಿಗೆ ಬಳಸುವ ಸ್ಪಿಕ್‌ಗಳು, ಪ್ಲಾಸ್ಟಿಕ್ ಧ್ವಜಗಳು, ಪ್ಲಾಸ್ಟಿಕ್ ಕ್ಯಾಂಡಿ ಸ್ಟಿಕ್‌ಗಳು, ಐಸ್‌ಕ್ರೀಮ್ ಸ್ಟಿಕ್‌ಗಳು, ಅಲಂಕಾರಕ್ಕಾಗಿ ಬಳಸುವ ಪಾಲಿಸೈರೀನ್ (ಥರ್ಮಕೋಲ್) ಪ್ಲೇಟ್‌ಗಳು, ಕಪ್‌ಗಳು ಮತ್ತು ಲೋಟಗಳು, ಫೋರ್ಕ್‌ಗಳು, ಚಮಚ, ಚಾಕುಗಳು, ಟ್ರೇಗಳಂತಹ ಕಟ್ಲರಿಗಳು, ಸ್ವೀಟ್ ಬಾಕ್ಸ್‌ಗಳ ಸುತ್ತ ಸುತ್ತುವ ಅಥವಾ ಪ್ಯಾಕಿಂಗ್ ಫಿಲ್ಮ್‌ಗಳು, ಆಮಂತ್ರಣ ಪತ್ರಗಳು ಮತ್ತು ಸಿಗರೇಟ್ ಪ್ಯಾಕೇಟ್‌ಗಳು, 100 ಮೈಕ್ರಾನ್‌ಗಿಂತ ಕಡಿಮೆ ದಪ್ಪದ ಪ್ಲಾಸ್ಟಿಕ್, ಪಿವಿಸಿ ಬ್ಯಾನರ್ಸ್‌ಗಳು, ಪ್ಲಾಸ್ಟಿಕ್ ಸ್ಟಿರರ್‌ಗಳನ್ನು ನಿಷೇಧಿಸಲಾಗಿದೆ.

ಈ ಪ್ಲಾಸ್ಟಿಕ್ ವಸ್ತುಗಳ ಉತ್ಪಾದಕರು, ದಾಸ್ತಾನುದಾರರು, ಚಿಲ್ಲರೆ ವ್ಯಾಪಾರಿಗಳು, ಅಂಗಡಿ ಮಾಲೀಕರುಗಳು, ಇತರೆ ಸಂಸ್ಥೆಗಳು ಮತ್ತು ಸಾರ್ವಜನಿಕರು ಏಕ ಬಳಕೆಯ ಪ್ಲಾಸ್ಟಿಕ್ ತಯಾರಿಕೆ, ಸಂಗ್ರಹಣೆ, ವಿತರಣೆ, ಮಾರಾಟ ಮತ್ತು ಬಳಕೆಯನ್ನು ನಿಲ್ಲಿಸುವಂತೆ ಸೂಚಿಸಲಾಗಿದೆ.ಜುಲೈ 1ರಿಂದ 28 ರವರೆಗೆ ಪ್ಲಾಸ್ಟಿಕ್ ಮುಕ್ತ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಕೊಳ್ಳೇಗಾಲ ನಗರಸಭೆ ವ್ಯಾಪ್ತಿಗೆ ಒಳಪಡುವ ಸೂಪರ್ ಮಾರ್ಕೆಟ್ ಮತ್ತು ಇತರೆ ವಾಣಿಜ್ಯ ಸಾರ್ವಜನಿಕ ಸ್ಥಳಗಳು ಪ್ಲಾಸ್ಟಿಕ್ ಉಪಕ್ರಮಗಳನ್ನು ಅನುಸರಿಸಿದರೆ ಸದರಿ ಸಂಸ್ಥೆಗೆ ಹಸಿರು ಸಂಸ್ಥೆ ಎಂದು ಘೋಷಿಸಲಾಗುವುದು.

ಆದೇಶ ಉಲ್ಲಂಘಿಸಿದರೆ ನಗರಾಭಿವೃದ್ದಿ ಇಲಾಖೆಯ ಆದೇಶ ಅನುಸಾರ 100 ರೂ ರಿಂದ ಪ್ರತಿಟನ್‌ಗೆ 5 ಸಾವಿರ ರೂವರೆಗೆ ದಂಡ ವಿಧಿಸಲಾಗುವುದು. ಪುನರಾವರ್ತಿತವಾದರೆ ಅದಕ್ಕೂ ಹೆಚ್ಚು ದಂಡ ವಿಧಿಸಿ ಪರವಾನಗಿ ರದ್ದುಪಡಿಸಿ ಕಾನೂನಾತ್ಮಕ ಕ್ರಮಕೈಗೊಳ್ಳಲಾಗುವುದು ಎಂದು ಕೊಳ್ಳೇಗಾಲ ನಗರಸಭೆಯ ಆಡಳಿತಾಧಿಕಾರಿಗಳು ಮತ್ತು ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net