ವಿಜೃಂಭಣೆಯಿಂದ ಜರುಗಿದ ಸಿದ್ದಪ್ಪಾಜಿ ಕೊಂಡೋತ್ಸವ

14-KGLPHOTO-2,,,,
Published on

ಕೊಳ್ಳೇಗಾಲ: ಪಟ್ಟಣದ ಬಸ್ತೀಪುರ ಬಡಾವಣೆಯಲ್ಲಿ ಕುರುಬನಕಟ್ಟೆ ಶ್ರೀ ಸಿದ್ದಪ್ಪಾಜಿ ಕೊಂಡೋತ್ಸವ ಶುಕ್ರವಾರ ವಿಜೃಂಭಣೆಯಿಂದ ನಡೆಯಿತು.

ಬಡಾವಣೆಯ ಹೊರವಲಯದ ಶ್ರೀ ಶನೈಶ್ಚರ ದೇವಸ್ಥಾನದ ಬಳಿ ನೀಲಗಾರರು ಶ್ರೀ ಕುರುಬನಕಟ್ಟೆ ಕಂಡಾಯಗಳನ್ನು ಶುಚಿಗೊಳಿಸಿ ವಿವಿಧ ಹೂ, ಹೊಂಬಾಳೆಯಿಂದ ಅಲಂಕಾರ ಮಾಡಿ ಪೂಜೆ ಸಲ್ಲಿಸಿದರು. ಬಳಿಕ ನೀಲಗಾರರಾದ ಮಹಾಲಿಂಗ, ಗಂಗಮಲ್ಲ, ಗಿರೀಶ, ನಿಂಗರಾಜು, ರಾಜಣ್ಣ, ಕುಮಾರ್ ಅವರು ಕಂಡಾಯಗಳನ್ನು ಹೊತ್ತುಕೊಂಡು ಬಡಾವಣೆಯ ಶ್ರೀ ಸಿದ್ದಪ್ಪಾಜಿ ದೇವಾಲಯ ಆವರಣದಲ್ಲಿದ್ದ ಕೊಂಡದ ಮಾಳದ ಬಳಿಗೆ ಆಗಮಿಸಿದ್ದರು.

ಇದಕ್ಕೂ ಮುನ್ನ ಕೊಂಡಕ್ಕೆ ಶ್ರೀ ಕುರುಬನಕಟ್ಟೆ ಕ್ಷೇತ್ರದ ಪೀಠಾಧಿಪತಿ ವರುಣ ರಾಜೇ ಅರಸ್ ಪೂಜೆ ಸಲ್ಲಿಸಿದರು. ಬಳಿಕ ನೀಲಗಾರರು ಕೊಂಡ ಹಾಯ್ದು ಪವಾಡ ಮೆರೆದರು. ಈ ವೇಳೆ ಸ್ಥಳದಲ್ಲಿ ನೆರೆದಿದ್ದ ಭಕ್ತರು ಜೈಕಾರ ಮೊಳಗಿಸಿದರು. ಕಂಡಾಯಗಳು ಹಾಯ್ದ ಅಗ್ನಿ ಕೆಂಡದ ಭಸ್ಮವನ್ನು ಭಕ್ತರು ಹಣೆಗೆ ಹಚ್ಚಿಕೊಂಡು ಭಕ್ತಿ ಮೆರೆದರು.

ಬಸ್ತೀಪುರ ಬಡಾವಣೆಯ ಎಲ್ಲ ಬೀದಿಗಳಲ್ಲೂ ಕಂಡಾಯ ಮೆರವಣಿಗೆ ನಡೆಯಿತು. ಈ ವೇಳೆ ಮನೆಯ ಮುಂಭಾಗ ಬಂದ ಕಂಡಾಯಗಳಿಗೆ ಜನರು ಭಕ್ತಿ-ಭಾವದಿಂದ ಹೂ, ಹಣ್ಣು, ಕಾಯಿ ಪೂಜೆ ಸಮರ್ಪಿಸಿ ಭಕ್ತಿ ಮೆರೆದರು. ಹಬ್ಬದ ಹಿನ್ನೆಲೆಯಲ್ಲಿ ಇಡೀ ಗ್ರಾಮ ದೀಪಾಲಂಕಾರ ಹಾಗೂ ಹಸಿರು ತೋರಣಗಳಿಂದ ಸಿಂಗಾರಗೊಂಡಿತ್ತು. ಈ ವೇಳೆ ಕೊಳ್ಳೇಗಾಲ ಕ್ಷೇತ್ರದ ಶಾಸಕ ಎ.ಆರ್. ಕೃಷ್ಣಮೂರ್ತಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ತೋಟೇಶ್ ಅವರು ಬಡಾವಣೆಗೆ ಭೇಟಿ ನೀಡಿ ದೇವರ ದರ್ಶನ ಪಡೆದರು. ಗ್ರಾಮದ ಯಜಮಾನರು ಶಾಸಕರನ್ನು ಸನ್ಮಾನಿಸಿ ಗೌರವಿಸಿದರು.

ಸೌಹಾರ್ದಯುತ ಕೊಂಡೋತ್ಸವ: ಬಸ್ತೀಪುರ ಶ್ರೀ ಸಿದ್ದಪ್ಪಾಜಿ ಕೊಂಡೋತ್ಸವ ವಿವಿಧ ಕೋಮಿನ ಶಾಂತಿ, ಸಹಬಾಳ್ವೆಯನ್ನು ತೊರಿಸುತ್ತದೆ. ಹಿಂದಿನಿಂದಲೂ ಈ ಬಡಾವಣೆಯಲ್ಲಿ ವಿವಿಧ ಕೋಮಿನ ಜನರು ಒಗ್ಗಟ್ಟಾಗಿ ಕೊಂಡೋತ್ಸವ ಆಚರಿಸುತ್ತಿದ್ದಾರೆ. ಅಂತೆಯೇ, ಈ ಭಾರಿಯು ಅದ್ದೂರಿಯಾಗಿ ಶ್ರೀ ಸಿದ್ದಪ್ಪಾಜಿ ಕೊಂಡೋತ್ಸವ ನಡೆಯಿತು.

ಕೊಂಡೋತ್ಸವದಲ್ಲಿ ಜನಾಂಗದ ಯಜಮಾನರಾದ ಪುಟ್ಟಮಾದಯ್ಯ, ಸಿದ್ದರಾಜು, ಶಿವಕುಮಾರ್, ಟಿ.ನಂಜಯ್ಯ, ಸೋಮಣ್ಣ, ಮಾದೇಶ, ಮುದ್ದುಮಾದ, ಮಾದೇಶ, ಸಿದ್ದರಾಜು ಬತ್ತಯ್ಯ, ಮಹೇಶ, ನಾಯಕ ಜನಾಂಗದ ಯಜಮಾನರಾದ ಸಿದ್ದನಾಯಕ, ಗೋವಿಂದನಾಯಕ, ವೆಂಕಟೇಶ ನಾಯಕ, ಶಿವಕುಮಾರ್, ಬಸವರಾಜು ನಾಯಕ, ನಂಜನಾಯಕ, ಕುರುಬ ಜನಾಂಗದ ಯಜಮಾನರಾದ ಬೋಳೆಗೌಡ, ಲಿಂಗೇಗೌಡ, ಶಿವಣ್ಣೇಗೌಡ, ತಮ್ಮಯ್ಯಗೌಡ, ಪುಟ್ಟೇಗೌಡ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net