ಬಕ್ರೀದ್ ಹಬ್ಬದ ಪೂರ್ವಭಾವಿ ಸಭೆ

12-6-2024 KGL NEWS-1,,,,,,,,
Published on

ಕೊಳ್ಳೇಗಾಲ: ಮುಂಬುವರ ಬಕ್ರೀದ್ ಹಬ್ಬವನ್ನು ಮುಸಲ್ಮಾನರು ಶಾಂತಿ ಹಾಗೂ ಸೌಹಾರ್ದಯುತವಾಗಿ ಆಚರಣೆ ಮಾಡಬೇಕು ಎಂದು ಡಿವೈಎಸ್‌ಪಿ ಎಂ.ಧಮೇಂದ್ರ ಹೇಳಿದರು.

ಪಟ್ಟಣ ಪೊಲೀಸ್ ಠಾಣೆಯಲ್ಲಿ ಬುಧವಾರ ಬಕ್ರೀದ್ ಹಬ್ಬದ ಪ್ರಯುಕ್ತ ಆಯೋಜಿಸಿದ್ದ ಸರ್ವಧರ್ಮಗಳ ಶಾಂತಿ ಸಭೆಯಲ್ಲಿ ಅವರು ಮಾತನಾಡಿದರು.
ಬಕ್ರೀದ್ ಹಬ್ಬದಲ್ಲಿ ಮುಸಲ್ಮಾನ ಬಂಧುಗಳು ಸಾಮೂಹಿಕವಾಗಿ ಮೆರವಣಿಗೆ ಮೂಲಕ ಸಾಗಿ ಪ್ರಾರ್ಥನೆ ಮಾಡುವ ಸಂಪ್ರದಾಯವಿದೆ. ಈ ವೇಳೆ ಮುಸ್ಲಿಂ ಸಮುದಾಯ ಮುಖಂಡರು ಸ್ವಯಂಪ್ರೇರಿತವಾಗಿ ನಾಯಕತ್ವ ವಹಿಸಿಕೊಂಡು ಯಾವುದೇ ಅಹಿತಕರ ಘಟನೆಯಾಗದಂತೆ ನೋಡಿಕೊಳ್ಳಬೇಕು ಎಂದು ಸಲಹೆ ನೀಡಿದರು.


ಕೊಳ್ಳೇಗಾಲದಲ್ಲಿ ಎಲ್ಲ ಜನಾಂಗವು ಪರಸ್ಪರ ಶಾಂತಿ, ನೆಮ್ಮದಿ, ಸಹಬಾಳ್ವೆಯಿಂದ ಜೀವನ ನಡೆಸುತ್ತಿರುವುದು ಸಂತೋಷದ ವಿಚಾರ. ಹಬ್ಬದ ಸಮಯದಲ್ಲಿ ಬೈಕ್‌ನಲ್ಲಿ ತ್ರಿಬಲ್ ರೈಡಿಂಗ್ ಮಾಡಬಾರದು ಎಂದರು. ಈಗಾಗಲೇ ಪಟ್ಟಣದಲ್ಲಿ ತ್ರಿಬಲ್ ರೈಡಿಂಗ್ ಹಾಗೂ ಅಪ್ರಾಪ್ತರು ವಾಹನ ಚಾಲನೆಯ ಮೇಲೆ ಪೊಲೀಸ್ ಇಲಾಖೆ ನಿಗಾವಹಿಸಿದೆ. ನಿಯಮ ಬಾಹಿರವಾಗಿ ಯಾರೇ ನಡೆದುಕೊಂಡರು ಕ್ರಮ ಜರುಗಿಸಲಾಗುವುದು ಎಂದರು.

ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಡಾ.ರಾಜ್‌ಕುಮಾರ್ ರಸ್ತೆಗಳಲ್ಲಿ ಅಡ್ಡಾದಿಡ್ಡಿ ನಿಲ್ಲಿಸುವ ವಾಹನಗಳಿಂದ ಸಂಚಾರಕ್ಕೆ ತೊಂದರೆಯಾಗುತ್ತಿದೆ. ವ್ಯಾಪಾರಿಗಳು ಸಹ ತಳ್ಳು ಗಾಡಿಗಳನ್ನು ರಸ್ತೆಯಲ್ಲಿಯೇ ನಿಲ್ಲಿಸುವುದರಿಂದ ಸುಗಮ ಸಂಚಾರಕ್ಕೆ ತೊಡಕಾಗಿದೆ. ಈ ಬಗ್ಗೆ ವರ್ತಕರ ಸಭೆ ಕರೆದು ಕ್ರಮವಹಿಸುತ್ತೇವೆ ತಿಳಿಸಿದರು.

ಬಸ್ತೀಪುರ ಬಡಾವಣೆಯಲ್ಲಿ ಜೂ.13, 4 ರಂದು ನಡೆಯಲಿರುವ ಶ್ರೀ ಸಿದ್ದಪ್ಪಾಜಿ ಕೊಂಡೋತ್ಸವ ಕಾರ್ಯಕ್ರಮದಲ್ಲಿ ಬಡಾವಣೆಯ ವಿವಿಧ ಕೋಮಿನ ಮುಖಂಡರು ಕಾನೂನು ಸುವ್ಯವಸ್ಥೆಗೆ ಅಡಚಣೆಯಾಗದಂತೆ ಶಾಂತಿ-ಸೌಹಾರ್ದಯುತವಾಗಿ ನಡೆಸಿಕೊಂಡು ಹೋಗ ಬೇಕೆಂದು ಸಲಹೆ ನೀಡಿದರು.
ವೃತ್ತ ನಿರೀಕ್ಷಕ ಕೃಷ್ಣಪ್ಪ ಮಾತನಾಡಿ, ಪಟ್ಟಣದಲ್ಲಿ ಬೈಕ್ ವ್ಹಿಲೀಂಗ್ ಹೆಚ್ಚಾಗಿದೆ. ವ್ಹಿಲೀಂಗ್ ಮಾಡುವವರು ಸಿಕ್ಕರೆ ಮುಲಾಜಿಲ್ಲದೆ ಪ್ರಕರಣ ದಾಖಲಿಸುತ್ತೇವೆ. ಈಗಾಗಲೇ ಹಲವು ಪ್ರಕರಣಗಳನ್ನು ದಾಖಲಿಸಿದ್ದೇವೆ ಎಂದರು.

ಸಭೆಯಲ್ಲಿ ಮುಸ್ಲಿಂ ಮುಖಂಡರಾದ ಅಕ್ಮಲ್ ಪಾಷಾ, ರಫತ್ ಉಲ್ಲಾಖಾನ್, ಅಮಿದ್ ಉಲ್ಲಾ, ಸೈಯದ್ ಖಲೀಲ್, ಆಸೀಫ್ ಉಲ್ಲಾ, ದಲಿತ ಮುಖಂಡರಾದ ನಟರಾಜು ಮಾಳಿಗೆ, ಶಾಂತರಾಜು, ಹುಚ್ಚಪ್ಪ, ಪಾಪಣ್ಣ, ಬಿ.ಮಹದೇವ, ನಾಗರಾಜು, ಬಿ.ಬಸವಣ್ಣ, ಬಾಲರಾಜು, ಸೋಮಣ್ಣ, ನಾಯಕ ಜನಾಂಗದ ಶಂಕರ್, ಸುಂದರನಾಯಕ, ಬ್ರಾಹ್ಮಣ ಸಮಾಜದ ನರಸಿಂಹ, ಲಿಂಗಾಯತ ಸಮಾಜದ ಮುಖಂಡ ಬಸವರಾಜಪ್ಪ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net